ಕೊರೋನ ವೈರಸ್ ಹಾವಳಿ: ಕೇಂದ್ರ ಆರೋಗ್ಯ ಸಚಿವರಿಗೆ ಶ್ರೀರಾಮುಲು ವಿವರಣೆ

Update: 2020-03-30 18:18 GMT

ಬೆಂಗಳೂರು, ಮಾ.30: ರಾಜ್ಯದಲ್ಲಿ ಕೊರೋನ ಪೀಡಿತರ ಬಗ್ಗೆ ಸರಕಾರ ಕೈಗೊಂಡಿರುವ ಕಾರ್ಯಗಳ ಬಗ್ಗೆ ಕೇಂದ್ರ ಆರೋಗ್ಯ ಸಚಿವ ಡಾ.ಹರ್ಷವರ್ಧನ್, ರಾಜ್ಯದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಬಿ.ಶ್ರೀರಾಮುಲುಗೆ ಸೋಮವಾರ ದೂರವಾಣಿ ಕರೆ ಮಾಡಿ ಮಾಹಿತಿ ಪಡೆದುಕೊಂಡರು.

ಈಗಾಗಲೆ ನಾನು ಕಲಬುರ್ಗಿ, ಬೆಳಗಾವಿ, ಮಂಗಳೂರು, ಮಂಡ್ಯ, ರಾಮನಗರ, ಕೋಲಾರ, ಬೆಂಗಳೂರು ಸೇರಿದಂತೆ ಹಲವು ಜಿಲ್ಲೆಗಳಿಗೆ ಭೇಟಿ ಕೊಟ್ಟಿದ್ದೇನೆ. ರಾಜ್ಯದಲ್ಲಿರುವ 83 ಕೊರೋನ ಪಾಸಿಟಿವ್ ಪ್ರಕರಣಗಳಲ್ಲಿ ಮೂರು ಮಂದಿ ಮೃತಪಟ್ಟಿದ್ದಾರೆ ಎಂದು ಶ್ರೀರಾಮುಲು ತಿಳಿಸಿದರು.

ಈ ಕೊರೋನ ಸೋಂಕಿತರಲ್ಲಿ ಶೇ.80ರಷ್ಟು ರೋಗಿಗಳು ಗುಣಮುಖರಾಗುತ್ತಾರೆ. ಶೇ.20ರಷ್ಟು ರೋಗಿಗಳಿಗೆ ರೋಗ ನಿರೋಧಕ ಶಕ್ತಿ ಹೆಚ್ಚಿಸಬೇಕು. ಅದರಲ್ಲಿ ಶೇ.3ರಷ್ಟು ಕೊರೋನ ಸೋಂಕಿತರಿಗೆ ಮಾತ್ರ ವೆಂಟಿಲೇಟರ್‍ನಲ್ಲಿಡಬೇಕು ಎಂದು ಅವರು ಹೇಳಿದರು.
ನಮ್ಮಲ್ಲಿ ಎರಡು ರೋಗಿಗಳಿಗೆ ಮಾತ್ರ ಇಲ್ಲಿವರೆಗೆ ವೆಂಟಿಲೇಟರ್ ಬೇಕಿದೆ. ಆದರೆ, ಕೊರೋನ ಸೋಂಕು ತಗುಲಿದ ಮೂರು ರೋಗಿಗಳು ಸೋಂಕು ಹಾಗೂ ಇತರ ಅನಾರೋಗ್ಯ ಕಾರಣದಿಂದ ಮೃತಪಟ್ಟಿದ್ದಾರೆ. ನಮ್ಮಲ್ಲಿ 734 ವೆಂಟಿಲೇಟರ್‍ಗಳು ಇವೆ ಎಂದು ಶ್ರೀರಾಮುಲು ತಿಳಿಸಿದರು.

ನಂಜನಗೂಡು, ಶಿರಾ ಪಾಸಿಟಿವ್ ಪ್ರಕರಣಗಳ ಸಂಚಾರ ವಿವರ(ಟ್ರಾವೆಲ್ ಹಿಸ್ಟರಿ)ಯನ್ನು ಗಮನಿಸುತ್ತಿದ್ದೇವೆ. ನಮ್ಮಲ್ಲಿ ರೋಗಿಗಳ ಸಂಖ್ಯೆ ಹೆಚ್ಚಿದ್ದರೂ ಅದರ ತೀವ್ರತೆ ಕಡಿಮೆ ಇದೆ ಎಂಬ ಸಮಗ್ರ ಮಾಹಿತಿಯನ್ನು ಕೇಂದ್ರ ಆರೋಗ್ಯ ಸಚಿವರಿಗೆ ಶ್ರೀರಾಮುಲು ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News