ಕಟ್ಟುನಿಟ್ಟಾಗಿ ಕರ್ಫ್ಯೂ ಪಾಲಿಸಿ 'ಲಾಕ್‍ಡೌನ್' ಕೊನೆಗೊಳ್ಳಲು ಅವಕಾಶ ಕೊಡಿ: ಸಿಎಂ ಯಡಿಯೂರಪ್ಪ

Update: 2020-03-30 12:03 GMT

ಬೆಂಗಳೂರು, ಮಾ. 30: ಕೊರೋನ ವೈರಸ್ ಹರಡದಂತೆ ತಡೆಗಟ್ಟುವ ನಿಟ್ಟಿನಲ್ಲಿ ಪ್ರಧಾನಮಂತ್ರಿ ಕರೆ ನೀಡಿರುವ ಲಾಕ್‍ಡೌನ್‍ನ ಅವಧಿ ನಾಗರಿಕರು ಅದನ್ನು ಎಷ್ಟು ಕಟ್ಟುನಿಟ್ಟಿನಿಂದ ಪಾಲನೆ ಮಾಡುತ್ತಾರೆಂಬುದರ ಮೇಲೆ ಅವಲಂಬಿಸಿದೆ. ಆದುದರಿಂದ ನಾಡಿನ ಜನತೆ ಲಾಕ್‍ಡೌನ್ ಅನ್ನು ನಮ್ಮೆಲ್ಲರ ಒಳಿತಿಗಾಗಿ ಕಟ್ಟುನಿಟ್ಟಾಗಿ ಪಾಲನೆ ಮಾಡಬೇಕು ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಮನವಿ ಮಾಡಿದ್ದಾರೆ.

ಈ ಸಂಬಂಧ ತುರ್ತು ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಅವರು, ರಾಜ್ಯದ ಜನತೆ ಶಿಸ್ತಿಗೆ ಮತ್ತು ಕಾನೂನು ಪಾಲನೆಗೆ ಹೆಸರಾಗಿದ್ದಾರೆ. ಕರ್ನಾಟಕ ಒಂದು ಕಲ್ಯಾಣ ರಾಜ್ಯ. ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ನಾವು ಹೆಚ್ಚು ಶಿಸ್ತು ಪಾಲನೆ ಮಾಡಬೇಕಾಗಿರುತ್ತದೆ. ಕೊರೋನ ವೈರಸ್ ನಮ್ಮ ತಾಳ್ಮೆ ಪರೀಕ್ಷಿಸಲೆಂದೇ ಬಂದ ಒಂದು ವಿಪತ್ತು ಎಂದು ಬಾವಿಸಿದ್ದೇನೆ ಎಂದು ತಿಳಿಸಿದ್ದಾರೆ.

ಪ್ರಧಾನಿ ಮೋದಿಯವರು 21 ದಿನಗಳ ಕಾಲ ಲಾಕ್ ಡೌನ್ ವಿಧಿಸಿದ್ದು ಅನಿವಾರ್ಯ ಪರಿಸ್ಥಿತಿಯಿಂದಾಗಿ ಇಡೀ ದೇಶದ ಜನತೆಯ ಕ್ಷಮೆ ಕೇಳಿದ್ದಾರೆ. ಒಬ್ಬ ಪ್ರಧಾನಿ ದೇಶದ ಜನತೆಯ ಕ್ಷಮೆ ಕೇಳುವ ಅನಿವಾರ್ಯತೆ ಇದೆ ಎಂದರೆ ಪರಿಸ್ಥಿತಿ ಗಂಭೀರತೆಯನ್ನು ರಾಜ್ಯದ ಜನತೆ ಅರ್ಥ ಮಾಡಿಕೊಳ್ಳಬೇಕಾಗಿದೆ. ದೇಶಕ್ಕೆ ಏಕೆ ಜಗತ್ತಿನ ಇತಿಹಾಸದಲ್ಲೇ ಇಂತಹ ಸ್ಥಿತಿ ಬಂದಿರಲಿಲ್ಲ. ಈಗ ಬಂದಿರುವ ಪರಿಸ್ಥಿತಿಯನ್ನು ನಾವು ಎದುರಿಸಬೇಕಿದೆ ಎಂದು ಹೇಳಿದ್ದಾರೆ.

ಜನತೆ ಹಿತದೃಷ್ಟಿಯಿಂದ ಕಠಿಣ ನಿರ್ಧಾರ: ಪ್ರಧಾನಿ ಮೋದಿ ದೇಶದ ಆರ್ಥಿಕ ಪರಿಸ್ಥಿತಿಯ ಮೇಲೆ ಈ ಸೋಂಕು ತೀವ್ರತರವಾದ ಪರಿಣಾಮ ಬೀರಲಿದೆ ಎಂದು ಗೊತ್ತಿದ್ದರೂ ದೇಶವನ್ನು ಲಾಕ್ ಡೌನ್ ಮಾಡುವ ಕಠಿಣ ನಿರ್ಧಾರ ಕೈಗೊಂಡಿದ್ದು, ದೇಶದ ಜನತೆ ಹಿತದೃಷ್ಟಿಯಿಂದಲೇ ಹೊರತು ಇನ್ಯಾವುದೇ ಹಿತಾಸಕ್ತಿಯಿಂದ ಅಲ್ಲ ಎಂದು ಯಡಿಯೂರಪ್ಪ ಸ್ಪಷ್ಟಪಡಿಸಿದ್ದಾರೆ.

ಅಭಿವೃದ್ಧಿ ಹೊಂದಿರುವ ದೇಶಗಳ ಸಾಧನೆ ಕೊರೋನ ವೈರಸ್ ಸೋಂಕು ನಿಯಂತ್ರಿಸುವಲ್ಲಿ ಶೋಚನೀಯವಾಗಿರುವಾಗ ನಮ್ಮ ಪ್ರಧಾನಿ ಮೋದಿ ಮುನ್ನಚ್ಚರಿಕೆ ಕ್ರಮಗಳು ಫಲಿತಾಂಶವನ್ನು ನೀಡಲಿವೆ. ಪ್ರಧಾನಿ ಮೋದಿ ನಿರ್ದೇಶನವನ್ನು ಪಾಲಿಸಬೇಕು. ಜಾಗೃತ ನಾಗರಿಕರಾದ ನಾವೆಲ್ಲ ಪ್ರಧಾನಿ ದಿಟ್ಟ ನಿಲುವು ಬೆಂಬಲಿಸಬೇಕು ಎಂದು ಅವರು ಕೋರಿದ್ದಾರೆ.

ರಾಜ್ಯದಲ್ಲಿ ಕರ್ಫ್ಯೂ ಜಾರಿಯಲ್ಲಿದೆ. ಆದರೆ, ನಗರ ಪ್ರದೇಶಗಳಲ್ಲಿ ಕೆಲವರು ಇದನ್ನು ಧಿಕ್ಕರಿಸಿ ರಸ್ತೆಗಳಲ್ಲಿ ಸಂಚಾರ ಮಾಡುತ್ತಿದ್ದು, ಈ ವೇಳೆ ನಮ್ಮ ಮನವಿ ಏನೆಂದರೆ ಎಲ್ಲರೂ ಮೋದಿ ಕರೆಗೆ ಬೆಲೆ ನೀಡಬೇಕು. ಲಾಕ್ ಡೌನ್ ಆದೇಶ ಪಾಲಿಸಬೇಕು. ಪೋಲಿಸರು ನಮ್ಮ ಹಿತವನ್ನೆ ಬಯಸುವವರು. ಅವರೇನು ನಿಮ್ಮ ವೈರಿಗಳಲ್ಲ ಎಂದು ಯಡಿಯೂರಪ್ಪ ಮನವಿ ಮಾಡಿದ್ದಾರೆ.

ಇನ್ನೂ ಹದಿನಾರು ದಿನ ಮನೆಯಲ್ಲೇ ಇರಿ. ಈ ಸಮಯ ನಿಮ್ಮ ಮನೆಯ ಕುಟುಂಬದ ಸದಸ್ಯರೊಂದಿಗೆ ಕಳೆಯುವ ಸದಾವಕಾಶ ಎಂದು ಭಾವಿಸಿ. ನೀವು ಎಷ್ಟು ಮನೆಯ ಒಳಗೆ ಇರುತ್ತಿರೋ ಅದರಿಂದ ನಿಮಗೆ ಮತ್ತು ದೇಶಕ್ಕೆ ಒಳಿತಾಗಲಿದೆ. ಪುಸ್ತಕಗಳನ್ನು ಓದಿರಿ, ಸದಾ ಚಟುವಟಿಕೆಗಳಿಂದ ಕಾಲ ಕಳೆಯಿರಿ ಎಂದು ಯಡಿಯೂರಪ್ಪ ನಾಡಿನ ಜನತೆಗೆ ಮನವಿ ಮಾಡಿದ್ದಾರೆ.

ಈ ಸಂದರ್ಭದಲ್ಲಿ ಕೊರೋನ ವೈರಸ್ ಪೀಡಿತ ನೂರಾರು ಜನರ ಪ್ರಾಣ ಉಳಿಸಲು ಸತತ ಕೆಲಸದಲ್ಲಿ ತೊಡಗಿರುವ ವೈದ್ಯರು ಮತ್ತು ಸಿಬ್ಬಂದಿ ಸೇರಿದಂತೆ ನಾಗರಿಕ ಸೇವೆಯಲ್ಲಿ ತೊಡಗಿರುವ ಸಾವಿರಾರು ಕಾರ್ಯಕರ್ತರಿಗೆ ನಾವು ನೈತಿಕ ಬೆಂಬಲ ವ್ಯಕ್ತಪಡಿಸಿ, ಅವರಿಗೆ ಮನೋಸ್ಥೈರ್ಯ ಕುಗ್ಗದಂತೆ ನೋಡಿಕೊಳ್ಳುವುದು ನಮ್ಮ ಕರ್ತವ್ಯ ಎಂದು ಅವರು ಸಲಹೆ ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News