ಶಾಲಾ ದಾಖಲಾತಿ ಪ್ರಕ್ರಿಯೆ ನಿಲ್ಲಿಸದಿದ್ದರೆ ಕಠಿಣ ಕ್ರಮ: ಸಚಿವ ಸುರೇಶ್‍ ಕುಮಾರ್

Update: 2020-03-30 17:24 GMT

ಬೆಂಗಳೂರು, ಮಾ.30: ಕೊರೋನ ಸೋಂಕಿನ ಹಿನ್ನೆಲೆಯಲ್ಲಿ ದೇಶದಲ್ಲಿ ಆರೋಗ್ಯ ತುರ್ತು ಪರಿಸ್ಥಿತಿಯ ವಾತಾವರಣವಿದ್ದು, ಇಂತಹ ಸಂದರ್ಭದಲ್ಲಿ ಯಾವುದೇ ಶಾಲೆಯಲ್ಲಿ ದಾಖಲಾತಿ ಪ್ರಕ್ರಿಯೆ ಹಾಗೂ ಶುಲ್ಕ ವಸೂಲಾತಿಯನ್ನು ತಕ್ಷಣ ನಿಲ್ಲಿಸಬೇಕು ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಸುರೇಶ್‍ಕುಮಾರ್ ಹೇಳಿದ್ದಾರೆ.

ಈ ಕುರಿತು ಪೇಸ್‍ಬುಕ್‍ನಲ್ಲಿ ವಿಡಿಯೋ ಬಿಡುಗಡೆ ಮಾಡಿರುವ ಅವರು, ಯಾವುದಾದರೂ ಶಾಲೆಯಲ್ಲಿ ದಾಖಲಾತಿ ಅಥವಾ ಶುಲ್ಕ ವಸೂಲಿ ಮಾಡುತ್ತಿದ್ದರೆ ಅವರ ಮೇಲೆ ಕಠಿಣಕ್ರಮ ಕೈಗೊಳ್ಳಲಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.

ರಾಜ್ಯದ ಎಲ್ಲ ಶಿಕ್ಷಕರಿಗೆ ಮಾ.31 ರವರೆಗೆ ನೀಡಲಾಗಿದ್ದ ರಜೆಯನ್ನು ಎ.11 ರವರೆಗೆ ವಿಸ್ತರಿಸಲಾಗಿದೆ. ಯಾವುದೇ ಶಿಕ್ಷಕರು ಕೇಂದ್ರ ಸ್ಥಾನದಿಂದ ಬಿಟ್ಟು ಹೋಗದಿರಲು ಸೂಚನೆ ನೀಡಲಾಗಿದೆ. ಶಿಕ್ಷಕರಿಗೆ ಮನೆಯಿಂದಲೇ ಕೆಲಸ ಮಾಡಲು ತಿಳಿಸಿದ್ದು, ಎ.11ರೊಳಗೆ ಮಾಡಿ ಮುಗಿಸಬೇಕು ಎಂದು ಹೇಳಿದ್ದಾರೆ.

ಕೊರೋನ ಸೋಂಕಿನ ವಿರುದ್ಧ ಹೋರಾಡಲು ಎಲ್ಲ ಶಿಕ್ಷಕರು ಸನ್ನದ್ಧರಾಗಿರಬೇಕು. ಇಲಾಖೆಯಿಂದ ಬರುವ ತುರ್ತು ಕರೆಗಳಿಗೆ ಸ್ಪಂದಿಸಲು ಕೇಂದ್ರ ಸ್ಥಾನದಲ್ಲಿರಬೇಕು. ಇಲಾಖೆ ಕೊಡುವ ಜವಾಬ್ದಾರಿಯನ್ನು ಸಮರ್ಥವಾಗಿ ನಿಭಾಯಿಸಬೇಕು. ನಮ್ಮ ಅಗತ್ಯತೆ ಬಂದರೆ ಸ್ವಲ್ಪವೂ ಹಿಂಜರಿಯದೇ ರಾಷ್ಟ್ರದ ಕಾರ್ಯ ಎಂದು ಕೈ ಜೋಡಿಸಬೇಕು ಎಂದು ಮನವಿ ಮಾಡಿದ್ದಾರೆ.

2020-21 ನೇ ಸಾಲಿನ ವಿದ್ಯಾರ್ಥಿಗಳ ದಾಖಲಾತಿಯನ್ನು ಮುಂದೂಡಬೇಕು ಎಂದು ಈಗಾಗಲೇ ಇಲಾಖೆ ಸೂಚಿಸಿದೆ. ಕೊರೋನ ಹಿನ್ನೆಲೆಯಲ್ಲಿ ಹಲವು ಉಪಕ್ರಮಗಳನ್ನು ಕೈಗೊಂಡಿದೆ. ಮುಂದಿನ ಆದೇಶದವರೆಗೆ ದಾಖಲಾತಿ ಆರಂಭಿಸಬಾರದು ಹಾಗೂ ಶುಲ್ಕಕ್ಕೆ ಒತ್ತಾಯ ಮಾಡಬಾರದು ಎಂದು ಸೂಚನೆ ನೀಡಲಾಗಿದೆ. ಆದರೂ, ಕೆಲವೊಂದು ಖಾಸಗಿ ಶಾಲೆಗಳ ಆಡಳಿತ ಮಂಡಳಿಗಳು ಈ ಕೆಲಸ ಮಾಡುತ್ತಿವೆ. ಅಂತಹ ಶಿಕ್ಷಣ ಸಂಸ್ಥೆಗಳಿಗೆ ನೋಟಿಸ್ ನೀಡಲಾಗಿದೆ. ಕೆಲವು ಪೋಷಕರಿಗೆ ಸಂದೇಶ ಮೂಲಕ ಮಾಹಿತಿ ನೀಡಲಾಗಿದೆ ಎಂದೂ ಹೇಳಿದ್ದಾರೆ.

ಅನೇಕ ಕುಟುಂಬಗಳು ಕೆಲಸವಿಲ್ಲದೆ ಮನೆಯಲ್ಲಿಯೇ ಇವೆ. ಅವರಿಗೆ ಈಗ ಆದಾಯವಿಲ್ಲ. ಇದನ್ನು ಇಲಾಖೆ ಗಂಭೀರವಾಗಿ ಪರಿಗಣಿಸಿದ್ದು, ರಾಜ್ಯದಲ್ಲಿ ಯಾವುದೇ ಪಠ್ಯಕ್ರಮದ ಶಾಲೆಗಳಿಗೆ ದಾಖಲಾತಿ ಪಡೆಯಬಾರದು ಎಂದು ಸೂಚಿಸಲಾಗಿದೆ. ಯಾವ ಶಾಲೆಯೂ ಶುಲ್ಕಕ್ಕೆ ಸಮಯ ನಿಗದಿ ಮಾಡುವಂತಿಲ್ಲ. ಸರಕಾರ ಎಲ್ಲ ವಾತಾವರಣ ಅವಲೋಕನ ಮಾಡಿ ಮುಂದಿನ ಆದೇಶ ಹೊರಡಿಸಲಿದೆ. ಅದಾದ ಬಳಿಕ ಪ್ರತಿಕ್ರಿಯೆ ನೀಡಬೇಕು. ಯಾರಾದರೂ ಉದ್ಧಟತನ ತೋರಿದರೆ ಅವರ ವಿರುದ್ಧ ಕಠಿಣಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.

ಈಗಾಗಲೇ ಪೋಷಕರಿಗೆ ಸೂಚನೆ ನೀಡಿದ್ದರೆ ಅದನ್ನು ಹಿಂಪಡೆಯಬೇಕು. ತಕ್ಷಣ ಎಲ್ಲ ದಾಖಲಾತಿಯನ್ನು ನಿಲ್ಲಿಸಬೇಕು. ಸಾಂಕ್ರಾಮಿಕ ರೋಗಗಳ ಅಧಿನಿಯಮದ ಅಡಿಯಲ್ಲಿಯೂ ಕ್ರಮ ಕೈಗೊಳ್ಳಲು ಅವಕಾಶವಿದೆ. ಅದನ್ನು ಬಳಸಿ ಶಾಲೆಗಳ ವಿರುದ್ಧಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ಹೇಳಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News