ಚಿಕ್ಕಮಗಳೂರು: ಜಿಲ್ಲಾದ್ಯಂತ ಲಾಕ್‍ಡೌನ್ ಆದೇಶಕ್ಕೆ ಉತ್ತಮ ಸ್ಪಂದನೆ

Update: 2020-03-31 12:03 GMT

ಚಿಕ್ಕಮಗಳೂರು, ಮಾ.31: ಕೋವಿಡ್-19 ಸೋಂಕು ನಿಯಂತ್ರಣಕ್ಕೆ ದೇಶಾದ್ಯಂತ ಜಾರಿ ಮಾಡಿರುವ ಲಾಕ್‍ಡೌನ್ ಆದೇಶಕ್ಕೆ ಜಿಲ್ಲಾದ್ಯಂತ ಸಾರ್ವಜನಿಕರು ಉತ್ತಮವಾಗಿ ಸ್ಪಂದಿಸುತ್ತಿದ್ದಾರೆ. ದೇಶಾದ್ಯಂತ ಕೊರೋನ ಸೋಂಕಿತರ ಸಂಖ್ಯೆ ಹೆಚ್ಚುತ್ತಿರುವಂತೆ ಜಿಲ್ಲೆಯ ಜನರಲ್ಲೂ ಆತಂಕ ಹೆಚ್ಚುತ್ತಿದ್ದು, ಲಾಕ್‍ಡೌನ್ ಆದೇಶಕ್ಕೆ ಬೆಂಬಲ ನೀಡುತ್ತಿರುವ ಜನರು ಮನೆಗಳಿಂದ ಹೊರಬರುವುದನ್ನೂ ಕಡಿಮೆ ಮಾಡಿದ್ದಾರೆ. ಇದರಿಂದಾಗಿ ಪೊಲೀಸರ ತಲೆನೋವು ಕಡಿಮೆಯಾಗಿದೆಯಾದರೂ ಅಗತ್ಯ ವಸ್ತುಗಳಿಗಾಗಿ ಜನರ ಪರದಾಟ ಮಾತ್ರ ಮತ್ತಷ್ಟು ಹೆಚ್ಚುತ್ತಲೇ ಇದೆ.

ಜನರ ಸಂಚಾರ ನಿಯಂತ್ರಣಕ್ಕೆಂದು ನಗರದ ಎಂ.ಜಿ. ರಸ್ತೆ ಐಜಿ ರಸ್ತೆ, ಮಾರ್ಕೆಟ್ ರಸ್ತೆ, ಹನುಮಂತಪ್ಪ ವೃತ್ತ, ಮಲ್ಲಂದೂರು ಸರ್ಕಲ್‍ಗಳಲ್ಲಿ ಚೆಕ್‍ಪೋಸ್ಟ್ ಗಳನ್ನು ನಿರ್ಮಿಸಲಾಗಿದೆ. ಅಗತ್ಯ ವಸ್ತುಗಳಿಗಾಗಿ ಮನೆಗಳಿಂದ ಹೊರಬಂದ ಜನರನ್ನು ಅಲ್ಲಲ್ಲಿ ಹಾಕಲಾಗಿರುವ ಚೆಕ್‍ಪೋಸ್ಟ್ ಗಳಲ್ಲಿ ವಿಚಾರಣೆ ಮಾಡಿ ಕಳಿಸುತ್ತಿದ್ದ ಪೊಲೀಸರು ಅನಗತ್ಯವಾಗಿ, ಸಕಾರಣವಿಲ್ಲದೇ ಹೊರ ಬಂದವರ ಬೈಕ್, ಕಾರುಗಳನ್ನು ಸೀಝ್ ಮಾಡುತ್ತಿದ್ದ, ದಂಡ ವಿಧಿಸುತ್ತಿದ್ದ ದೃಶ್ಯಗಳೂ ಕಂಡು ಬಂದವು. ಜನರು ಹೆಚ್ಚಾಗಿ ಸಂಚರಿಸುತ್ತಿದ್ದ ಮಾರ್ಕೆಟ್ ರಸ್ತೆಯಲ್ಲಿ ಎರಡು ಕಡೆಗಳಲ್ಲಿ ಮಂಗಳವಾರ ಚೆಕ್‍ಪೋಸ್ಟ್ ಗಳನ್ನು ಹಾಕಿದ್ದ ಪರಿಣಾಮ ಇಂದು ಈ ರಸ್ತೆಯಲ್ಲಿ ಸಾರ್ವಜನಿಕರ ಬೈಕ್, ಕಾರುಗಳ ಓಡಾಟ ಕಡಿಮೆ ಇತ್ತು. ನಗರದಲ್ಲಿ ಸರಕು ಸಾಗಣೆ ವಾಹನಗಳ ಸಂಚಾರ ಅಬಾಧಿತವಾಗಿತ್ತು.

ಸಂಪೂರ್ಣ ಲಾಕ್‍ಡೌನ್ ಹಿನ್ನೆಲೆಯಲ್ಲಿ ವ್ಯಾಪಾರ ಮಾಡಲು ಜಿಲ್ಲಾದ್ಯಂತ ದಿನಸಿ, ಮಾಂಸ, ತರಕಾರಿ ಅಂಗಡಿಗಳ ಮಾಲಕರಿಗೆ ಜಿಲ್ಲಾಡಳಿತ ಪಾಸ್ ವಿತರಣೆ ಮಾಡಿದ್ದು, ಈ ಪಾಸ್ ಹೊಂದಿದವರು ಮಾತ್ರ ವ್ಯಾಪಾರ ಮಾಡಲು ಅನುವು ಮಾಡಿಕೊಡಲಾಗಿದೆ. ಅದರಂತೆ ನಗರದ ಅಲಲ್ಲಿ ತೆರೆದಿದ್ದ ದಿನಸಿ, ತರಕಾರಿ, ಮಾಂಸದ ಅಂಗಡಿಗಳು, ಮೆಡಿಕಲ್ ಶಾಪ್‍ಗಳು, ಖಾಸಗಿ ಆಸ್ಪತ್ರೆಗಳಲ್ಲಿ ಸಾರ್ವಜನಿಕರು ಮಂಗಳವಾರವೂ ಕಂಡು ಬಂದರು.  ಮಾಸ್ಕದ ಧರಿಸದೇ  ಮನೆಗಳಿಂದ ಹೊರ ಬಂದವರಿಗೆ ಪೊಲೀಸರು ಎಚ್ಚರಿಕೆ ನೀಡುತ್ತಿದ್ದ ದೃಶ್ಯಗಳೂ ಮಂಗಳವಾರ ಅಲಲ್ಲಿ ಕಂಡುಬಂದವು.

ಇನ್ನು ನಗರದಲ್ಲಿ ಜಿಲ್ಲಾಧಿಕಾರಿ ಕಚೇರಿ, ತಾಲೂಕು ಕಚೇರಿ, ಜಿಲ್ಲಾ ಪಂಚಾಯತ್ ಕಚೇರಿ ಸೇರಿದಂತೆ ವಿವಿಧ ಸರಕಾರಿ ಇಲಾಖೆಗಳ ಕಚೇರಿಗಳು ಎಂದಿನಂತೆ ಕಾರ್ಯನಿರ್ವಹಿಸಿದರೂ ಸಿಬ್ಬಂದಿ ಸಂಖ್ಯೆ ವಿರಳವಾಗಿತ್ತು. ಕಚೇರಿಗಳಲ್ಲಿ ಸಾರ್ವಜನಿಕರ ಸುಳಿವೇ ಇರಲಿಲ್ಲ. ನಗರದಲ್ಲಿ ಇಂದಿರಾಕ್ಯಾಂಟೀನ್ ಎಂದಿನಂತೆ ಕಾರ್ಯನಿರ್ವಹಿಸಿದ್ದು, ಅನ್ನಾಹಾರ ಇಲ್ಲದೇ ಪರದಾಡುವವರ ಪಾಲಿಗೆ ಇಂದಿರಾ ಕ್ಯಾಂಟಿನ್ ಆಸರೆಯಾಗಿತ್ತು. ಇನ್ನು ಬಿಸಿಲಿನಲ್ಲಿ ನಿಂತು ಕರ್ತವ್ಯ ನಿರ್ವಹಿಸುತ್ತಿರುವ ಪೊಲೀಸ್ ಸಿಬ್ಬಂದಿ ಹಾಗೂ ನಿರ್ಗತಿಕರಿಗೆ ಸಂಘ ಸಂಸ್ಥೆಗಳು ಮಧ್ಯಾಹ್ನ ಹಾಗೂ ರಾತ್ರಿ ವೇಳೆ ಊಟ, ನೀರು ವಿತರಣೆ ಮಾಡುತ್ತಿದ್ದ ದೃಶ್ಯಗಳು ಕಂಡುಬಂತು. 

ಇನ್ನು ಗ್ರಾಮೀಣ ಪ್ರದೇಶಗಳಲ್ಲಿ ಲಾಕ್‍ಡೌನ್ ಆದೇಶದಿಂದಾಗಿ ಕಾರ್ಮಿಕರಿಗೆ, ಬಡಜನರಿಗೆ ಕೆಲಸವಿಲ್ಲದ ಪರಿಸ್ಥಿತಿ ನಿರ್ಮಾಣವಾಗಿದ್ದು, ಇಂತಹ ಕುಟುಂಬಗಳ ನ್ಯಾಯಬೆಲೆ ಅಂಗಡಿಗಳ ಪಡಿತರಗಳನ್ನೇ ನಂಬಿಕೊಂಡು ಬದುಕುವಂತಾಗಿದೆ. ಗ್ರಾಮೀಣ ಭಾಗದ ದಿನಸಿ ಅಂಗಡಿಗಳಿಗೆ ಅಗತ್ಯ ವಸ್ತುಗಳ ಪೂರೈಕೆಯೂ ವಿಳಂಬವಾಗುತ್ತಿರುವ ಬಗ್ಗೆ ಆರೋಪಗಳಿದ್ದು, ಇಂತಹ ಸಮಸ್ಯೆ ಇರುವ ಭಾಗದಲ್ಲಿ ಜಿಲ್ಲಾ ಪೊಲೀಸ್ ಇಲಾಖೆ ನೇತೃತ್ವದಲ್ಲಿ ವ್ಯಾಪಾರಿಗಳು ದಿನಸಿ ವಸ್ತುಗಳು ಸೇರಿದಂತೆ ಹಣ್ಣು, ತರಕಾರಿಗಳನ್ನು ಸರಬರಾಜು ಮಾಡಲಾರಂಭಿಸಿದ್ದು, ಗ್ರಾಮೀಣ ಭಾಗದ ಸಾರ್ವಜನಿಕರಿಗೆ ಮನೆ ಬಾಗಿಲಲ್ಲೇ ಅಗತ್ಯ ವಸ್ತುಗಳು ಸಿಗುವಂತಾಗಲು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕ್ರಮವಹಿಸಿದ್ದಾರೆ. ಜಿಲ್ಲೆಯ ವಿವಿಧೆಡೆ ಉತ್ತರ ಕರ್ನಾಟಕದಿಂದ ವಲಸೆ ಬಂದಿರುವ ಕಾರ್ಮಿಕರ ಕುಟುಂಬಗಳು ಇಂತಹ ಸಮಸ್ಯೆ ಸಿಲುಕದಂತೆ ಎಸ್ಪಿ ಹರೀಶ್ ಪಾಂಡೆ ಅವರು ಸಮಸ್ಯೆಯಲ್ಲಿರುವ ಕುಟುಂಬಗಳು, ಕಾರ್ಮಿಕರ ಮಾಹಿತಿ ಸಂಗ್ರಹಿಸಿ ಅಗತ್ಯ ವಸ್ತುಗಳನ್ನು ಪೂರೈಸುವ ನಿಟ್ಟಿನಲ್ಲಿ ಕಳೆದ ಮೂರು ದಿನಗಳಿಂದ ಶ್ರಮಿಸುತ್ತಿದ್ದಾರೆ.

ಲಾಕ್‍ಡೌನ್ ಹಿನ್ನೆಲೆಯಲ್ಲಿ ಜಿಲ್ಲಾದ್ಯಂತ ಅಗತ್ಯ ವಸ್ತುಗಳ ಮಾರಾಟದ ಅಂಗಡಿಗಳನ್ನು ತೆರೆಯಲು ಜಿಲ್ಲಾಡಳಿತ ಪಾಸ್ ವಿತರಣೆ ಮಾಡಿ ಅವಕಾಶ ಕಲ್ಪಿಸಿದೆ. ಅದರಂತೆ ನಗರ ಸೇರಿದಂತೆ ಪಟ್ಟಣ, ಹಳ್ಳಿ ಹಳ್ಳಿಗಳಲ್ಲೂ ತರಕಾರಿ, ಮಾಂಸ, ದಿನಸಿ ಅಂಗಡಿಗಳು ಎಂದಿನಂತೆ ಕಾರ್ಯನಿರ್ವಹಿಸುತ್ತಿವೆ. ಆದರೆ ಕೆಲ ಅಂಗಡಿಗಳ ಮಾಲಕರು ನಗರ ಸೇದಂತೆ ಜಿಲ್ಲಾದ್ಯಂತ ಅಗತ್ಯವಸ್ತುಗಳ ಸರಬರಾಜಿಲ್ಲ ಎಂಬ ನೆಪವೊಡ್ಡಿ ಕೆಲ ವಸ್ತುಗಳ ಬೆಲೆ ಏರಿಕೆ ಮಾಡಿ ಮಾರಾಟ ಮಾಡುತ್ತಿದ್ದಾರೆಂಬ ಆರೋಪ ಕೇಳಿ ಬರುತ್ತಿವೆ. ಬೀಡಿ, ಸಿಗರೇಟು, ಅಕ್ಕಿ, ಎಣ್ಣೆ, ಸಾಬೂನು ಸೇರಿದಂತೆ ಅಗತ್ಯ ವಸ್ತುಗಳ ಎಂ ಆರ್ ಪಿ ಬೆಲೆಗಿಂತ ಎರಡು ಮೂರು ರೂ. ಹೆಚ್ಚಿನ ದರಕ್ಕೆ ವಸ್ತುಗಳನ್ನು ಮಾರಾಟ ಮಾಡುತ್ತಿದ್ದಾರೆಂಬ ಆರೋಪ ಕೇಳಿ ಬರುತ್ತಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News