ಬಳ್ಳಾರಿ: ಲಾಕ್‍ಡೌನ್ ಆದೇಶ ಉಲ್ಲಂಘಿಸಿ ಜಾತ್ರಾ ರಥೋತ್ಸವ

Update: 2020-03-30 18:17 GMT

ಬಳ್ಳಾರಿ, ಮಾ.30: ಕೋವಿಡ್-19 ಹಿನ್ನೆಲೆ ಈಗಾಗಲೆ ದೇಶದಾದ್ಯಂತ ಲಾಕ್‍ಡೌನ್ ಘೋಷಿಸಲಾಗಿದೆ. ಕೊರೋನ ವೈರಸ್ ಸೋಂಕು ವ್ಯಾಪಕವಾಗಿ ಹರಡದಂತೆ ತಡೆಗಟ್ಟುವ ಹಾಗು ಅದರ ಸರಪಳಿಯನ್ನು ತುಂಡರಿಸುವ ನಿಟ್ಟಿನಲ್ಲಿ ಜಿಲ್ಲಾಡಳಿತ ಸಿಆರ್‍ಪಿಸಿ ಸೆಕ್ಷನ್144 ಅನ್ವಯ ಕರ್ಫ್ಯೂ ಜಾರಿಗೊಳಿಸಲಾಗಿದ್ದರೂ ಹೊಸಪೇಟೆ ತಾಲೂಕಿನ ಮರಿಯಮ್ಮನಹಳ್ಳಿಯಲ್ಲಿ ಆದೇಶ ಉಲ್ಲಂಘಿಸಿ ಕಾಳಿಕಾದೇವಿ ರಥೋತ್ಸವ ನಡೆಸಲಾಗಿದ್ದು, ಈ ಹಿನ್ನೆಲೆಯಲ್ಲಿ 15 ಜನರ ಮೇಲೆ ಪ್ರಕರಣ ದಾಖಲಿಸಲಾಗಿದೆ.

ಗೊಲ್ಲರಹಳ್ಳಿ ಗ್ರಾಮದ ಮುಖಂಡರಾದ ಕಾಳಪ್ಪ ಫಕ್ಕಿರಪ್ಪ(42), ಜಿ.ಬಿ.ನಾಗರಾಜ(50), ದಾಸರ ವೆಂಕಟೇಶ(46), ಕೋಮಾರಪ್ಪ(70), ಅನಂತಪ್ಪ(58), ಸುರೇಶ ಮೈಲಪ್ಪ(36), ಕೆಂಚಪ್ಪ ಕಾಳಪ್ಪ(45), ಸಣ್ಣ ಹನುಮಂತಪ್ಪ(85), ನಾಗರಾಜ ಬನ್ನಿಯಪ್ಪ(40), ಈರಮ್ಮನವರ್ ಕೆಂಚಪ್ಪ(70), ಪುರ್ಲಿ ಕಾಳಶ್ರಪ್ಪ(40), ಸೋಮಪ್ಪ ಹುಚ್ಚಪ್ಪ(32), ಸುಣಗಾರ ದುರ್ಗೇಶ(37), ಗುರಿಕಾರ ಕಾಳಪ್ಪ ಮತ್ತು ಬಲವಂತಪ್ಪ ಮೇಲೆ ಮರಿಯಮ್ಮನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಸರಕಾರ ಹಾಗೂ ಜಿಲ್ಲಾಧಿಕಾರಿಗಳ ಆದೇಶ ಉಲ್ಲಂಘಿಸಿ 5ಕ್ಕಿಂತ ಹೆಚ್ಚು ಜನ ಸೇರಿ ಸಾಮಾಜಿಕ ಅಂತರವನ್ನು ಕಾಪಾಡಿಕೊಳ್ಳದೆ ಪ್ರಾಣಕ್ಕೆ ಅಪಾಯಕಾರಿಯಾದ ಕೊರೋನ ವೈರಸ್ ಸಾಂಕ್ರಾಮಿಕ ರೋಗವು ಹರಡುತ್ತದೆ ಅಂತ ಗೊತ್ತಿದ್ದರೂ ನಿರ್ಲಕ್ಷ್ಯ ವಹಿಸಿ ಸರಕಾರದ ಆದೇಶವನ್ನು ಉಲ್ಲಂಘನೆ ಮಾಡಿ ರಥವನ್ನು ಎಳೆಯಲಾಗಿದೆ. ರಥ ಎಳೆಯುವ ಸಮಯದಲ್ಲಿ ಗ್ರಾಮದ ಜಿ.ಬಿ.ನಾಗರಾಜ ಅವರ ಕಾಲಿನ ಮೇಲೆ ರಥದ ಚಕ್ರ ಹಾಯ್ದು ಕಾಲಿಗೆ ರಕ್ತಗಾಯವಾಗಿದ್ದು, ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಗ್ರಾಮದಲ್ಲಿ ಈ ಮುಂಚೆ ತೆರಳಿ ರಥೋತ್ಸವ ಜರುಗಿಸದಂತೆ ಹಾಗೂ ಕೊರೋನ ವೈರಸ್ ಕುರಿತು ತಿಳುವಳಿಕೆ ನೀಡಿ ಬರಲಾಗಿದೆ. ಆದರೂ, ಮಾ.29ರಂದು ಆದೇಶ ಉಲ್ಲಂಘಿಸಿ ರಥೋತ್ಸವ ಜರುಗಿಸಲಾಗಿದೆ ಎಂದು ಡಣಾಯನ ಕೆರೆ ಪಿಡಿಒ ಜಿಲಾನ್ ರಝಾಕ್ ಸಾಬ್ ಪೊಲೀಸ್ ಠಾಣೆಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News