ಯಾದಗಿರಿ ಕಾರ್ಮಿಕರಿಂದ ಸಹಾಯಕ್ಕೆ ಮನವಿ

Update: 2020-03-29 18:05 GMT

ಬೆಂಗಳೂರು, ಮಾ.29: ಕೊರೋನ ಸೋಂಕು ಹರಡುವ ಭೀತಿಯಿಂದ ಎಲ್ಲೆಡೆ ಲಾಕ್‍ಡೌನ್ ಘೋಷಿಸಿರುವುದರಿಂದ ಕೆಲಸವಿಲ್ಲದೆ ತುತ್ತು ಊಟಕ್ಕೂ ಪರದಾಡುತ್ತಿರುವ ಯಾದಗಿರಿ ಜಿಲ್ಲೆಯ ಕಾರ್ಮಿಕರು ಸಹಾಯ ಮಾಡುವಂತೆ ಸರಕಾರಕ್ಕೆ ಮನವಿ ಮಾಡಿಕೊಂಡಿದ್ದಾರೆ.

ಬ್ಯಾಟರಾಯನಪುರದ ವಿವೇಕಾನಂದ ಶಾಲೆಯ ಪಕ್ಕದ ರಾಜೀವ್ ಗಾಂಧಿ ನಗರದ ಕೆನಾರಾ ಬ್ಯಾಂಕ್ ಲೇಔಟ್‍ನಲ್ಲಿ ಸುಮಾರು ಇಪ್ಪತ್ತು ಗುಡಿಸಲುಗಳಲ್ಲಿ ಹೆಂಗಸರು, ಗಂಡಸರು ಸೇರಿ 70 ರಿಂದ 75 ಕಾರ್ಮಿಕರಿದ್ದಾರೆ.

ಎಲ್ಲೆಡೆ ಕ್ವಾರೆಂಟೇನ್ ವಿಧಿಸಿರುವ ಹಿನ್ನಲೆಯಲ್ಲಿ ಬೆಂಗಳೂರಿನಲ್ಲಿ ಕೂಲಿ ಕಾರ್ಮಿಕರಾಗಿ ಕೆಲಸ ಮಾಡಿಕೊಂಡು ಜೀವನ ಸಾಗುತ್ತಿದ್ದ ಯಾದಗಿರಿ ಜೆಲ್ಲೆಯ 75 ಜನರು ಕೆಲಸವಿಲ್ಲದೆ ಕೆಲಸದ ಗುತ್ತಿಗೆದಾರರು ಹಾಗೂ ಮಾಲಕರು ಯಾರೂ ನಮ್ಮ ಸಹಾಯಕ್ಕೆ ಬರುತ್ತಿಲ್ಲ, ಮುಂಗಡ ಹಣ ಕೇಳಿದರೂ ಕೊಡುತ್ತಿಲ್ಲ. ಹಾಗಾಗಿ ನಮಗೆ ಸರಕಾರದಿಂದ ಅಥವಾ ಸಂಘ ಸಂಸ್ಥೆಗಳಿಂದ ಸಹಾಯ ಮಾಡಿ ನಮ್ಮ ಊರಿಗೆ ಹೋಗುವುದಕ್ಕೆ ವ್ಯವಸ್ಥೆ ಮಾಡಕೊಡಿ, ಇಲ್ಲವೇ ನಮಗೆ ದವಸ ಧ್ಯಾನದ (ದಿನಿಸಿ) ವಸ್ತುಗಳ ವ್ಯವಸ್ಥೆ ಮಾಡಿ ಎಂದು ಮನವಿ ಮಾಡಿಕೊಳ್ಳುತ್ತೇವೆ.

ನಾವು ಊಟಕ್ಕಾಗಿ ನಮ್ಮ ಗುಡಿಸಲಿಂದ ಹೊರಗೆ ಏನಾದರೂ ಊಟ ಹುಡುಕಿಕೊಂಡು ಹೋದರೆ ಸೋಂಕು ತಗಲಬಹುದು ಎಂಬ ಆತಂಕದಲ್ಲಿದ್ದೇವೆ ಎಂದು ಕಾರ್ಮಿಕ ಮಹೇಶಕುಮಾರ್ ತಮ್ಮ ಅಳಲು ತೋಡಿಕೊಂಡಿದ್ದಾರೆ.

ಕೆಲವರು ತಿಂಡಿ, ಬಿಸ್ಕತ್ತುಗಳ್ನು ನೀಡಿ ಒಂದು ದಿನದ ಹಸಿವು ನೀಗಿಸಿದ್ದಾರೆ. ನಾಳೆ ಯಾರು ಸಹಾಯ ಮಾಡುತ್ತಾರೆ ಎಂಬ ಚಿಂತೆ ಕಾಡಿದೆ. ಆದ್ದರಿಂದ ಸರಕಾರ ಈ ಬಗ್ಗೆ ಗಮನ ಹರಿಸಬೇಕು ಎಂದು ಕೇಳಿಕೊಂಡಿದ್ದಾರೆ.  

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News