ಮೈಸೂರಿನಲ್ಲಿ ಒಟ್ಟು 12 ಮಂದಿಗೆ ಕೊರೋನ ಸೋಂಕು ದೃಢ

Update: 2020-03-30 13:20 GMT

ಮೈಸೂರು,ಮಾ.30: ಮೈಸೂರು ಜಿಲ್ಲೆಯಲ್ಲಿ ಒಟ್ಟು 12 ಜನರಿಗೆ ಕೊರೋನ ಸೋಂಕು ದೃಡ ಪಟ್ಟಿದೆ ಎಂದು  ವಸತಿ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ತಿಳಿಸಿದರು.

ನಗರದ ಜಿ.ಪಂ ಕಚೇರಿಯಲ್ಲಿ ಸೋಮವಾರ ವೀಡಿಯೋ ಕಾನ್ಫರೆನ್ಸ್ ಮೂಲಕ  ಜಿಲ್ಲೆಯ ಎಲ್ಲಾ ತಾಲ್ಲೂಕಿನ ಶಾಸಕರುಗಳು ಮತ್ತು ಅಧಿಕಾರಿಗಳೊಂದಿಗೆ ಕೊರೋನ ಸಂಬಂಧ ಕೈಗೊಂಡಿರುವ ಕ್ರಮಗಳ ಕುರಿತು ಮಾಹಿತಿ ಪಡೆದು ನಂತರ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದರು.

ಜಿಲ್ಲೆಯಲ್ಲಿ 8 ಜನರಿಗೆ ಕೋರೋನ ಸೋಂಕು ತಗುಲಿತ್ತು, ಇದೀಗ ಮತ್ತೆ ನಾಲ್ಕು ಮಂದಿಯ ರಕ್ತ ಪರೀಕ್ಷೆ ಪಾಸಿಟಿವ್ ಬಂದಿರುವುದರಿಂದ ಒಟ್ಟು 12 ಜನರು ಕೊರೋನ ಸೋಂಕಿಗೆ ಒಳಪಟ್ಟಿದ್ದು, ಇಬ್ಬರು ವಿದೇಶದಿಂದ ಬಂದವರು ಬಿಟ್ಟರೆ ಉಳಿದ ಹತ್ತು ಮಂದಿ ನಂಜನಗೂಡು ಕೈಗಾರಿಕಾ ಪ್ರದೇಶದಲ್ಲಿರುವ ಖಾಸಗಿ ಕಂಪನಿಯವರು ಎಂದು ಹೇಳಿದರು.

12 ಮಂದಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಅವರೆಲ್ಲರೂ ಆರೋಗ್ಯವಾಗಿದ್ದಾರೆ. ಕೆ.ಆರ್.ಎಸ್ ರಸ್ತೆಯಲ್ಲಿರುವ ನೂತನ ಜಿಲ್ಲಾಸ್ಪತ್ರೆ ಕೋವಿಡ್-29 ಆಸ್ಪತ್ರೆಗೆ ಅವರೆಲ್ಲರನ್ನು ಸ್ಥಳಾಂತರ ಮಾಡಲಾಗುವುದು‌. ಈಗ 6 ಮಂದಿಯನ್ನು ಶಿಫ್ಟ್ ಮಾಡಲಾಗಿದ್ದು, ಸಂಜೆ ವೇಳೆಗೆ ಇನ್ನು 6 ಮಂದಿಯನ್ನು ಶಿಫ್ಟ್ ಮಾಡಲಾಗುವುದು ಎಂದು ಹೇಳಿದರು.

ಮೈಸೂರಿನಲ್ಲಿ ಕೋವಿಡ್- 19 ಅನ್ನು ತೊಲಗಿಸಲು ಜಿಲ್ಲಾಡಳಿತ ಎಲ್ಲರ ಸಹಕಾರದೊಂದಿಗೆ ಬಹಳ ಅಚ್ಚುಕಟ್ಟಾಗಿ ಕರ್ತವ್ಯ ನಿರ್ವಹಿಸುತ್ತಿದೆ ಎಂದು ಮೆಚ್ಚುಗೆ ವ್ಯಕ್ತಪಡುಸಿದರು.

ಹೋಂ ಕ್ವಾರಂಟೈನ್ ಗಳು ಹೊರ ಬಂದರೆ ಕಠಿಣ ಕ್ರಮ: ಹೋಂ ಕ್ವಾರಂಟೈನ್ ಗಳು ಮನೆಯಲ್ಲಿ ಇರದೆ ಹೊರಗೆ ಬಂದು ಓಡಾಡುತಿದ್ದಾರೆ ಎಂಬ ಮಾಹಿತಿ ಇದೆ. ಮಾನವೀಯ ದೃಷ್ಟಿಯಿಂದ ಇಷ್ಟು ದಿನ ಸುಮ್ಮನಿದ್ದೆವು. ಇಂದಿನಿಂದ ಯಾರೇ ಹೋಂ ಕ್ವಾರಂಟೈನ್ ಗಳು ಹೊರ ಓಡಾಡುವುದು ಕಂಡು ಬಂದರೆ ಕಠಿಣ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಸಚಿವ ವಿ.ಸೋಮಣ್ಣ ಎಚ್ಚರಿಕೆ ನೀಡಿದರು.

ಜಿಲ್ಲೆಯಲ್ಲಿ ಒಟ್ಟು 2537 ಹೋಂ ಕ್ವಾರಂಟೈನ್ ಗಳಿದ್ದು ಅದರಲ್ಲಿ 821 ಮಂದಿ 14 ದಿನ ಮುಗಿಸಿ ಅವರೆಲ್ಲರ ರಕ್ತದ ಮಾದರಿ ನೆಗೆಟಿವ್ ವಂದಿರುವುದು ಸಂತೋಷ ತಂದಿದೆ. ತಾಯಿ ಚಾಮುಂಡೇಶ್ವರಿ ಆಶೀರ್ವಾದದಿಂದ ಉಳಿದಿರುವ 1447 ಮಂದಿ ಹೋಂ ಕ್ವಾರಂಟೈನ್ ಗಳ ರಕ್ತ ಪರೀಕ್ಷೆಯೂ ನೆಗೆಟಿವ್ ಬರಲಿ ಎಂದು ದೇವರಲ್ಲಿ ಬೇಡಿಕೊಂಡರು.

ಹೋಂ ಕ್ವಾರಂಟೈನ್ ಗಳ ಮೇಲೆ ಹೆಚ್ಚು ನಿಗಾವಹಿಸಲಾಗಿದ್ದು ಪ್ರತಿ ಹತ್ತು ಜನರಿಗೊಂದು ಮನೆಯಂತೆ ಓರ್ವ ಪೊಲೀಸ್ ಕಾನ್ಸ್ ಟೇಬಲ್ ನೇಮಿಸಲು ಚಿಂತಿಸಲಾಗಿದ್ದು, ಇಂದು ರಾತ್ರಿಯಿಂದಲೇ ಈ ಕಾರ್ಯ ಜಾರಿಗೆ ಬರಲಿದೆ. ಕ್ವಾರಂಟೈನ್ ನಲ್ಲಿರುವವರಿಗೆ ಬೇಕಾಗುವ ಆಹಾರ ಪದಾರ್ಥ ಗಳನ್ನು ಆಯಾ ತಾಲ್ಲೂಕು ಆಡಳಿತ ಮತ್ತು ಅಧಿಕಾರಿಗಳು ಪೂರೈಸಲಿದ್ದಾರೆ ಎಂದು ಹೇಳಿದರು.

ನಂಜನಗೂಡು ನಿಷೇಧಿತ ಪ್ರದೇಶ: ಸಚಿವ ವಿ.ಸೋಮಣ್ಣ

ನಂಜನಗೂಡಿನ ಖಾಸಗಿ ಕಂಪನಿಯಲ್ಲಿ ಕೆಲಸ ನಿರ್ವವಹಿಸುತಿದ್ದವರೇ ಹೆಚ್ಚು ಹೋಂ ಕ್ವಾರಂಟೈನ್ ಗಳಾಗಿದ್ದು, ನಂಜನಗೂಡನ್ನು ನಿಷೇಧಿತ ಪ್ರದೇಶ ಎಂದು ಘೋಷಿಸಲಾಗಿದೆ ಎಂದು ವಸತಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಷ್ಣ ತಿಳಿಸಿದರು.

ಖಾಸಗಿ ಕಂಪನಿಯ ನೌಕರರೇ  ಹೆಚ್ಚು ಕೊರೋನಾ ಪಾಸಿಟಿವ್ ಹೊಂದಿದ್ದಾರೆ. ಹಾಗಾಗಿ  ಅವರ ಹತ್ತಿರದ ವ್ಯಕ್ತಿಗಳನ್ನು ಗುರುತಿಸಿ ಹೋಂ ಕ್ವಾರಂಟೈನ್ ನಲ್ಲಿ ಇಡಲಾಗಿದೆ. ಆದ್ಸರಿಂದ ನಂಜನಗೂಡನ್ನು ನಿಷೇಧಿತ ಪ್ರದೇಶ ಎಂದು ಘೋಷಣೆ ಮಾಡಲಾಗಿದೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News