×
Ad

ಗ್ರಾಮೀಣ ಪ್ರದೇಶಕ್ಕೆ ಸೋಂಕು ಹಬ್ಬದಂತೆ ತಡೆಗಟ್ಟಲು ಕ್ರಮ: ಮುಖ್ಯಮಂತ್ರಿ ಯಡಿಯೂರಪ್ಪ

Update: 2020-03-29 19:12 IST

ಬೆಂಗಳೂರು, ಮಾ. 29: ಮಾರಕ ಕೊರೋನ ವೈರಸ್ ಸೋಂಕು ಗ್ರಾಮೀಣ ಪ್ರದೇಶಕ್ಕೆ ಹರಡದಂತೆ ತಡೆಗಟ್ಟುವ ನಿಟ್ಟಿನಲ್ಲಿ ಜಿಲ್ಲಾ ಮತ್ತು ತಾಲೂಕು ಮಟ್ಟದಲ್ಲಿ ರಕ್ಷಣಾ ಸಾಧನಗಳನ್ನು ಒದಗಿಸಲು ಕೂಡಲೇ ಕ್ರಮ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಯಡಿಯೂರಪ್ಪ, ಸರ್ವಪಕ್ಷ ಸಭೆಯಲ್ಲಿ ಎಲ್ಲ ಪಕ್ಷಗಳ ಮುಖಂಡರಿಗೆ ಭರವಸೆ ನೀಡಿದ್ದಾರೆ.

ರವಿವಾರ ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ತಮ್ಮ ಅಧ್ಯಕ್ಷತೆಯಲ್ಲಿ ನಡೆದ ಸರ್ವಪಕ್ಷ ಸಭೆಯಲ್ಲಿ ಮಾತನಾಡಿದ ಅವರು, ಜಿಲ್ಲಾ ಹಾಗೂ ತಾಲೂಕು ಆಸ್ಪತ್ರೆಗಳಿಗೆ ಅಗತ್ಯ ಸಂಖ್ಯೆಯಲ್ಲಿ ಟೆಸ್ಟಿಂಗ್ ಕಿಟ್, ಪರೀಕ್ಷಾ ಸಾಧನಗಳನ್ನು ವಿತರಿಸಲು ಕ್ರಮ ಕೈಗೊಳ್ಳಲಾಗುವುದು. ಸರ್ವಪಕ್ಷ ಸಭೆಯಲ್ಲಿ ಮುಖಂಡರು ಹಲವು ಉಪಯುಕ್ತ ಸಲಹೆ ನೀಡಿದ್ದು, ಅವುಗಳನ್ನು ಸರಕಾರ ಗಂಭೀರವಾಗಿ ಪರಿಗಣಿಸಲಿದೆ ಎಂದು ತಿಳಿಸಿದರು.

ಸರ್ವಪಕ್ಷ ಸಭೆಯಲ್ಲಿನ ಮುಖಂಡರು ಸರಕಾರದ ಕ್ರಮಗಳಿಗೆ ಸಮ್ಮತಿಸಿದ್ದು, ಸಂಕಷ್ಟದ ಸನ್ನಿವೇಶದಲ್ಲಿ ಸರಕಾರದ ಜತೆ ಕೈಜೋಡಿಸಲು ಮುಂದೆ ಬಂದಿದ್ದಾರೆ. ಸೋಂಕಿತರಿಗೆ ಚಿಕಿತ್ಸೆ ನೀಡಿದ ವೈದ್ಯರು, ನರ್ಸ್ ಹಾಗೂ ಅರೇ ವೈದ್ಯಕೀಯ ಸಿಬ್ಬಂದಿಗೆ ಪಿಪಿಇ ಕಿಟ್ ಮಾಸ್ಕ್ ಹಾಗೂ ಸ್ಯಾನಿಟೈಸರ್ ಬಾಟಲಿ ಪೂರೈಕೆಗೆ ಕ್ರಮ ಕೈಗೊಳ್ಳಲಾಗುವುದು ಎಂದು ಬಿಎಸ್ ವೈ ಅಭಯ ನೀಡಿದರು.

ರಾಜ್ಯದ ವಿವಿಧ ಗಡಿಭಾಗದಲ್ಲಿ ಸಿಲುಕಿರುವ ರಾಜ್ಯದ ಜನರಿಗೆ ಕೂಡಲೇ ವೈದ್ಯಕೀಯ ತಪಾಸಣೆ ನಡೆಸಿ, ಅವರಿಗೆ ಆಶ್ರಯ ಕಲ್ಪಿಸಲು ವ್ಯವಸ್ಥೆ ಮಾಡಲಾಗುವುದು. ಕೊರೋನ ವೈರಸ್ ಸೋಂಕು ಪೀಡಿತ ಪ್ರಯಾಣಿಕರಿಗೆ ಕ್ವಾರಂಟೈನ್ ವ್ಯವಸ್ಥೆಗೆ ಒಳಪಡಿಸಲಾಗುವುದು. ಅಲ್ಲದೇ ಆರೋಗ್ಯವಾಗಿರುವ ಪ್ರಯಾಣಿಕರನ್ನು ಅವರ ಸ್ಥಳಗಳಿಗೆ ತಲುಪಿಸಲು ಸರಕಾರ ಕ್ರಮ ವಹಿಸಲಿದೆ ಎಂದು ಸ್ಪಷ್ಟಣೆ ನೀಡಿದರು.

ರೈತರ ಕೃಷಿ ಉತ್ಪನ್ನಗಳ ಸಾಗಾಣೆ ಮತ್ತು ಮಾರಾಟ ಹಾಗೂ ಬಳಕೆದಾರರಿಗೆ ಸೂಕ್ತ ಪೂರೈಕೆಗೆ ಸರಕಾರ ವ್ಯವಸ್ಥೆ ಕಲ್ಪಿಸಲಿದೆ. ಬಿತ್ತನೆ ಬೀಜ, ರಸಗೊಬ್ಬರ ಹಾಗೂ ಕೀಟನಾಶಕ ವಿತರಣೆಗೆ ಸೂಕ್ತ ವ್ಯವಸ್ಥೆ ಮಾಡಲಾಗುವುದು ಎಂದ ಅವರು, ಪಡಿತರವನ್ನು ಫಲಾನುಭವಿಗಳ ಮನೆ ಬಾಗಿಲಿಗೆ ತಲುಪಿಸಲು ವಿಪಕ್ಷ ನಾಯಕರು ನೀಡಿದ್ದು, ಈ ಬಗ್ಗೆ ಸರಕಾರ ಪರಿಶೀಲಿಸಲಿದೆ ಎಂದು ಹೇಳಿದರು.

ಸಭೆಯಲ್ಲಿ ವಿಪಕ್ಷ ನಾಯಕ ಸಿದ್ದರಾಮಯ್ಯ, ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಕುಮಾರಸ್ವಾಮಿ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಆರೋಗ್ಯ ಸಚಿವ ಬಿ.ಶ್ರೀರಾಮುಲು, ವೈದ್ಯಕೀಯ ಶಿಕ್ಷಣ ಸಚಿವ ಡಾ.ಸುಧಾಕರ್, ಸರಕಾರದ ಮುಖ್ಯ ಕಾರ್ಯದರ್ಶಿ ವಿಜಯ್ ಭಾಸ್ಕರ್ ಸೇರಿದಂತೆ ವಿವಿಧ ಇಲಾಖೆ ಹಿರಿಯ ಅಧಿಕಾರಿಗಳು ಸಭೆಯಲ್ಲಿ ಪಾಲ್ಗೊಂಡಿದ್ದರು...

ರಾಜ್ಯದಲ್ಲಿ ಮುಸ್ಲಿಮರ ಜತೆಗೆ ನಾನು ಸಭೆ ನಡೆಸಿದ್ದು, ಅವರೆಲ್ಲರೂ ತಮ್ಮ ತಮ್ಮ ಮನೆಗಳಲ್ಲೆ ಪ್ರಾರ್ಥನೆ ಸಲ್ಲಿಸಲು ಸಮ್ಮತಿಸಿದ್ದಾರೆ. ಈ ಸಂದರ್ಭದಲ್ಲಿ ನಾನು ಅವರಿಗೆ ಅಭಿನಂದನೆ ಸಲ್ಲಿಸುವೆ. ಕೊರೋನ ಸೋಂಕು ತಡೆಗಟ್ಟುವ ನಿಟ್ಟಿನಲ್ಲಿ ರಾಜ್ಯದ ಎಲ್ಲ ಜನರು ಸಹಕಾರ ನೀಡಬೇಕು.

-ಯಡಿಯೂರಪ್ಪ, ಮುಖ್ಯಮಂತ್ರಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News