ಕೊಡಗಿನ ಕೊರೋನಾ ಸೋಂಕಿತ ಗುಣಮುಖರಾಗುತ್ತಿದ್ದಾರೆ: ಜಿಲ್ಲಾಧಿಕಾರಿ ಮಾಹಿತಿ

Update: 2020-03-29 17:58 GMT

ಮಡಿಕೇರಿ,ಮಾ.29: ಜಿಲ್ಲಾಸ್ಪತ್ರೆಯಲ್ಲಿ ದಾಖಲಾಗಿದ್ದ ಕೊರೋನ ಸೋಂಕು ಪೀಡಿತ ವ್ಯಕ್ತಿ ಈಗ ಗುಣಮುಖರಾಗುತ್ತಿದ್ದಾರೆ. ಪ್ರಸ್ತುತ ಮಡಿಕೇರಿ ಆಸ್ಪತ್ರೆಯಲ್ಲಿ ಮೂವರು ದಾಖಲಾಗಿದ್ದು, ಒಟ್ಟು 45 ಮಂದಿಯ ವೈದ್ಯಕೀಯ ತಪಾಸಣಾ ವರದಿ ನೆಗೆಟಿವ್ ಬಂದಿದೆ. ವಿದೇಶದಿಂದ ಕೊಡಗಿಗೆ ಮರಳಿದ ಒಟ್ಟು 365 ಮಂದಿಗೆ ಸಂಪರ್ಕ ತಡೆ ವಿಧಿಸಲಾಗಿದ್ದು, ಅವರುಗಳ ಮೇಲೆ ಆರೋಗ್ಯ ಇಲಾಖೆ ನಿಗಾವಹಿಸಿದೆ. ನಿಯಮ ಉಲ್ಲಂಘಿಸಿದ 10 ಮಂದಿ ವಿರುದ್ಧ ಕೇಸ್ ದಾಖಲಿಸಲಾಗಿದೆ ಎಂದು ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಮಾಹಿತಿ ನೀಡಿದರು.

ಪೌರ ಕಾರ್ಮಿಕರಂತೆ ವಲಸೆ ಕಾರ್ಮಿಕರಿಗೆ ದಿನ ನಿತ್ಯ ತಯಾರಿಸಿದ ಆಹಾರ ನೀಡಲು ಖಾಸಗಿ ಸಹಭಾಗಿತ್ವ  ಮೂಲಕ ಕ್ರಮವಹಿಸಲಾಗುತ್ತದೆ. ಪೊಲೀಸ್ ಇಲಾಖೆ ಮೂಲಕ ಕೊಡಗು ನೆಟ್ ಸ್ಮಾರ್ಟ್ ಮೂಲಕ  ದಿನಸಿ ವಿತರಣೆಗೆ ಕ್ರಮವಹಿಸಲಾಗುತ್ತದೆ.

ಮಡಿಕೇರಿ, ಸೋಮವಾರಪೇಟೆ, ವೀರಾಜಪೇಟೆ, ಗೋಣಿಕೊಪ್ಪ, ಕುಶಾಲನಗರದಲ್ಲಿ ಹೆಚ್ಚುವರಿ ದಿನಸಿಯನ್ನು ಅಗತ್ಯ ಉಳ್ಳವರಿಗೆ ನೀಡಲು ಕೆಲವು ಆಯ್ದ ಸ್ಥಳದಲ್ಲಿ ದೊಡ್ಡ ಬಾಕ್ಸ್ ಇಡಲಾಗುತ್ತದೆ. ಇದರಿಂದ ಸಾಧ್ಯ ಇದ್ದವರಿಗೆ ದಿನಸಿ ಕೊಡುಗೆಯಾಗಿ ನೀಡಲು ನೆರವಾಗಲಿದೆ ಎಂದರು.
 ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಆರೋಗ್ಯಾಧಿಕಾರಿ ಡಾ. ಮೋಹನ್, ಕೊಡಗು  ವೈದ್ಯಕೀಯ ಕಾಲೇಜು ಡೀನ್ ಡಾ. ಕಾರ್ಯಪ್ಪ ಹಾಜರಿದ್ದು, ಜಿಲ್ಲಾಡಳಿತದೊಂದಿಗೆ ಕೊಡಗಿನ ಜನತೆ ಸಹಕರಿಸುವಂತೆ ಮನವಿ ಮಾಡಿದರು.

ಗಡಿ ಭಾಗಗಳಲ್ಲಿ ಚೆಕ್ ಪೋಸ್ಟ್: ಕೊಡಗು ಜಿಲ್ಲೆಗೆ ಸಂಪರ್ಕ ಕಲ್ಪಿಸುವ ಕೇರಳ ರಾಜ್ಯದ ಗಡಿ ಪ್ರದೇಶಗಳಾದ ಕರಿಕೆ, ಮಾಕುಟ್ಟ ಮತ್ತು ಕುಟ್ಟ ಚೆಕ್ ಪೋಸ್ಟ್ ಗಳನ್ನು ಸಂಪೂರ್ಣವಾಗಿ ಬಂದ್ ಮಾಡಲಾಗಿದ್ದು, ಕೇರಳ ರಾಜ್ಯದಿಂದ  ಜಿಲ್ಲೆಯೊಳಗೆ ಮತ್ತು ಜಿಲ್ಲೆಯಿಂದ ಕೇರಳ ರಾಜ್ಯದೊಳಗೆ ಬರುವ ಎಲ್ಲಾ ವಾಹನ ಸಂಚಾರವನ್ನು ಕಟ್ಟು ನಿಟ್ಟಾಗಿ ನಿಷೇಧಿಸಲಾಗಿದೆ. ಹಾಗೆಯೇ ಕೊಡಗು ಜಿಲ್ಲೆಯ ಗಡಿ ಜಿಲ್ಲೆಗಳಾದ ಮೈಸೂರು, ಹಾಸನ, ದಕ್ಷಿಣ ಕನ್ನಡ ಜಿಲ್ಲೆಗಳ ಗಡಿಗಳನ್ನು ಸಹ ತುರ್ತು ಸಾಮಾಗ್ರಿ ಮತ್ತು ಸೇವೆಗಳಿಗೆ ಹೊರತು ಪಡಿಸಿ ಸಂಪೂರ್ಣ ಬಂದ್ ಮಾಡಲಾಗಿದೆ.  ಇದಕ್ಕಾಗಿ ಜಿಲ್ಲೆಯಲ್ಲಿ ಒಟ್ಟು 13 ಚೆಕ್ ಪೋಸ್ಟ್ ಗಳನ್ನು ತೆರೆದು ಪೊಲೀಸ್ ಇಲಾಖೆಯ ಸಹಕಾರದೊಂದಿಗೆ ಕಾರ್ಯ ನಿರ್ವಹಿಸಲಾಗುತ್ತಿದೆ.  

ಹೋಬಳಿ ಮಟ್ಟದಲ್ಲಿ ನೋಡಲ್ ಅಧಿಕಾರಿಗಳ ನೇಮಕ: ಲಾಕ್ ಡೌನ್ ನಿಂದ ಜಿಲ್ಲೆಯಲ್ಲಿ ಸಾರ್ವಜನಿಕರಿಗೆ ದಿನಬಳಕೆಯ ವಸ್ತು ಮತ್ತು ತುರ್ತು ಸೇವೆಗಳಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಲು ಹಾಗೂ ಗೃಹ ಸಂಪರ್ಕ ತಡೆಯಲ್ಲಿರುವ ವ್ಯಕ್ತಿಗಳು ಮನೆಗಳಿಂದ ಹೊರಬಂದು ಓಡಾಡದಂತೆ ನಿಗಾ ವಹಿಸಲು ಹೋಬಳಿಗೆ ಒಬ್ಬರಂತೆ ಒಟ್ಟು 16 ಜಿಲ್ಲಾ /ತಾಲ್ಲೂಕು ಮಟ್ಟದ ಅಧಿಕಾರಿಗಳನ್ನು ನೋಡಲ್ ಅಧಿಕಾರಿಗಳನ್ನಾಗಿ ನೇಮಿಸಲಾಗಿದೆ. 

ಜಿಲ್ಲೆಯಲ್ಲಿ ಸಮೂಹ ಸಂಪರ್ಕ ತಡೆ ಗೃಹ ಸ್ಥಾಪನೆ: ಗೃಹ ಸಂಪರ್ಕ ತಡೆಯಲ್ಲಿರುವ ವ್ಯಕ್ತಿಗಳು, ಅಧಿಕಾರಿಗಳ  ಸತತ ಪ್ರಯತ್ನದ ಹೊರತಾಗಿಯೂ ಸಾರ್ವಜನಿಕವಾಗಿ ಓಡಾಡುತ್ತಿರುವ ಬಗ್ಗೆ ವರದಿಯಾದ ಹಿನ್ನೆಲೆಯಲ್ಲಿ ಗೃಹ ಸಂಪರ್ಕ ತಡೆಯನ್ನು ಧಿಕ್ಕರಿಸಿ ಸಾರ್ವಜನಿಕವಾಗಿ ಓಡಾಡುವ ವ್ಯಕ್ತಿಗಳನ್ನು ನಿಬರ್ಂಧಿಸಲು ಮಡಿಕೇರಿಯ ಹೊರ ಭಾಗದಲ್ಲಿ ಜಿಲ್ಲಾಡಳಿತದಿಂದ ಸಮೂಹ ಸಂಪರ್ಕ ತಡೆ ಗೃಹವನ್ನು ಸ್ಥಾಪಿಸಲಾಗಿದೆ.  

ಸೋಂಕು ದೃಢಪಟ್ಟ ಪ್ರಕರಣದಲ್ಲಿ ಕೈಗೊಂಡ ಕ್ರಮ: ಕೊಡಗು ಜಿಲ್ಲೆಯಲ್ಲಿ ಕರೋನ ಸೋಂಕು ದೃಢಪಟ್ಟ 01 ಪ್ರಕರಣದಲ್ಲಿ, ಸದರಿ ವ್ಯಕ್ತಿಯು ವಾಸವಾಗಿದ್ದ ಕೇತುಮೊಟ್ಟೆ ಪ್ರದೇಶದ ಸುತ್ತ 500 ಮೀಟರ್ ಏರಿಯಾವನ್ನು ಕಂಟೈನ್ ಮೆಂಟ್ ಪ್ರದೇಶ ಎಂದು ಗುರುತಿಸಿದ್ದು, ಸದರಿ ಭಾಗದಲ್ಲಿರುವ 75 ಮನೆಗಳ ನಿವಾಸಿಗಳಿಗೆ ಮನೆಗಳಿಂದ ಹೊರಗೆ ಬಾರದಂತೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದ್ದು, ಕರೋನ ಲಕ್ಷಣಗಳ ಬಗ್ಗೆ ಗಮನ ವಹಿಸಲು ಸೂಚಿಸಲಾಗಿದೆ.  ಸದರಿ ಪ್ರದೇಶದಲ್ಲಿ ಪೊಲೀಸ್ ಇಲಾಖೆಯಿಂದ ಚೆಕ್ ಪೋಸ್ಟ್ ಗಳನ್ನು ಸ್ಥಾಪಿಸಿ ನಿಗಾ ವಹಿಸಲಾಗಿದೆ. ಈ ವ್ಯಾಪ್ತಿಯ 775 ಮನೆಗಳಿಗೆ ದಿನ ಬಳಕೆಯ ವಸ್ತುಗಳನ್ನು ಜಿಲ್ಲಾಡಳಿತದಿಂದ ಅವರವರ ಮನೆಗಳಿಗೆ ಪೂರೈಸಲಾಗುತ್ತಿದೆ. 

ಅಲ್ಲದೆ ಸೋಂಕು ದೃಢಪಟ್ಟ ವ್ಯಕ್ತಿಯು ಸಂಚರಿಸಿರುವ ಮಾರ್ಗದ ನಕ್ಷೆಯನ್ನು ತಯಾರಿಸಲಾಗಿದ್ದು, ಸದರಿ ವ್ಯಕ್ತಿಯು ಪ್ರಯಾಣಿಸಿದ ವಿಮಾನ, ಬಸ್ ಗಳಲ್ಲಿದ್ದ ಸಹ ಪ್ರಯಾಣಿಕರು ಸ್ವಯಂಪ್ರೇರಿತರಾಗಿ ಸರ್ಕಾರಿ ಆಸ್ಪತ್ರೆಗಳಲ್ಲಿ ತಪಾಸಣೆ ಮಾಡಿಸಿಕೊಳ್ಳಲು ವ್ಯಾಪಕ ಪ್ರಚಾರದೊಂದಿಗೆ ಸಲಹೆಯನ್ನು ಹೊರಡಿಸಲಾಗಿದೆ.  ಅಲ್ಲದೆ ಸೋಂಕಿತ ವ್ಯಕ್ತಿಯು ಸಂಪರ್ಕಿಸಿರಬಹುದಾದ ಪ್ರಾಥಮಿಕ ಮತ್ತು ದ್ವಿತೀಯ ಹಂತದ ವ್ಯಕ್ತಿಗಳನ್ನು ಪತ್ತೆ ಹಚ್ಚುವ ಕಾರ್ಯ ಪ್ರಗತಿಯಲ್ಲಿದೆ. ಹಾಗೂ ಸೋಂಕಿತ ವ್ಯಕ್ತಿಯು ನೀಡಿರುವ ಮಾಹಿತಿ ಅನುಸಾರ ಆತ ಸಂಚರಿಸಿರುವ ಸಂಚಾರಿ ಪಥದ ವಿವರವನ್ನು ಈಗಾಗಲೇ ಹೊರಡಿಸಲಾಗಿದೆ.

ಜನಪ್ರತಿನಿಧಿಗಳೊಂದಿಗೆ ಸಭೆ: ಕರೋನ ವೈರಸ್‍ನ್ನು ತಡೆಗಟ್ಟಲು ಕೈಗೊಂಡಿರುವ ಮತ್ತು ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಇತ್ತೀಚೆಗೆ ಜಿಲ್ಲೆಯ ಶಾಸಕರು ಮತ್ತು ಜಿಲ್ಲಾ ಪಂಚಾಯತ್ ಅಧ್ಯಕ್ಷರು ಮತ್ತು ಉಪಾಧ್ಯಕ್ಷರು ಮತ್ತು ಸಂಬಂಧಪಟ್ಟ ಪ್ರಮುಖ ಅಧಿಕಾರಿಗಳ ಸಭೆ ನಡೆಸಿ ಚರ್ಚಿಸಲಾಗಿದೆ.

ವಲಸಿಗ ಕಾರ್ಮಿಕರಿಗೆ ಹೋಂ ಕ್ವಾರಂಟೈನ್ ವ್ಯವಸ್ಥೆ: ಹೊರ ರಾಜ್ಯದಿಂದ ಜಿಲ್ಲೆಗೆ ಆಗಮಿಸಿರುವ ವಲಸೆ ಕಾರ್ಮಿಕರನ್ನು ವೈದ್ಯಕೀಯ ತಪಾಸಣೆ ನಡೆಸಿ, ಅವರಿಗೆ ಎಲ್ಲಾ ವ್ಯವಸ್ಥೆಗಳನ್ನು ಒದಗಿಸಿ ಹೋಂ ಕ್ವಾರಂಟೈನ್ ವ್ಯವಸ್ಥೆ ಮಾಡಲಾಗಿದೆ. 
ಸ್ವಯಂ ಸೇವಕರ ನೋಂದಣಿ: ಕೋವಿಡ್-19 ರ ಸಂಬಂಧ ಕರ್ತವ್ಯ ನಿರ್ವಹಿಸಲು ಸ್ವಯಂ ಸೇವಕರ ಅಗತ್ಯವಿದ್ದು, ಇದಕ್ಕಾಗಿ ಸ್ವಯಂ ಸೇವಕರು ನೋಂದಾಯಿಸಿಕೊಳ್ಳಲು ಕೊಡಗು ಜಿಲ್ಲಾ ವೆಬ್‍ಸೈಟ್ ನಲ್ಲಿ ಅವಕಾಶ ಕಲ್ಪಿಸಲಾಗಿದೆ.  https://kodagu.nic.in/en/covid-19/ ಕ್ಕೆ ಭೇಟಿ ನೀಡಿ ನೋಂದಾಯಿಸಿಕೊಳ್ಳಬಹುದಾಗಿದೆ ಎಂದು ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರು ತಿಳಿಸಿದ್ದಾರೆ. 

 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News