×
Ad

ಕೊರೋನ ವೈರಸ್: ಮೂರನೇ ಹಂತದ ಹೋರಾಟಕ್ಕೆ ಸಜ್ಜಾಗಿ; ಡಿಸಿಎಂ ಕಾರಜೋಳ

Update: 2020-03-29 21:57 IST

ಕಲಬುರಗಿ: ಕೊರೋನ ಸೋಂಕು ನಿಗ್ರಹದಲ್ಲಿರುವ ಎಲ್ಲಾ ಅಧಿಕಾರಿಗಳು ಮತ್ತು ವೈದ್ಯ ಸಿಬ್ಬಂದಿಗಳು ಮುಂದಿನ ಕೊರೋನಾ ಮೂರನೇ ಹಂತದ ಹೋರಾಟವನ್ನು ಸಮರ್ಥವಾಗಿ ಎದುರಿಸಲು ನಾವೆಲ್ಲ ಸಜ್ಜಾಗಬೇಕಿದೆ ಎಂದು ಉಪಮುಖ್ಯಮಂತ್ರಿ, ಸಮಾಜ ಕಲ್ಯಾಣ ಮತ್ತು ಲೋಕೋಪಯೋಗಿ ಹಾಗೂ ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವ ಗೋವಿಂದ ಎಂ. ಕಾರಜೋಳ ಅವರು ಹೇಳಿದರು.

ರವಿವಾರ ಇಲ್ಲಿನ ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ಕೊರೋನ ಸೊಂಕು ತಡೆಗಟ್ಟುವ ನಿಟ್ಟಿನಲ್ಲಿ ಜಿಲ್ಲಾಡಳಿತ ಕೈಗೊಂಡ ಪೂರ್ವಸಿದ್ಧತೆಗಳ ಕುರಿತು ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಅವರು ಇದೂವರೆಗೆ ಕೈಗೊಂಡ ಮುಂಜಾಗ್ರತೆ ಕ್ರಮಗಳು ಮತ್ತು ಸ್ಥಿತಿಗತಿ ಕುರಿತು ಪ್ರಗತಿ ಪರಿಶೀಲನೆ ಮಾಡಿದರು.

ಇದಕ್ಕೆ ಪೂರಕವಾಗಿ ಜಿಲ್ಲೆಗೆ ಬೇಕಾಗಿರುವ ವೈದ್ಯರು, ಪ್ಯಾರಾ ಮೆಡಿಕಲ್ ಸಿಬ್ಬಂದಿ, ವೈದ್ಯಕೀಯ ಉಪಕರಣಗಳು, ಮೆಡಿಸಿನ್‌ಗಳ ಬಗ್ಗೆ ಪಟ್ಟಿ ಮಾಡಿ ಬೆಂಗಳೂರಿನಲ್ಲಿ ಸ್ಥಾಪಿಸಿರುವ ಕೊರೋನಾ ವಾರ್ ರೂಂಗೆ ಕಳುಹಿಸಿದಲ್ಲಿ ಸರಬರಾಜಿಗೆ ಕ್ರಮ ವಹಿಸಲಾಗುತ್ತದೆ. ವಾರ್ ರೂಂನಲ್ಲಿ ಖುದ್ದು ವೈದ್ಯಕೀಯ ಶಿಕ್ಷಣ ಸಚಿವ ಕೆ.ಸುಧಾಕರ್ ಅವರು ಇದರ ಮೇಲ್ವಿಚಾರಣೆ ಮಾಡುತ್ತಿದ್ದಾರೆ ಎಂದರು.

ಕಲಬುರಗಿ ಜಿಲ್ಲೆಯಲ್ಲಿ ಪ್ರಸ್ತುತ 40 ವೆಂಟಿಲೇಟರ್‌ಗಳಿದ್ದು, ಇದು ಸಾಕಾಗುವುದಿಲ್ಲ. ಜಿಲ್ಲೆಯಲ್ಲಿ ಇಂತಹ 100 ವೆಂಟಿಲೇಟರ್ ಖರೀದಿಸಬೇಕು ಎಂದು ಡಿ.ಸಿ. ಶರತ್ ಬಿ. ಅವರಿಗೆ ಡಿ.ಸಿ.ಎಂ ನಿರ್ದೇಶನ ನೀಡಿದರು.

ಕೊರೋನಾ ತಡೆಗಟ್ಟುವ ನಿಟ್ಟಿನಲ್ಲಿ ಆರೋಗ್ಯ ಇಲಾಖೆಯ ಅಧಿಕಾರಿ-ಸಿಬ್ಬಂದಿಗಳು ೨೪ ಗಂಟೆಗಳ ಕಾಲ ಕಾರ್ಯನಿರ್ವಹಿಸಬೇಕು. ಅದೇ ರೀತಿ ಗ್ರಾಮಗಳಲ್ಲಿ ಪಿ.ಡಿ.ಒ.ಗಳು ಕೇಂದ್ರಸ್ಥಾನದಲ್ಲಿದ್ದು, ಸೇವೆಗೆ ಸದಾ ಸಿದ್ಧರಿರಬೇಕು ಎಂದರು.

144 ನಿಷೇಧಾಜ್ಞೆ ಉಲ್ಲಂಘಿಸಿ ಪುಂಡಾಟಿಕೆ ಮಾಡುವವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು. ಇದಲ್ಲದೆ ಕೆ.ಎಸ್.ಆರ್.ಪಿ ಹಾಗೂ ಪೊಲೀಸ್ ತುಕಡಿಗಳಿಂದ ಕಲಬುರಗಿ ನಗರ ಸೇರಿದಂತೆ ಜಿಲ್ಲೆಯಾದ್ಯಂತ ಪಥಸಂಚಲನ ಮಾಡಿಸಬೇಕು ಎಂದು ಎಸ್.ಪಿ ಯಡಾ ಮಾರ್ಟಿನ್ ಮಾರ್ಬ್‌ನ್ಯಾಂಗ್ ಮತ್ತು ನಗರ ಪೊಲೀಸ್ ಆಯುಕ್ತಾಲಯದ ಡಿ.ಸಿ.ಪಿ. ಕಿಶೋರ ಬಾಬು ಅವರಿಗೆ ಡಿ.ಸಿ.ಎಂ ಗೋವಿಂದ ಕಾರಜೋಳ ಅವರು ನಿರ್ದೇಶನ ನೀಡಿದರು.

ಕ್ಲಬ್ ಲೈಸೆನ್ಸ್ ರದ್ದುಗೊಳಿಸಿ: ನಿಷೇಧಾಜ್ಞೆ ಹಿನ್ನೆಲೆಯಲ್ಲಿ ಯಾವುದೇ ಕ್ಲಬ್‌ಗಳು ತೆರೆಯುವಂತಿಲ್ಲ. ತೆರೆದಲ್ಲಿ ಕೂಡಲೇ ಅವುಗಳ ಲೈಸೆನ್ಸ್ ರದ್ದುಗೊಳಿಸುವುದಲ್ಲದೆ ಕೇಸ್ ದಾಖಲಿಸಿ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಎಸ್.ಪಿ.ಗೆ ಉಪಮುಖ್ಯಮಂತ್ರಿ ಸೂಚನೆ ಕೊಟ್ಟರು.

ಗೃಹ ಬಂಧನದಲ್ಲಿರುವವರ ಮನೆಗೆ ಚೀಟಿ ಅಂಟಿಸಿ: ವಿದೇಶದಿಮದ ಬಂದ ಅಥವಾ ಕೊರೋನಾ ಸೋಂಕಿತರ ನೇರ ಸಂಪರ್ಕದಲ್ಲಿ ಬಂದಂತಹ ವ್ಯಕ್ತಿಗಳಿಗೆ ಗೃಹ ಬಂಧನದಲ್ಲಿರಲು ಸೂಚಿಸಲಾಗುತ್ತಿದೆ. ಇಂತಹ ವ್ಯಕ್ತಿ ಮನೆಗೆ ಹೋಂ ಕ್ವಾರಂಟೈನ್ ಕುರಿತು ಚೀಟಿ ಅಂಟಿಸಬೇಕು ಎಂದು ಡಿ.ಸಿ.ಎಂ. ಅಧಿಕಾರಿಗಳಿಗೆ ಸಲಹೆ ನೀಡಿದರು.

ಜಿಲ್ಲಾಧಿಕಾರಿ ಶರತ್ ಬಿ. ಮಾತನಾಡಿ ಮೃತ ವ್ಯಕ್ತಿ ಸೇರಿದಂತೆ ಇದೂವರೆಗೆ ಜಿಲ್ಲೆಯಲ್ಲಿ ಕೋವಿಡ್-೧೯ ಮೂರು ಪಾಸಿಟಿವ್ ಪ್ರಕರಣಗಳು ವರದಿಯಾಗಿವೆ.  ಪಾಸಿಟಿವ್ ವ್ಯಕ್ತಿಯೊಂದಿಗೆ ನೇರ ಸಂಪರ್ಕದಲ್ಲಿ ಬಂದ 99 ಜನರನ್ನು ಪ್ರೈಮೇರಿ ಕಾಂಟ್ಯಾಕ್ಟ್ ಮತ್ತು 388 ಜನರನ್ನು ಸೆಕೆಂಡರಿ ಕಾಂಟ್ಯಾಕ್ಟ್ ಎಂದು ಗುರುತಿಸಿ ನಿಗಾ ಇಡಲಾಗಿದೆ. ಕಳೆದ ಒಂದು ತಿಂಗಳಿನಲ್ಲಿ ೬೮೧ ಜನ ವಿದೇಶದಿಂದ ಬಂದಿದ್ದು ಅವರೆಲ್ಲರನ್ನು ಗೃಹ ಬಂಧನದಲ್ಲಿರಿಸಲಾಗಿದೆ. 517 ಜನ ಗೃಹ ಬಂಧನ ಅವಧಿ ಮುಗಿಸಿದ್ದಾರೆ. ಉಳಿದಂತೆ 29 ವ್ಯಕ್ತಿಗಳನ್ನು ಐಸೋಲೇಷನ್ ವಾರ್ಡ್‌ನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದರು.

ಸಭೆಯಲ್ಲಿ ಲೋಕಸಭಾ ಸದಸ್ಯ ಡಾ.ಉಮೇಶ ಜಾಧವ, ಶಾಸಕರಾದ ದತ್ತಾತ್ರೇಯ ಪಾಟೀಲ ರೇವೂರ, ಸುಭಾಷ ಗುತ್ತೇದಾರ, ಬಸವರಾಜ ಮತ್ತಿಮೂಡ, ಡಾ.ಅವಿನಾಶ ಜಾಧವ, ಜಿಲ್ಲಾ ಪಂಚಾಯತ್ ಸಿ.ಇ.ಓ ಡಾ.ಪಿ.ರಾಜಾ, ಜಿಲ್ಲಾ ಅರೋಗ್ಯ ಮತು ಕುಟುಂಬ ಕಲ್ಯಾಣಾಧಿಕಾರಿ ಡಾ.ಎಂ.ಎ.ಜಬ್ಬಾರ್, ಕಲಬುರಗಿ ಜಿಮ್ಸ್ ಡೀನ್ ಡಾ.ಕವಿತಾ ಪಾಟೀಲ, ವೈದ್ಯಕೀಯ ಅಧೀಕ್ಷಕ ಡಾ.ಮಹಮ್ಮದ್ ಶಫಿಯುದ್ದಿನ್, ಇ.ಎಸ್.ಐ.ಸಿ. ಮೆಡಿಕಲ್ ಕಾಲೇಜಿನ ಡೀನ್ ಡಾ.ಎ.ಎಲ್.ನಾಗರಾಜ್, ಜಿಲ್ಲಾ ಆಸ್ಪತ್ರೆಯ ಶಸ್ತ್ರಜ್ಞ ಡಾ.ಅಂಬರಾಯ ರುದ್ರವಾಡಿ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಇದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News