ಹೊಸಪೇಟೆಯಲ್ಲಿ ಮೂವರಿಗೆ ಕೊರೋನ ಸೋಂಕು ದೃಢ: ಜಿಲ್ಲಾಧಿಕಾರಿ ಎಸ್.ಎಸ್. ನಕುಲ್

Update: 2020-03-31 08:02 GMT

ಬಳ್ಳಾರಿ: ಜಿಲ್ಲೆಯ ಹೊಸಪೇಟೆ ನಗರದ ಮೂವರಿಗೆ ಕೊರೋನ ಸೋಂಕು ಇರುವುದು ದೃಢವಾಗಿದೆ ಎಂದು ಜಿಲ್ಲಾಧಿಕಾರಿ ಎಸ್.ಎಸ್.ನಕುಲ್ ತಿಳಿಸಿದ್ದಾರೆ.

ಮೂರು ಜನರಲ್ಲಿ ಸೋಂಕಿನ‌ ಲಕ್ಷಣಗಳು ಕಂಡು ಬಂದ ಹಿನ್ನೆಲೆಯಲ್ಲಿ ಅವರನ್ನು ಬಳ್ಳಾರಿ ‌ಜಿಲ್ಲಾಸ್ಪತ್ರೆಗೆ ದಾಖಲಿಸಿ ಗಂಟಲು ದ್ರವ್ಯವನ್ನು ಸಂಗ್ರಹಿಸಿ ಪ್ರಯೋಗಾಲಯಕ್ಕೆ ಕಳುಹಿಸಿಕೊಡಲಾಗಿತ್ತು. ಈಗ ವರದಿ ಪಾಸಿಟಿವ್ ಅಂತ ಬಂದಿದೆ. ಸೋಂಕಿತರಿಗೆ ಮುಂದಿನ ಚಿಕಿತ್ಸೆಯನ್ನು ಜಿಲ್ಲಾಸ್ಪತ್ರೆಯಲ್ಲಿ ನೀಡಲಾಗುವುದು ಎಂದರು.

ಕಂಟೇನ್ಮೆಂಟ್ ಝೋನ್ (ನಿಯಂತ್ರಿತ ಪ್ರದೇಶ)

ಕೊರೋನ ಪಾಸಿಟಿವ್ ಕೇಸ್ ಬಂದ ಸ್ಥಳವನ್ನು ಕಂಟೇನ್ಮೆಂಟ್ ಝೋನ್ ಎಂದು ಪರಿಗಣಿಸಲಾಗುವುದು. ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಮಂತ್ರಾಲಯದ ಗೈಡ್ ಲೈನ್ಸ್ ಗಳನ್ನು ಪಾಲಿಸಬೇಕಾಗುತ್ತದೆ. ಹೊಸಪೇಟೆ ನಗರಸಭೆ ವ್ಯಾಪ್ತಿಯನ್ನು ನಿಯಂತ್ರಿತ ಪ್ರದೇಶವಾಗಿ ಕೈಗೆತ್ತಿಕೊಳ್ಳಲಾಗುವುದು. ಯಾವುದೇ ರೀತಿಯ ವಾಹನ ಸಂಚಾರ ಆಗಲಿ ಅಥವಾ ಜನರ ಓಡಾಟವಾಗಲಿ ಅಥವಾ ಹೊರಗಡೆಯಿಂದ ಒಳಗಡೆ ಬರುವುದಕ್ಕೆ ಅವಕಾಶವಿರುವುದಿಲ್ಲ ಎಂದು ತಿಳಿಸಿದರು.

ಬೆಳಗ್ಗೆ 9ರಿಂದ 10ರವರೆಗೆ ಮಾತ್ರ ಜನರಿಗೆ ಅಗತ್ಯ ವಸ್ತುಗಳ ಖರೀದಿಗೆ ಅವಕಾಶ ಮಾಡಿಕೊಡಲಾಗುತ್ತದೆ. ಎಲ್ಲ ರಸ್ತೆಗಳಲ್ಲಿ ಬಂದೋಬಸ್ತ್    ನಿಯೋಜಿಸಲಾಗಿರುತ್ತದೆ. ಮನೆಯ ಒಬ್ಬರಿಗೆ ಮಾತ್ರ ಹೊರಬರಲು ಅವಕಾಶವಿರುತ್ತದೆ. ತಮ್ಮ ಹತ್ತಿರದ ಅಂಗಡಿಗಳಲ್ಲಿಯೇ ಖರೀದಿ ಮಾಡಬೇಕಾಗುತ್ತದೆ ಎಂದರು.

ಮನೆ-ಮನೆ ಸಮೀಕ್ಷೆ

ಮಾ.31ರಿಂದ ಆಶಾ ಮತ್ತು ಅಂಗನವಾಡಿ ಕಾರ್ಯಕರ್ತೆಯರಿಂದ ಮನೆ ಮನೆ ಸಮೀಕ್ಷೆ ನಡೆಯಲಿದೆ. ಅವರು ಪ್ರತಿ ಮನೆಗಳಿಗೆ ಭೇಟಿ ನೀಡಿ ಮನೆಯಲ್ಲಿರುವವರಿಗೆ ಕೆಮ್ಮು, ನೆಗಡಿ, ಜ್ವರ ಇತ್ಯಾದಿ ಲಕ್ಷಣಗಳಿದ್ದಲ್ಲಿ ಅವರ ವಿವರಗಳನ್ನು ಪಡೆದುಕೊಳ್ಳಲಿದ್ದಾರೆ. ಈ ಸಂದರ್ಭ ಜನರು ಅವರೊಂದಿಗೆ ಸಹಕರಿಸಬೇಕು ಎಂದು ಜಿಲ್ಲಾಧಿಕಾರಿ ಎಸ್.ಎಸ್ ನಕುಲ್ ಅವರು ತಿಳಿಸಿದ್ದಾರೆ.

ಕೆಮ್ಮು, ನೆಗಡಿ, ಜ್ವರದ ಲಕ್ಷಣಗಳಿಂದ ಬಳಲುತಿದ್ದಲ್ಲಿ ಅವರಿಗಾಗಿಯೇ ಕ್ಲಿನಿಕ್ ಆರಂಭಿಸಲಾಗಿದ್ದು, ಆಕಾಶವಾಣಿ ಹತ್ತಿರ, ಟಿಬಿ ಡ್ಯಾಂ ಹೆಲ್ತ್ ಸೆಂಟರ್, ಹೊಸ ಎಂಸಿಎಚ್ ಆಸ್ಪತ್ರೆಯಲ್ಲಿ ವಿಶೇಷ ತಪಾಸಣೆ ನಡೆಯುತ್ತಿದ್ದು, ಲಕ್ಷಣಗಳು ಇದ್ದವರು ಅಲ್ಲಿ ತಪಾಸಣೆ ಮಾಡಿಸಿಕೊಳ್ಳಬೇಕು ಎಂದು ಅವರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News