ಹೋಮ್ ಕ್ವಾರಂಟೈನ್ ನಲ್ಲಿರುವವರು ಗಂಟೆಗೊಂದು ಸೆಲ್ಫಿ ಕಳುಹಿಸಲು ರಾಜ್ಯ ಸರಕಾರದ ಆದೇಶ

Update: 2020-03-30 15:30 GMT
ಸಾಂದರ್ಭಿಕ ಚಿತ್ರ

ಬೆಂಗಳೂರು, ಮಾ.30: ರಾಜ್ಯದಲ್ಲಿ ಮನೆಗಳಲ್ಲಿ ಕ್ವಾರಂಟೈನ್‍ನಲ್ಲಿರುವ ಪ್ರತಿಯೊಬ್ಬರೂ ಗಂಟೆಗೊಮ್ಮೆ (ರಾತ್ರಿ 10 ಗಂಟೆಯಿಂದ ಬೆಳಗ್ಗೆ 7ರ ವರೆಗೆ ಹೊರತುಪಡಿಸಿ) ರಾಜ್ಯ ಸರಕಾರಕ್ಕೆ ಸೆಲ್ಫಿ ಕಳುಹಿಸಬೇಕು ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ತಿಳಿಸಿದ್ದಾರೆ.

ಈ ಸಂಬಂಧ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಅವರು, ಮನೆಯಲ್ಲಿ ಕ್ವಾರಂಟೈನ್‍ನಲ್ಲಿರುವವರ ಪೈಕಿ ಯಾರು ಸೆಲ್ಫಿ ಕಳುಹಿಸುವುದಿಲ್ಲವೊ ಅಂತಹವರನ್ನು ಸಾಮೂಹಿಕವಾಗಿ ಕ್ವಾರಂಟೈನ್ ನಡೆಸುತ್ತಿರುವ ಕಡೆ ಸ್ಥಳಾಂತರಿಸಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.

ಸೆಲ್ಫಿ ಕಳುಹಿಸದೆ ಇರುವವರ ಮನೆಗಳಿಗೆ ಸರಕಾರದ ಅಧಿಕಾರಿಗಳ ತಂಡ ಭೇಟಿ, ಕ್ವಾರಂಟೈನ್‍ನಲ್ಲಿರುವವರನ್ನು ಸ್ಥಳಾಂತರಿಸಲಿದ್ದಾರೆ. ಮನೆಯಲ್ಲಿ ಕ್ವಾರಂಟೈನ್‍ನಲ್ಲಿರುವವರ ಕಳುಹಿಸುವ ಫೋಟೋಗಳನ್ನು ಸರಕಾರದ ತಂಡ ಪರಿಶೀಲಿಸಲಿದೆ. ಒಂದು ವೇಳೆ ನಕಲಿ ಫೋಟೋಗಳನ್ನು ಕಳುಹಿಸಿರುವುದು ಕಂಡು ಬಂದರೆ ಅಂತಹವರನ್ನು ಸಾಮೂಹಿಕ ಕ್ವಾರಂಟೈನ್ ಕೇಂದ್ರಗಳಿಗೆ ಸ್ಥಳಾಂತರಿಸಲಾಗುವುದು ಎಂದು ಸುಧಾಕರ್ ತಿಳಿಸಿದ್ದಾರೆ.

ಸರಕಾರದ ಅಧಿಕಾರಿಗಳು ಕ್ವಾರಂಟೈನ್ ನಡೆಯುತ್ತಿರುವ ಮನೆಗಳಿಗೆ ಭೇಟಿ ನೀಡಿದಾಗ ಕ್ವಾರಂಟೈನ್‍ನಲ್ಲಿರುವ ವ್ಯಕ್ತಿಯ ಭಾವಚಿತ್ರವನ್ನು ಸೆರೆ ಹಿಡಿದು ಮೊಬೈಲ್ ಆ್ಯಪ್ ಮೂಲಕ ಸರಕಾರಕ್ಕೆ ಕಳುಹಿಸಬೇಕು ಎಂದು ಅವರು ಹೇಳಿದ್ದಾರೆ.

ಗೂಗಲ್ ಪ್ಲೇ ಸ್ಟೋರ್‍ನಲ್ಲಿ ಆ್ಯಪ್ ಅನ್ನು ಡೌನ್‍ಲೋಡ್ ಮಾಡಿಕೊಳ್ಳಲು ಈ ಲಿಂಕ್ http://play.google.com/store/apps/details?id=com.bmc.qrtnwatch ಅನ್ನು ಬಳಸಿಕೊಳ್ಳಬಹುದಾಗಿದೆ ಎಂದು ಸುಧಾಕರ್ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News