ಚಿಕ್ಕಮಗಳೂರು: ಲಾಕ್‍ಡೌನ್ ಆದೇಶ ಉಲ್ಲಂಘಿಸಿ ವಿನಾಕಾರಣ ತಿರುಗಾಡಿದವರಿಗೆ ದಂಡದ ಬಿಸಿ

Update: 2020-03-30 14:32 GMT

ಚಿಕ್ಕಮಗಳೂರು, ಮಾ.30: ಕೊರೊನಾ ಸೋಂಕು ಹರಡುವ ಭೀತಿ ಹಿನ್ನೆಲೆಯಲ್ಲಿ ಸರಕಾರದ ಲಾಕ್‍ಡೌನ್ ಆದೇಶಕ್ಕೆ ಕೆಲ ದಿನಗಳಿಂದ ಜಿಲ್ಲೆಯ ಜನತೆಯಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾದ ಬೆನ್ನಲೆ ಏಳನೇ ದಿನವಾದ ಸೋಮವಾರ ಪೊಲೀಸರಿಗೆ ನಗರದಲ್ಲಿ ಅನಗತ್ಯವಾಗಿ ತಿರುಗಾಡುವವರು ತಲೆನೋವಾಗಿ ಕಾಡಿದರು. 

ನಗರದಲ್ಲಿ ಸೋಮವಾರ ಅನಗತ್ಯವಾಗಿ ತಿರುಗಾಡುವವರ ಸಂಖ್ಯೆ ಹೆಚ್ಚು ಕಂಡುಬಂತು. ಸುಳ್ಳುನೆಪ ಹೇಳಿಕೊಂಡು ಬೈಕ್ ಮತ್ತು ಕಾರುಗಳಲ್ಲಿ ತಿರುಗಾಡುವವ ದೃಶ್ಯಗಳು ಕಂಡು ನಗರದ ಅಲ್ಲಲ್ಲಿ ಕಂಡುಬಂದವು.

ಜನಸಂಚಾರ ಹೆಚ್ಚಾಗುತ್ತಿದ್ದಂತೆ ಎಚ್ಚೆತ್ತುಕೊಂಡ ಪೊಲೀಸರು ನಗರದ ಎಂ.ಜಿ.ರಸ್ತೆ, ಐಜಿರಸ್ತೆ. ಮಾರ್ಕೇಟ್ ರಸ್ತೆ, ಕತ್ರಿಮಾರಮ್ಮ ದೇವಾಲಯ, ಬೋಳರಾಮೇಶ್ವರ ದೇವಾಲಯ ರಸ್ತೆಗಳಲ್ಲಿ ಚೆಕ್‍ಪೋಸ್ಟ್ ಹಾಕಿ ಬೈಕ್ ಮತ್ತು ಕಾರುಗಳಲ್ಲಿ ಓಡಾಡುವವರನ್ನು ತಡೆದು ಯಾವ ಉದ್ದೇಶಕ್ಕೆ ಹೋಗಲಾಗುತ್ತಿದೆ ಎಂದು ವಿಚಾರಿಸಿ, ಸಕಾರಣ ನೀಡಿದರೆ ಮಾತ್ರ ವಾಹನಗಳನ್ನು ಬಿಡುತ್ತಿದ್ದರು. ಅನಗತ್ಯವಾಗಿ ಓಡಾಡುವರ ಬೈಕ್‍ಗಳನ್ನು ಸೀಝ್ ಮಾಡಿ ಸವಾರರನ್ನು ಮನೆಗೆ ಕಳಿಸಲಾಗುತ್ತಿತ್ತು. ಬೈಕ್ ಸವಾರರನ್ನು ತಪಾಸಣೆ ನಡೆಸಿ ದಾಖಲೆ ಇಲ್ಲದವರಿಗೆ ದಂಡ ಹಾಕಿದರು. 

ದಿನಸಿ ಅಂಗಡಿ, ಹಣ್ಣಿನ ಅಂಗಡಿ, ತರಕಾರಿ ಅಂಗಡಿ, ಪೆಂಟ್ರೋಲ್ ಬಂಕ್, ಎಟಿಎಂ, ಕೃಷಿ ಔಷಧಿ ಅಂಗಡಿಗಳು, ಮೆಡಿಕಲ್ ಶಾಪ್‍ಗಳು ಎಂದಿನಂತೆ ತೆರೆದಿದ್ದು, ಕೊಳ್ಳುವವರ ಸಂಖ್ಯೆಯೂ ಎಂದಿಗಿಂತ ಜಾಸ್ತಿ ಸಂಖ್ಯೆಯಲ್ಲಿ ಕಂಡುಬಂತು. 

ಲಾಕ್‍ಡೌನ್ ಕರ್ತವ್ಯ ನಿರತ ಪೊಲೀಸರು, ಗೃಹರಕ್ಷಕದಳದ ಸಿಬ್ಬಂದಿಗೆ ಸ್ವಯಂಸೇವಕರು ಆಹಾರ ಪೊಟ್ಟಣಗಳನ್ನು ನೀಡುತ್ತಿದ್ದ ದೃಶ್ಯಗಳು ನಗರದ ವಿವಿಧೆಡೆ ಕಂಡು ಬಂದವು. ಗ್ರಾಮೀಣ ಪ್ರದೇಶಗಳಲ್ಲಿ ಅಗತ್ಯ ವಸ್ತುಗಳನ್ನು ಪೊಲೀಸರೇ ಮನೆ ಬಾಗಿಲಿಗೆ ಪೂರೈಕೆ ಮಾಡುತ್ತಿದ್ದ ದೃಶ್ಯಗಳು ಸೋಮವಾರ ಕಂಡುಬಂದವು. ದಿನಸಿ ಅಂಗಡಿಗಳಲ್ಲಿ ಅಗತ್ಯ ವಸ್ತುಗಳನ್ನು ಹೆಚ್ಚು ದರಕ್ಕೆ ಮಾರಲಾಗುತ್ತಿದೆ ಎಂದು ಆರೋಪದ ಹಿನ್ನೆಲೆಯಲ್ಲಿ ಅಗತ್ಯ ವಸ್ತುಗಳ ಬೆಲೆಯನ್ನು ಅಂಗಡಿ ಮುಂದೆ ಹಾಕಬೇಕೆಂದು ಜಿಲ್ಲಾಧಿಕಾರಿ ಆದೇಶ ನೀಡಿರುವ ಹಿನ್ನೆಲೆಯಲ್ಲಿ ಕೆಲ ಅಂಗಡಿಗಳ ಮುಂದೆ ಇಂತಹ ದರ ಪಟ್ಟಿಗಳು ಕಂಡುಬಂದವು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News