ಹೊಸದಾಗಿ ಐದು ಪ್ರಕರಣ ದೃಢ: ರಾಜ್ಯದಲ್ಲಿ ಕೊರೋನ ಸೋಂಕಿತರ ಸಂಖ್ಯೆ 88ಕ್ಕೆ ಏರಿಕೆ

Update: 2020-03-30 15:01 GMT
ಸಾಂದರ್ಭಿಕ ಚಿತ್ರ

ಬೆಂಗಳೂರು, ಮಾ.30: ರಾಜ್ಯದಲ್ಲಿ ಕೊರೋನ ಸೋಂಕಿತರ ಸಂಖ್ಯೆ ಸೋಮವಾರ 88ಕ್ಕೆ ಏರಿಕೆಯಾಗಿದ್ದು, ರಾಜ್ಯದ ಜನರಲ್ಲಿ ಮತ್ತಷ್ಟು ಆತಂಕವನ್ನು ಹೆಚ್ಚಿಸಿದೆ.

ಕೇಂದ್ರ ಮತ್ತು ರಾಜ್ಯ ಸರಕಾರಗಳು ಕೊರೋನ ವೈರಾಣು ನಿಯಂತ್ರಣಕ್ಕಾಗಿ ಸಾಕಷ್ಟು ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಆದರೂ, ವಿದೇಶಗಳಿಂದ ಬಂದಿದ್ದ ವ್ಯಕ್ತಿಗಳೊಂದಿಗೆ ಸಂಪರ್ಕ ಹೊಂದಿದ್ದ ಅನೇಕರಲ್ಲಿ ಸೋಂಕು ದೃಢಪಡುತ್ತಿದ್ದು, ನಾಳೆ(ಮಾ.31) ಅದರ ಸಂಖ್ಯೆ ನೂರರ ಗಡಿ ದಾಟಲಿದೆ ಎಂದು ಅಂದಾಜಿಸಲಾಗಿದೆ.

ಸೋಮವಾರ ರಾಜ್ಯದಲ್ಲಿ ನಂಜನಗೂಡಿನ 4 ಹಾಗೂ ತುಮಕೂರಿನ ಒಬ್ಬರಲ್ಲಿ ಸೋಂಕು ದೃಢಪಟ್ಟಿದ್ದು, ಒಟ್ಟಾರೆ ಸೋಂಕಿತರ ಸಂಖ್ಯೆ 88ಕ್ಕೆ ಏರಿದೆ. ಅದರಲ್ಲಿ ಮೂರು ಮರಣ ಹಾಗೂ 5 ಜನ ಗುಣಮುಖರಾಗಿ ಬಿಡುಗಡೆಯಾದವರೂ ಇದ್ದಾರೆ.

ಆರೋಗ್ಯ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ಜಿಲ್ಲಾ ಆಡಳಿತಾಧಿಕಾರಿಗಳೊಂದಿಗೆ ಕೋವಿಡ್ 19 ಸನ್ನದ್ಧತೆ ಕುರಿತು ವಿಡಿಯೋ ಕಾನ್ಫರೆನ್ಸ್ ಮೂಲಕ ಮೌಲ್ಯಮಾಪನ ಮಾಡಿದರು. ವಿದ್ಯಾರ್ಥಿ ನಿಲಯಗಳಲ್ಲಿ, ಉದ್ಯೋಗಸ್ಥ ಮಹಿಳೆಯರ ವಸತಿ ಗೃಹಗಳಲ್ಲಿ ಹಾಗೂ ಪೇಯಿಂಗ್‍ಗೆಸ್ಟ್ ಹೌಸ್‍ನಲ್ಲಿ ವಾಸಿಸುವವರನ್ನು ತೆರವು ಮಾಡಬಾರದು ಹಾಗೂ ಹೆಚ್ಚಿನ ಶುಚಿತ್ವದ ಆಹಾರ ನೀಡಲು ಎಲ್ಲ ಜಿಲ್ಲಾಡಳಿತಕ್ಕೆ ಸುತ್ತೋಲೆ ಹೊರಡಿಸಲಾಗಿದೆ.

ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಕೊರೋನ ದೃಢಪಟ್ಟಂತಹವರ ಚಿಕಿತ್ಸೆಗಾಗಿ ಪರ್ಯಾಯ ಖಾಸಗಿ ಆಸ್ಪತ್ರೆಗೆ ಹಾಗೂ ನೋಂದಾಯಿತ ಆಸ್ಪತ್ರೆಗೆ ತುರ್ತು ಇರುವ ವರ್ಗಾವಣೆ ಮಾಡಲು ಸುತ್ತೋಲೆ ಹೊರಡಿಸಲಾಗಿದೆ. 

ಇಂದಿನ ಸೋಂಕಿತರ ವಿವರ:
ರೋಗಿ 84: ತುಮಕೂರಿನ 13 ವರ್ಷದ ಬಾಲಕನಿಗೆ ಸೋಂಕು ದೃಢಪಟ್ಟಿದ್ದು, ಇವರನ್ನು ತುಮಕೂರಿನ ನಿಗದಿತ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿಸಲಾಗಿದೆ.
ರೋಗಿ 85: ನಂಜನಗೂಡಿನ 32 ವರ್ಷದ ವ್ಯಕ್ತಿಯಾಗಿದ್ದು, ಇವರು ಇಲ್ಲಿನ ಔಷಧ ಕಂಪೆನಿಯಲ್ಲಿ ಕೆಲಸ ಮಾಡುತ್ತಿದ್ದರು.
ರೋಗಿ 86: ನಂಜನಗೂಡಿನ 34 ವರ್ಷದ ವ್ಯಕ್ತಿಯಾಗಿದ್ದು,  ಇವರು ಇಲ್ಲಿನ ಔಷಧ ಕಂಪೆನಿಯಲ್ಲಿ ಕೆಲಸ ಮಾಡುತ್ತಿದ್ದರು.
ರೋಗಿ 87: ನಂಜನಗೂಡಿನ 21 ವರ್ಷದ ಯುವಕರಾಗಿದ್ದು,  ಇವರು ಇಲ್ಲಿನ ಔಷಧ ಕಂಪೆನಿಯಲ್ಲಿ ಕೆಲಸ ಮಾಡುತ್ತಿದ್ದರು.
ರೋಗಿ 88: ನಂಜನಗೂಡಿನ 24 ವರ್ಷದ ವ್ಯಕ್ತಿಯಾಗಿದ್ದು,  ಇವರು ಇಲ್ಲಿನ ಔಷಧ ಕಂಪೆನಿಯಲ್ಲಿ ಕೆಲಸ ಮಾಡುತ್ತಿದ್ದರು. ಇವರೆಲ್ಲರೂ ಈ ಹಿಂದೆ ಸೋಂಕು ದೃಢಪಟ್ಟಿದ್ದ ರೋಗಿ 52 ವ್ಯಕ್ತಿಯ ಸಂಪರ್ಕದಲ್ಲಿದ್ದರು. ಇವರೆಲ್ಲರನ್ನೂ ಮೈಸೂರಿನ ನಿಗದಿತ ಆಸ್ಪತ್ರೆಯಲ್ಲಿ ದಾಖಲಿಸಿ, ಸೂಕ್ತ ಚಿಕಿತ್ಸೆಯನ್ನು ನೀಡಲಾಗುತ್ತಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News