ಕೊರೋನ ತಡೆಗಟ್ಟುವ ಭರದಲ್ಲಿ ಕೇಂದ್ರ, ರಾಜ್ಯ ಸರ್ಕಾರಗಳು ಅಜ್ಞಾನಿಗಳಂತೆ ವರ್ತಿಸುತ್ತಿವೆ: ಜ್ಞಾನಪ್ರಕಾಶ್ ಸ್ವಾಮೀಜಿ

Update: 2020-03-29 17:19 GMT

ಮೈಸೂರು, ಮಾ. 29:  ಕೊರೋನ ತಡೆಗಟ್ಟುವ ಭರದಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಜನರನ್ನು ಭಯಭೀತರನ್ನಾಗಿಸುವ ಮೂಲಕ ಅಜ್ಞಾನಿಗಳಂತೆ ವರ್ತಿಸುತ್ತಿವೆ ಎಂದು ಮೈಸೂರಿನ ಗಾಂಧಿನಗರದ ಉರಿಲಿಂಗಿ ಪೆದ್ದಿಮಠದ ಜ್ಞಾನಪ್ರಕಾಶ್ ಸ್ವಾಮೀಜಿ ಬೇಸರ ವ್ಯಕ್ತಪಡಿಸಿದ್ದಾರೆ.

ಈ ಸಂಬಂಧ ರವಿವಾರ ವಾಟ್ಸ್ಆ್ಯಪ್ ಮೂಲಕ  ಮಾತನಾಡಿರುವ ಅವರು ಕೇಂದ್ರ ಮತ್ತು  ರಾಜ್ಯ ಸರ್ಕಾರಗಳು ಬಡವರ ಬದುಕನ್ನು ಅರ್ಥ ಮಾಡಿಕೊಂಡು ಕೊರೋನ ತಡೆಗಟ್ಟಲು ಮುಂದಾಗುವ ಬದಲು ವಿಜ್ಞಾನ ಬಹಳ ಎತ್ತರಕ್ಕೆ ಬೆಳೆದಿರುವ ಸಂದರ್ಭದಲ್ಲಿ  ಅಜ್ಞಾನ ತುಂಬುವಂತ ಕೆಲಸ ಮಾಡಬಾರದು ಎಂದು ಹೇಳಿದರು.

ಯಾವುದೇ ಸೂಕ್ಷ್ಮಾಣು ಜೀವಿ ನಮ್ಮ ದೇಹ ಸೇರದೆ ಇರಬೇಕೆಂದರೆ ಅಂತರ ಕಾಪಾಡಿಕೊಳ್ಳಬೇಕು. ನಾವು ಯಾರ ಜೊತೆ ಮಾತನಾಡ ಬೇಕಾದರು ದೂರ ನಿಂತು ಮಾತನಾಡಬೇಕು, ಯಾವುದೇ ವಸ್ತು ಗಳನ್ನು ಮುಟ್ಟಿದರೆ ಕೈ ಚೆನ್ನಾಗಿ ತೊಳೆಯಬೇಕು ಜೊತೆಗೆ ಒಳ್ಳೆ ಆಹಾರ ಪದಾರ್ಥಗಳನ್ನು ಸೇವಿಸಿ, ಶೀತದಿಂದ ದೂರ ಇರಬೇಕು‌. ಆದರೆ ನಮ್ಮನ್ನಾಳುತ್ತಿರುವವರು ಯಾವುದ್ಯಾವುದೂ ವಿಚಾರಗಳನ್ನು ಹೇಳದೆ ಬೇಡದೇ ಇರುವುದನ್ನೆಲ್ಲ ಹೇಳಿ ಜನರ ಮನಸ್ಸಿನಲ್ಲಿ ಭಯ ಬಿತ್ತುವ ಕೆಲಸವನ್ನು ಮಾಡುತಿದ್ದಾರೆ ಎಂದು ಕಿಡಿಕಾರಿದರು.

ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಆದೇಶನ್ನು ಪಾಲಿಸುವುದು ನಮ್ಮ ಕರ್ತವ್ಯ, ಈ ಹಿಂದೆಯೂ ಹಲವಾರು ಮಾರಕ ಕಾಯಿಲೆಗಳಿಗೆ ತುತ್ತಾಗಿದ್ದಾಗ  ದೇಶ  ಜರ್ಜರಿತವಾಗಿರಲಿಲ್ಲ, ಎಲ್ಲಾ ಕಾಯಿಲೆಗಳಿಗೂ ಔಷಧ ಇದ್ದೇ ಇದೆ. ಎಲ್ಲದಕ್ಕೂ ಒಂದು ಪರಿಹಾರ ಸಿಕ್ಕೇ ಸಿಗಲಿದೆ ಎಂದು ಹೇಳಿದರು.

ಕೊರೋನ ವೈರಸ್ ಗೆ ಇಡೀ ಜಗತ್ತೆ ಬೆಚ್ಚಿಬೆರಗಾಗಿದೆ. ಇಂತಹ ಸಂದರ್ಭದಲ್ಲಿ ಭಾರತ ದೇಶದ ಭಾರತೀಯರಾದ ನಾವು ಧರ್ಮಾತೀತವಾಗಿ, ಜಾತ್ಯಾತೀತವಾಗಿ, ವರ್ಣಾತೀತವಾಗಿ ಮತ್ತು  ಪಕ್ಷಾತೀತವಾಗಿ ಈ ಸೂಕ್ಷ್ಮಾಣು ವಿರುದ್ಧ ಹೋರಾಟ ಮಾಡಬೇಕಿದೆ ಎಂದರು.

ಈ ನಡುವೆ ನಮ್ಮ ಜೊತೆಯಲ್ಲೇ ಇರುವ ಕೂಲಿಕಾರ್ಮಿಕರು ಕಟ್ಟಡ ಕಾರ್ಮಿಕರು, ಎಪಿಎಂಸಿ, ಕೆಲಸಗಾರರು, ಗಾರೆ ಕೆಲಸಗಾರರು, ಆಟೋ ಓಡಿಸುವವರ ಬದುಕು ಮೂರಾಬಟ್ಟೆಯಾಗಿದೆ. ಹಾಗಾಗಿ ಸರ್ಕಾರಗಳು ಇವರುಗಳ ನೆರವಿಗೆ ನಿಲ್ಲಬೇಕಾದ ಅನಿವಾರ್ಯತೆ ತೀರ ಅತ್ಯವಶಕವಾಗಿದೆ ಎಂದು ಹೇಳಿದರು.

ಚುನಾವಣೆ ಸಮಯದಲ್ಲಿ ಜನರ ಬಳಿಗೆ ಬಂದು ಕೋಟ್ಯಾಂತರ ರೂ. ಕರ್ಚು ಮಾಡುವ ರಾಜಕಾರಣಿಗಳು ಬೀದಿಗೆ ಬಂದು ಬಡವರು ನಿರ್ಗತಿಕರು ಕೂಲಿಕಾರರಿಗೆ ನೆರವಾಗಬೇಕಿದೆ.  ಮಂತ್ರಿಗಳು, ಶಾಸಕರುಗಳು, ಕಾರ್ಪೋರೇಟರ್ ಗಳು ಅವರವರ ಕ್ಷೇತ್ರ ಮತ್ತು ವಾಡ್ ೯ ಗಳಲ್ಲಿರುವ ಬಡವರು, ನಿರ್ಗತಿಕರು, ಕೂಲಿಕಾರ್ಮಿ ಕರು, ದಿನದೂಡಿ ಬದುಕು ನಡೆಸುತ್ತಿರುವ ಜನರನ್ನು  ಗುರುತಿಸಿ ಪಟ್ಟಿ ಮಾಡಿ ಅವರ ಹಸಿವನ್ನು ತುಂಬಿಸು ಕೆಲಸ ಮಾಡಬೇಕು. ಇಲ್ಲದಿದ್ದರೆ ಮತ್ತೊಂದು ಕೊರೋನಗಿಂತಲು ಭಯಂಕರವಾದ ಹಸಿವಿನಿಂದ ಸಾಯುವ ಕಾಯಿಲೆ ಉಂಟಾಗಬಹುದು ಎಂದು ಆತಂಕ ವ್ಯಕ್ತಪಡಿಸಿದರು.

ಕೇಂದ್ರ ಸರ್ಕಾರ ಕೊರೋನ ಎಂಬ ಕಾಯಿಲೆ ಉದ್ಬವವಾದ ಕೂಡಲೇ ವಿಮಾನಯಾನ ಬಂದ್ ಮಾಡಬೇಕಿತ್ತು, ಯಾರು ವಿಮಾನದಲ್ಲಿ ಸುತ್ತಾಡುತಿದ್ದರೋ ಅಂತಹವರನ್ನು ದೇಶದೊಳಗೆ ಬಿಟ್ಟುಕೊಳ್ಳುವ ಮೊದಲು ಅವರುಗಳನ್ನು ಪರೀಕ್ಷಿಸಿ ನಂತರ  ಒಳಬಿಡಬೇಕಿತ್ತು. ಅದನ್ನು ಮಾಡದೆ ಇಂದು ಪ್ರತಿಯೊಬ್ಬ ದೇಶವಾಸಿಗಳನ್ನು ಸಂಕಷ್ಟಕ್ಕೆ ಸಿಲುಕಿಸಿದೆ. ಇಂತಹ ಸಂದರ್ಭ ದಲ್ಲಿ ಸರ್ಕಾರ, ಸ್ಥಳೀಯ ಸಂಸ್ಥೆಗಳು, ಜನಪ್ರತಿನಿಧಿಗಳು, ಖಾಸಗೀ ಸಂಸ್ಥೆಗಳು ಸೇರಿದಂತೆ ಎಲ್ಲರೂ ಒಂದಾಗಿ ಸರ್ಕಾರದ ನಿಯಮವನ್ನು ಪಾಲಿಸಿ ಕೊರೋನ ವಿರುದ್ಧ ಗೆಲುವು ಸಾಧಿಸಬೇಕಿದೆ ಎಂದರು.

ನಮ್ಮ ರಾಜ್ಯದ ಮುಖ್ಯಮಂತ್ರಿಗಳು ಘೋಷಣೆ ಮಾಡಿರುವ ಹಣ ಏನೇನು ಸಾಲದು, ನಮ್ಮ ಪಕ್ಕದ ರಾಜ್ಯ ಕೇರಳ ಚಿಕ್ಕರಾಜ್ಯವಾದರೂ ಅಲ್ಲಿನ  ಮುಖ್ಯಮಂತ್ರಿಗಳು ದೊಡ್ಡ ಮಟ್ಟದ ಹಣವನ್ನು ಮೀಸಲಿಟ್ಟಿದ್ದಾರೆ, ಆ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಕೂಡ ಮುಂದಾಗಬೇಕಿದೆ ಎಂದು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News