"ಕೈ ಮುಗಿಯುತ್ತೇವೆ ಅನ್ನ-ನೀರು ಕೊಡಿ": ಕರ್ತವ್ಯನಿರತ ವೈದ್ಯಕೀಯ ಸಿಬ್ಬಂದಿಯ ಅಳಲು

Update: 2020-03-30 14:43 GMT
ಸಾಂದರ್ಭಿಕ ಚಿತ್ರ

ಬೀದರ್, ಮಾ.30: ರಾಜ್ಯದ ಗಡಿಯಲ್ಲಿ ರಣಬಿಸಿಲಲ್ಲಿ ಕೆಲಸ ಮಾಡುತ್ತಿದ್ದೇವೆ. ಅಧಿಕಾರಿಗಳು ಕುಡಿಯುವ ನೀರು ಹಾಗೂ ಊಟದ ವ್ಯವಸ್ಥೆಯನ್ನು ಮಾಡುತ್ತಿಲ್ಲ. ನಾವು ಮನೆಯಿಂದ ಬೆಳಗ್ಗೆ ಕಟ್ಟಿಕೊಂಡು ಬರುತ್ತಿರುವ ಅನ್ನ ಸಹ ಮಧ್ಯಾಹ್ನದ ವೇಳೆಗೆ ಹಳಸುತ್ತಿದೆ. ಸಚಿವರೇ ಕೈಮುಗಿದು ಕೇಳಿಕೊಳ್ಳುತ್ತೇವೆ, ನಿಮ್ಮಲ್ಲಿ ಮಾನವೀಯತೆ ಇದ್ದರೆ ನಮಗೆ ಅನ್ನ-ನೀರಿನ ವ್ಯವಸ್ಥೆ ಮಾಡಿ...

ಹೀಗೆಂದು ಕೊರೋನ ಸೋಂಕು ಹರಡುವಿಕೆ ತಡೆಯಲು ಜಿಲ್ಲೆಯ ಗಡಿಯಲ್ಲಿ ಸ್ಥಾಪಿಸಲಾಗಿರುವ ಚೆಕ್‍ಪೋಸ್ಟ್ ಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ವೈದ್ಯಕೀಯ ಸಿಬ್ಬಂದಿ ಸಚಿವರಿಗೆ ಕೈಮುಗಿದು ಬೇಡಿಕೊಳ್ಳುತ್ತಿದ್ದಾರೆ.

ಆದರೆ, ಕಂದಾಯ ಇಲಾಖೆ ಹಾಗೂ ಆರೋಗ್ಯ ಇಲಾಖೆಯ ಅಧಿಕಾರಿಗಳು ಸ್ಪಂದಿಸುತ್ತಿಲ್ಲ. `ಜಿಲ್ಲಾಧಿಕಾರಿಯ ಲಿಖಿತ ಆದೇಶ ಇದ್ದರೆ ತೋರಿಸಿ' ಎಂದು ಆರೋಗ್ಯ ಇಲಾಖೆಯ ಸಿಬ್ಬಂದಿಗೇ ಮರು ಪ್ರಶ್ನೆ ಮಾಡುತ್ತಿದ್ದಾರೆ ಎನ್ನಲಾಗಿದೆ.

ನಾನು ನಿತ್ಯ ಬೆಳಗ್ಗೆ ಮನೆಯಲ್ಲಿ ಅನ್ನ ಸಾರು ಮಾಡಿಕೊಂಡು ಒಂದು ಸಾವಿರ ರೂಪಾಯಿ ವ್ಯಯಿಸಿ ಬಾಡಿಗೆ ಕಾರಿನಲ್ಲಿ ಬೀದರ್‍ನಿಂದ ಕಮಲನಗರ ಚೆಕ್‍ಪೋಸ್ಟ್ ಗೆ ಬರುತ್ತಿದ್ದೇನೆ. ಮಧ್ಯಾಹ್ನದ ವೇಳೆಗೆ ಸುಡು ಬಿಸಿಲಿಗೆ ಅನ್ನ ಹಳಸುತ್ತಿದೆ. ಬಿಸಿಲಿಗೆ ಬಾಯಾರಿಕೆ ಹೆಚ್ಚಾಗಿ ನಾವು ಮನೆಯಿಂದ ತರುವ ನೀರು ಸಹ ಸಾಕಾಗುತ್ತಿಲ್ಲ. ಇಲ್ಲಿ ಹೊಟೇಲ್‍ಗಳಿದ್ದರೆ ನಾವು ಸಚಿವರನ್ನಾಗಲೀ ಜಿಲ್ಲಾಧಿಕಾರಿಯನ್ನಾಗಿಲೀ ಕೈಮುಗಿದು ಕೇಳುವ ಪ್ರಶ್ನೆ ಬರುತ್ತಿರಲಿಲ್ಲ ಎಂದು ಸಿಬ್ಬಂದಿಯೊಬ್ಬರು ತಮ್ಮ ಅಳಲು ತೋಡಿಕೊಂಡಿದ್ದಾರೆ.

ಕಷ್ಟಕಾಲದಲ್ಲಿ ಸಾರ್ವಜನಿಕರ ಸೇವೆ ಮಾಡಲು ಹಿಂಜರಿಯುವುದಿಲ್ಲ. ಸಣ್ಣ ಮಕ್ಕಳನ್ನು ಮನೆಯಲ್ಲಿ ಬಿಟ್ಟು ಬಂದು ಕೆಲಸ ಮಾಡುತ್ತಿದ್ದೇವೆ. ಕೊರೋನ ಸೋಂಕು ಒಂದೆಡೆ ಇರಲಿ, ಬಿಸಿಲಲ್ಲಿ ಕೆಲಸ ಮಾಡುತ್ತಿರುವ ಸಿಬ್ಬಂದಿಯ ದೇಹದಲ್ಲಿನ ನೀರಿನ ಅಂಶ ಕಡಿಮೆಯಾಗಿ ಅನಾಹುತ ಸಂಭವಿಸದಿರಲಿ ಎನ್ನುವುದೇ ನಮ್ಮ ಉದ್ದೇಶ ಎಂದು ಹೇಳಿದ್ದಾರೆ.

ಉದ್ಯೋಗ ಇಲ್ಲದ ಕಾರಣ ಮಹಾರಾಷ್ಟ್ರ ಹಾಗೂ ತೆಲಂಗಾಣದಿಂದ ಬಿಸಿಲಲ್ಲಿ ನಡೆದುಕೊಂಡು ಊರಿಗೆ ಮರಳುತ್ತಿರುವ ವ್ಯಕ್ತಿಗಳಿಗೂ ನೀರು ಕೊಡುವ ಸ್ಥಿತಿಯಲ್ಲಿ ಇಲ್ಲ. ನೀರಿಗಾಗಿ ಅವರು ಕೈಒಡ್ಡುತ್ತಿರುವ ಸ್ಥಿತಿಯನ್ನು ನೋಡಿದರೆ ಕರಳು ಕಿತ್ತು ಬರುತ್ತಿದೆ. ಸೌಲಭ್ಯ ಒದಗಿಸಬೇಕಾದ ಅಧಿಕಾರಿಗಳು ಸ್ಥಳಕ್ಕೆ ಭೇಟಿಕೊಡುತ್ತಿಲ್ಲ ಎಂದು ಕಮಲನಗರ, ಔರಾದ್ ತಾಲ್ಲೂಕಿನ ಬಾರ್ಡರ್ ತಾಂಡಾ ಹಾಗೂ ಬೀದರ್ ತಾಲ್ಲೂಕಿನ ಶಹಾಪುರ ಸಮೀಪದ ಚೆಕ್‍ಪೋಸ್ಟ್ ಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಸಿಬ್ಬಂದಿ ಬೇಸರ ವ್ಯಕ್ತಪಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News