ಪೌರಕಾರ್ಮಿಕರು, ಪೊಲೀಸ್, ಆರೋಗ್ಯ ಸಿಬ್ಬಂದಿಯ ಕಾಳಜಿ ವಹಿಸಿ: ಜಗದೀಶ್ ಶೆಟ್ಟರ್

Update: 2020-03-30 18:04 GMT

ಧಾರವಾಡ, ಮಾ.30: ಕೊರೋನ ವೈರಸ್ ತಡೆಯಲು ಸರಕಾರ ಶತಾಯಗತಾಯ ಪ್ರಯತ್ನ ಮಾಡುತ್ತಿದೆ. ಸಮರೋಪಾದಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಪೌರಕಾರ್ಮಿಕರು, ಪೊಲೀಸ್, ಆರೋಗ್ಯ ಇಲಾಖೆ ಸೇರಿದಂತೆ ಆಡಳಿತದ ವಿವಿಧ ಅಗತ್ಯ ಸೇವೆಯಲ್ಲಿರುವ ಇಲಾಖೆಗಳ ಅಧಿಕಾರಿಗಳು ಮತ್ತು ಸಿಬ್ಬಂದಿ ವರ್ಗದವರಿಗೆ ಅವಶ್ಯವಾಗಿರುವ ಸ್ಯಾನಿಟೈಸರ್, ಮಾಸ್ಕ್‍ಗಳನ್ನು ಒದಗಿಸಬೇಕು ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಜಗದೀಶ್ ಶೆಟ್ಟರ್ ತಿಳಿಸಿದರು.

ಸೋಮವಾರ  ಜಿಲ್ಲಾಧಿಕಾರಿಗಳ ಕಚೇರಿ ಸಭಾಗಂಣದಲ್ಲಿ ಕೊರೋನ ನಿಯಂತ್ರಣ ಚಟುವಟಿಕೆಗಳ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಕರ್ತವ್ಯ ನಿರತ ಪೊಲೀಸರಿಗೆ ಸಕಾಲಕ್ಕೆ ಊಟ, ಉಪಾಹಾರ ಲಭ್ಯವಾಗಬೇಕು ಎಂದರು.

ಕೊರೋನ ನಿಯಂತ್ರಣಕ್ಕೆ ವೈದ್ಯರು, ನರ್ಸ್ ಹಾಗೂ ಆರೋಗ್ಯ ಸಿಬ್ಬಂದಿ ಹಗಲಿರಳು ಶ್ರಮಿಸುತ್ತಿದ್ದಾರೆ. ಪೊಲೀಸರು, ಪೌರಕಾರ್ಮಿಕರಿಗೆ ಅಗತ್ಯ ರಕ್ಷಣಾ ಸಾಮಗ್ರಿಗಳು ಹಾಗೂ ಊಟೋಪಚಾರದ ವ್ಯವಸ್ಥೆಯಾಗಬೇಕು ಎಂದು ಜಗದೀಶ್ ಶೆಟ್ಟರ್ ತಿಳಿಸಿದರು.

ಬೇರೆ ಜಿಲ್ಲೆಗಳಿಂದ ವಲಸೆ ಬಂದಿರುವ ಕಾರ್ಮಿಕರಿಗೆ ಜಿಲ್ಲೆಯಲ್ಲಿ ವಸತಿ, ಊಟದ ವ್ಯವಸ್ಥೆ ದೊರೆಯಬೇಕು. ಅಸಂಘಟಿತ ವಲಯದ ಕಾರ್ಮಿಕರು ಉಪವಾಸದಿಂದ ಬಳಲಬಾರದು. ವೃದ್ಧಾಪ್ಯ, ವಿಧವಾ, ವಿಕಲಚೇತನ ಮತ್ತಿತರ ಸಾಮಾಜಿಕ ಭದ್ರತಾ ಯೋಜನೆಗಳ ಮಾಸಾಶನ ಮುಂಚಿತವಾಗಿ ಬಿಡುಗಡೆ ಮಾಡಲು ಸರಕಾರ ನಿರ್ಧರಿಸಿದೆ ಎಂದು ಅವರು ಹೇಳಿದರು.

ಕಿಮ್ಸ್ ನಲ್ಲಿ ಕೊರೋನ ಗಂಟಲು ದ್ರವದ ಮಾದರಿ ಪರೀಕ್ಷೆಯ ಪ್ರಯೋಗಾಲಯ ಸ್ಥಾಪನೆ ಕಾರ್ಯ ಶೀಘ್ರ ಅನುಷ್ಠಾನಗೊಳ್ಳಲು ಕೇಂದ್ರ ಸರಕಾರದ ಮಟ್ಟದಲ್ಲಿಯೂ ಪ್ರಯತ್ನಿಸಲಾಗುತ್ತಿದೆ ಎಂದು ಜಗದೀಶ್ ಶೆಟ್ಟರ್ ಮಾಹಿತಿ ನೀಡಿದರು.

ಹುಬ್ಬಳ್ಳಿ ಧಾರವಾಡ ಅವಳಿ ನಗರದಲ್ಲಿ ಸದ್ಯ 933 ಕಾಯಿಪಲ್ಯ ಮಾರಾಟಗಾರರಿಗೆ ವಲಯವಾರು ಪಾಸುಗಳನ್ನು ನೀಡಲಾಗಿದೆ. ಅವರೆಲ್ಲರೂ ಕಾರ್ಯ ಪ್ರವೃತ್ತರಾಗಿರುವುದರಿಂದ ಸಾರ್ವಜನಿಕರು ಮಾರುಕಟ್ಟೆಗೆ ಬರುವ ಪ್ರಮಾಣ ಗಣನೀಯವಾಗಿ ಇಳಿದಿದೆ. ಈಗಾಗಲೇ 245 ಜನರಿಗೆ ಮನೆ ಮನೆಗಳಿಗೆ ತೆರಳಿ ಕಿರಾಣಿ ಪೂರೈಸಲು ಅನುಮತಿ ನೀಡಲಾಗಿದೆ. ಇವುಗಳ ಸಂಖ್ಯೆಯನ್ನು ಇನ್ನಷ್ಟು ಹೆಚ್ಚಿಸಲಾಗುವುದು ಎಂದು ಮಹಾನಗರ ಪಾಲಿಕೆ ಆಯುಕ್ತ ಡಾ.ಸುರೇಶ್ ಇಟ್ನಾಳ ವಿವರಿಸಿದರು.

ಈ ಬಗ್ಗೆ ಪ್ರತಿಕ್ರಿಯಿಸಿದ ಜಗದೀಶ್ ಶೆಟ್ಟರ್, ಆನ್‍ಲೈನ್‍ನಲ್ಲಿ ಬೇಡಿಕೆ ಸ್ವೀಕರಿಸಿ ವಿವಿಧ ರೆಸ್ಟೊರೆಂಟ್‍ಗಳಿಂದ ಪಾರ್ಸೆಲ್ ಸೇವೆ ನೀಡುವ ಖಾಸಗಿ ಏಜೆನ್ಸಿಗಳಿಗೆ ಅನುಮತಿ ನೀಡಿ ಪ್ರೋತ್ಸಾಹಿಸಬೇಕು ಎಂದು ಸೂಚಿಸಿದರು.

ಕಿಮ್ಸ್ ನಿರ್ದೇಶಕ ಡಾ.ರಾಮಲಿಂಗಪ್ಪ ಅಂಟರಠಾಣಿ ಮಾತನಾಡಿ, ಕಿಮ್ಸ್‍ನಲ್ಲಿ ಸೇವೆ ಸಲ್ಲಿಸುತ್ತಿರುವ ವೈದ್ಯರು, ನರ್ಸಿಂಗ್ ಹಾಗೂ ಸಹಾಯಕ ಸಿಬ್ಬಂದಿಗಳಿಗೆ ಸದ್ಯ 600 ಪರ್ಸ್‍ನಲ್ ಪ್ರೊಟೆಕ್ಷನ್ ಗೇರ್‍ಗಳಿವೆ. ಎನ್ 95 ಮಾಸ್ಕ್‍ಗಳು 4100 ರಷ್ಟಿವೆ. ಹೆಚ್ಚಿನ ಸಾಮಗ್ರಿಗಳಿಗೆ ಬೇಡಿಕೆಗಳನ್ನು ಸಲ್ಲಿಸಲಾಗುತ್ತಿದೆ ಎಂದರು.

ಕೊರೋನ ಪ್ರಯೋಗಾಲಯ ಸ್ಥಾಪನೆಗೆ ಹೆಚ್ಚುವರಿ ಕಿಟ್‍ಗಳನ್ನು ತರಿಸಲಾಗಿದೆ. ಅಗತ್ಯ ಉಪಕರಣಗಳನ್ನು ತರಿಸಲಾಗಿದೆ. ಹೊಸದಿಲ್ಲಿಯ ಐಸಿಎಂಆರ್ ಅನುಮತಿಗೆ ರಾಜ್ಯದಿಂದ ಬೆಂಗಳೂರಿನ ಡಾ.ಮಂಜುನಾಥ ಸಮನ್ವಯ ಮಾಡುತ್ತಿದ್ದಾರೆ ಎಂದು ಅವರು ವಿವರಿಸಿದರು.

ಜಿಲ್ಲಾಧಿಕಾರಿ ದೀಪಾ ಚೋಳನ್ ಮಾತನಾಡಿ, ಕೊರೋನ ಶಂಕಿತ ವ್ಯಕ್ತಿಗಳನ್ನು ಅವರ ಮನೆಗಳಲ್ಲಿ ಕ್ವಾರಂಟೈನ್ ಮಾಡುವುದಕ್ಕಿಂತ ಸರಕಾರಿ ಕ್ವಾರಂಟೈನ್ ಮಾಡಲು ಕಟ್ಟಡಗಳನ್ನು ಗುರುತಿಸಲಾಗಿದೆ. ಲಾಕ್‍ಡೌನ್ ಅವಧಿಯಲ್ಲಿ ಎಲ್ಲ ಸರಕು ಸೇವೆಗಳ ಪೂರೈಕೆ ಮಾಡುವ ಲಾರಿಗಳ ಸಂಚಾರಕ್ಕೆ ಅನುಮತಿ ಸರಕಾರ ನೀಡಿದೆ ಎಂದರು.

ಆಹಾರ ಸಂಸ್ಕರಣಾ ಘಟಕಗಳು, ಕೋಳಿ, ಪಶು ಪ್ರಾಣಿಗಳ ಆಹಾರ ಉತ್ಪನ್ನ ಘಟಕಗಳು ಕಾರ್ಯ ನಿರ್ವಹಿಸುತ್ತಿವೆ. ನಿರಾಶ್ರಿತ ಕೂಲಿಕಾರರಿಗೆ ಆಹಾರ ಪೊಟ್ಟಣಗಳನ್ನು ಪೂರೈಸಲು ಕ್ರಮ ಕೈಗೊಳ್ಳಲಾಗಿದೆ ಎಂದು ಅವರು ವಿವರಿಸಿದರು.

ಸಭೆಯಲ್ಲಿ ಹುಬ್ಬಳ್ಳಿ ಧಾರವಾಡ ಪೊಲೀಸ್ ಆಯುಕ್ತ ಆರ್.ದಿಲೀಪ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವರ್ತಿಕಾ ಕಟಿಯಾರ್, ಜಿ.ಪಂ.ಸಿಇಓ ಡಾ.ಬಿ.ಸಿ.ಸತೀಶ, ಅಪರ ಜಿಲ್ಲಾಧಿಕಾರಿ ಶಿವಾನಂದ ಕರಾಳೆ,  ಉಪ ವಿಭಾಗಾಧಿಕಾರಿ ಮಹಮ್ಮದ ಝುಬೇರ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News