ನಾಲ್ವರಿಗೆ ಕೊರೋನ ವೈರಸ್ ದೃಢ ಎಂದು ಹೇಳಿ ಗೊಂದಲ ಮೂಡಿಸಿದ ಸಂಸದ ಪ್ರತಾಪ್ ಸಿಂಹ

Update: 2020-03-30 16:30 GMT

ಮೈಸೂರು: ನಂಜನಗೂಡಿನ ಖಾಸಗಿ ಕಾರ್ಖಾನೆಯಲ್ಲಿನ ಮತ್ತೆ ನಾಲ್ವರಲ್ಲಿ ಕೊರೋನಾ ಸೋಂಕು ದೃಢಪಟ್ಟಿದೆ ಎಂದು ಫೇಸ್ ಬುಕ್ ಲೈವ್ ನಲ್ಲಿ ಅನಧಿಕೃತ ಹೇಳಿಕೆ ನೀಡುವ ಮೂಲಕ ಸಂಸದ ಪ್ರತಾಪ್ ಜಿಲ್ಲಾಡಳಿತದ ಅಸಮಾಧಾನಕ್ಕೆ ಗುರಿಯಾಗಿದ್ದಾರೆ.

ಮೈಸೂರಿನಲ್ಲಿ 8 ಮಂದಿಗೆ ಕೊರೋನಾ ಸೋಂಕು ಇದೆ ಎಂಬ ವಿಷಯ ಕೇಳಿ ಭಯಭೀತರಾಗಿದ್ದ ಜನತೆಗೆ ಸಂಸದ ಪ್ರತಾಪ್ ಸಿಂಹ ಅವರ ಹೇಳಿಕೆ ಮತ್ತಷ್ಟು ಭಯವನ್ನುಂಟು ಮಾಡಿದೆ.

ಫೇಸ್ ಬುಕ್ ಲೈವ್ ನಲ್ಲಿ ಸೋಮವಾರ ಮಾತನಾಡಿರುವ ಅವರು ನಂಜನಗೂಡಿನ ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ವ್ಯಕ್ತಿಗೆ ಕೊರೋನ ದೃಢಪಟ್ಟಿದೆ. ಅವರ ಜೊತೆಯಲ್ಲಿದ್ದ 11 ಜನರನ್ನು ಪರೀಕ್ಷೆಗೊಳಪಡಿಸಿದ್ದು, ಐವರಿಗೆ ಕೊರೋನ ಸೋಂಕು ದೃಢಪಟ್ಟಿದೆ. ಮತ್ತೆ ಇನ್ನೂ ನಾಲ್ವರಲ್ಲಿ ಕೊರೋನಾ ಸೋಂಕು ದೃಢಪಟ್ಟಿದ್ದು ಸದ್ಯದಲ್ಲಿಯೇ ಜಿಲ್ಲಾಧಿಕಾರಿಗಳು ಅಧಿಕೃತ ಘೋಷಣೆ ಮಾಡಲಿದ್ದಾರೆ ಎಂದು ಹೇಳಿಕೆ ನೀಡಿದ್ದಾರೆ.

ಕೊರೋನ ಪಾಸಿಟಿವ್ ಸಂಬಂಧ ಆಯಾ ಜಿಲ್ಲಾಧಿಕಾರಿಗಳ ಹೇಳಿಕೆಯೇ ಅಧಿಕೃತ ಹೊರತು ಬೇರೆಯಾರು ಹೇಳಿಕೆಗಳನ್ನು ನೀಡಬಾರದು ಎಂದು ಮುಖ್ಯಮಂತ್ರಿಗಳೇ ಘೋಷಣೆ ಮಾಡಿದ್ದರೂ ಸಂಸದ ಪ್ರತಾಪ್ ಸಿಂಹ ಮಾತ್ರ ಮುಖ್ಯಮಂತ್ರಿಗಳನ್ನೇ ಮೀರಿ ಹೇಳಿಕೆ ನೀಡಿರುವುದು ಎಷ್ಟು ಸರಿ ಎಂಬ ಪ್ರಶ್ನೆ ಎದ್ದಿದೆ.

ಆರೋಗ್ಯ ಇಲಾಖೆಗೆ ಇಲ್ಲದ ಮಾಹಿತಿ ಸಂಸದ ಪ್ರತಾಪ್ ಸಿಂಹ ಅವರಿಗೆ ಹೇಗೆ ಸಿಕ್ಕಿತು ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಇಲಾಖೆ ಅಧಿಕಾರಿ ಡಾ.ವೆಂಕಟೇಶ್ ಪ್ರಶ್ನಿಸಿದ್ದಾರೆ.

ಶಂಕಿತರ ಸ್ಯಾಂಪಲ್ ಅನ್ನು ಪರೀಕ್ಷೆಗೆ ಕಳುಹಿಸಲಾಗಿದೆ. ಆ ವರದಿಯೇ ಇನ್ನೂ ಬಂದಿಲ್ಲ, ಅಂತಹದರಲ್ಲಿ ಆರೋಗ್ಯ ಇಲಾಖೆಗೆ ಸಿಗದ ವರದಿ ಸಂಸದರಿಗೆ  ಸಿಕ್ಕಿದಿಯಾ ಎಂದು ಹೇಳಿದ್ದಾರೆ.

ಸಂಸದ ಪ್ರತಾಪ್ ಸಿಂಹ ಜಿಲ್ಲಾಧಿಕಾರಿಗಳು ಖಚಿತಪಡಿಸುವ ಮುನ್ನವೇ ಹೇಳಿಕೆ ನೀಡಿರುವುದಕ್ಕೆ ಅಧಿಕಾರಿ ವರ್ಗ ಹಾಗೂ ಸಾರ್ವಜನಿಕರಲ್ಲಿ ಅಸಮಾಧಾನ ವ್ಯಕ್ತವಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News