ರಾಜ್ಯದಲ್ಲಿ 83 ಕೋವಿಡ್-19 ಪಾಸಿಟಿವ್ ಪ್ರಕರಣಗಳು ಕಂಡುಬಂದಿವೆ: ಬಿ.ಶ್ರೀರಾಮುಲು

Update: 2020-03-29 16:01 GMT

ಕೋಲಾರ: ರಾಜ್ಯದಲ್ಲಿ ಇದುವರೆಗೆ 83 ಕೋವಿಡ್-19 ಪಾಸಿಟಿವ್ ಪ್ರಕರಣಗಳು ಕಂಡುಬಂದಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಮತ್ತು ಹಿಂದುಳಿದ ವರ್ಗಗಳ ಸಚಿವರಾದ ಬಿ.ಶ್ರೀರಾಮುಲು ಅವರು ತಿಳಿಸಿದರು.

ಇಂದು ಜಿಲ್ಲಾದಿಕಾರಿಗಳ ಕಛೇರಿಯ ನ್ಯಾಯಾಂಗ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಕೋವಿಡ್ 19 ರ ನಿಯಂತ್ರಣ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ರಾಜ್ಯದಲ್ಲಿ ಇದುವರೆಗೆ 3,170 ಜನರ ಸ್ಯಾಪಲ್ ಅನ್ನು ಪರೀಕ್ಷೆ ಮಾಡಿದ್ದು ಇವರಲ್ಲಿ 83 ಜನರಿಗೆ ಪಾಸಿಟಿವ್ ಕಂಡುಬಂದಿದ್ದು ಇವರಲ್ಲಿ 3 ಜನ ಮರಣ ಹೊಂದಿದ್ದಾರೆ. 5 ಜನರು ಗುಣಮುಖರಾಗಿದ್ದಾರೆ. ಪರೀಕ್ಷಿಸಿದವಲ್ಲಿ 2874 ಜನರಿಗೆ ನಗೆಟಿವ್ ಬಂದಿದೆ ಎಂದು ಮಾಹಿತಿ ನೀಡಿದರು.

ಇಂದು ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ ಸರ್ವಪಕ್ಷಗಳ ಸಭೆ ನಡೆಸಿದ್ದು, ಎಲ್ಲಾ ಪಕ್ಷದವರೂ ಸರ್ಕಾರದ ನಿರ್ದಾರಗಳಿಗೆ ಬೆಂಬಲ ಸೂಚಿಸಿದ್ದಾರೆ. ಎಲ್ಲಾ ಆಸ್ಪತ್ರೆಗಳಲ್ಲೂ ಅಗತ್ಯ ಕೋವಿಡ್-19 ಬೆಡ್‍ಗಳು, ಐಸೋಲೇಷನ್ ಬೆಡ್‍ಗಳು ಹಾಗೂ ವೆಂಟಿಲೇಟರ್‍ಗಳು ಇರುವಂತೆ ವ್ಯವಸ್ಥೆ ಮಾಡಲಾಗಿದೆ. ಇನ್ನೂ ಮುಂದೆ ಹೆಚ್ಚಿನ ವೆಂಟಿಲೇಟರ್‍ಗಳ ಅಗತ್ಯ ಇದ್ದಲ್ಲಿ ಶಾಸಕರು ಹಾಗೂ ಸಂಸದರ ಅನುದಾನದಲ್ಲಿ ವೆಂಟಿಲೇಟರ್‍ಗಳ ವ್ಯವಸ್ಥೆ ಮಾಡಿಕೊಳ್ಳಲಾಗುವುದು ಎಂದು ತಿಳಿಸಿದರು.

ಮಂಗಳೂರಿನಿಂದ ಆಂದ್ರ ಪ್ರದೇಶಕ್ಕೆ ಹೋಗುತ್ತಿದ್ದ ಅಂದ್ರದ ಜನತೆಗೆ ಕೋಲಾರದ ಗಡಿ ಪ್ರದೇಶದಲ್ಲಿ ತಾತ್ಕಾಲಿಕ ವಸತಿ ವ್ಯವಸ್ಥೆಯನ್ನು ಜಿಲ್ಲಾಡಳಿತದಿಂದ ಕಲ್ಪಿಸಲಾಗಿತ್ತು. ಆಂದ್ರ ಸರ್ಕಾರದ ಜೊತೆ ಮಾತನಾಡಿದ್ದು ಇಂದು ಸಂಜೆ ಅವರನ್ನು ಕಳುಹಿಸಿಕೊಡಲಾಗುವುದು. ಹಾಗೆಯೇ ಬೇರೆ ರಾಜ್ಯಗಳಲ್ಲಿ ಇರುವ ರಾಜ್ಯದ ಪ್ರಜೆಗಳನ್ನು ಪರೀಕ್ಷಿಸಿ ಕರೆದುಕೊಂಡು ಕ್ವಾರಂಟೇನ್‍ನಲ್ಲಿ ಇಡಲಾಗುವುದು ಎಂದರು.

ಜಿಲ್ಲಾಧಿಕಾರಿ. ಸಿ. ಸತ್ಯಭಾಮ ಅವರು ಮಾತನಾಡಿ, ಜಿಲ್ಲೆಯಲ್ಲಿ ಇದುವರೆಗೂ ಯಾವುದೇ ಪಾಸಿಟಿವ್ ಪ್ರಕರಣ ಕಂಡುಬಂದಿಲ್ಲ. ಜಿಲ್ಲೆಯಲ್ಲಿ 10.570 ಎನ್-95 ಮಾಸ್ಕ್, 19,700 ಟ್ರಿಪಲ್ ಲೇಯರ್ ಮಾಸ್ಕ್, 139 ಸ್ಯಾನಿಟೈಸರ್ ಬಾಟಲ್‍ಗಳು, 64 ಐ.ಸಿ.ಯು ಬೆಡ್‍ಗಳು, 62 ವೆಂಟಿಲೇಟರ್‍ಗಳು ಹಾಗೂ 450 ಕೋವಿಡ್ -19 ಬೆಡ್‍ಗಳ ವ್ಯವಸ್ಥೆ ಮಾಡಿಕೊಳ್ಳಲಾಗಿದೆ. ಜಿಲ್ಲೆಯಲ್ಲಿ ಇದುವರೆಗೂ 167 ಜನರನ್ನು ಹೊಮ್ ಕ್ವಾರಂಟೇನ್‍ನಲ್ಲಿ ಇಡಲಾಗಿದ್ದು, ಇವರೊಂದಿಗೆ ಇದ್ದ ಪ್ರೈಮರಿ ಸಂಪರ್ಕ ಮತ್ತು ಸೆಂಕಡರಿ ಸಂಪರ್ಕ ಇದ್ದವರನ್ನು ಪಟ್ಟಿ ಮಾಡಲಾಗುತ್ತಿದೆ. ಇವರಲ್ಲಿ ಯಾರಿಗಾದರೂ ಪಾಸಿಟಿವ್ ಕಂಡುಬಂದರೆ ತಕ್ಷಣ ಇವರ ಸಂಪರ್ಕದವರನ್ನು ಕ್ವಾರಂಟೇನ್‍ನಲ್ಲಿ ಇಡಲು ಇದು ಅನುಕೂಲವಾಗುತ್ತದೆ. ಜಿಲ್ಲೆಯಲ್ಲಿ ಎಸ್.ಎನ್.ಆರ್ ಆಸ್ಪತ್ರೆ, ಜಾಲಪ್ಪ ಆಸ್ಪತ್ರೆ ಹಾಗೂ ಸಂಭ್ರಮ ಆಸ್ಪತೆಗಳನ್ನು ಕೋವಿಡ್-19 ಆಸ್ಪತ್ರೆಗಳಾಗಿ ಮೀಸಲಿಡಲಾಗಿದೆ ಎಂದು ಮಾಹಿತಿ ನೀಡಿದರು.

ಸಭೆಯಲ್ಲಿ ಅಬಕಾರಿ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಹೆಚ್.ನಾಗೇಶ್, ಸಂಸದ ಎಸ್.ಮುನಿಸ್ವಾಮಿ, ಕೋಲಾರ ವಿಧಾನಸಭಾ ಕ್ಷೇತ್ರದ ಶಾಸಕ ಕೆ.ಶ್ರೀನಿವಾಸಗೌಡ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಹೆಚ್.ವಿ ದರ್ಶನ್, ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಕಾರ್ತಿಕ್ ರೆಡ್ಡಿ,  ಕೆ.ಜಿ.ಎಫ್ ಪೊಲೀಸ್ ವರಿಷ್ಟಾಧಿಕಾರಿ ಮಹಮದ್ ಸುಜೀತಾ, ಅಪರ ಜಿಲ್ಲಾಧಿಕಾರಿ ಶಿವಸ್ವಾಮಿ, ಉಪವಿಭಾಗಾಧಿಕಾರಿ ಸೋಮಶೇಖರ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ವಿಜಯ್ ಕುಮಾರ್, ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ.ನಾರಾಯಣಸ್ವಾಮಿ, ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ. ಚಾರಣಿ ಸೇರಿದಂತೆ ಆರೋಗ್ಯ ಇಲಾಖೆಯ ಸಿಬ್ಬಂಧಿಗಳು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News