×
Ad

ಬಳ್ಳಾರಿ ಜಿಲ್ಲಾಸ್ಪತ್ರೆ ಕೋವಿಡ್-19 ಆಸ್ಪತ್ರೆಯನ್ನಾಗಿ ಪರಿವರ್ತನೆ: ಶಾಸಕ ಸೋಮಶೇಖರ್ ರೆಡ್ಡಿ ಅಸಮಾಧಾನ

Update: 2020-03-31 17:55 IST

ಬಳ್ಳಾರಿ, ಮಾ.31: ನಗರದ ಜಿಲ್ಲಾಸ್ಪತ್ರೆಯನ್ನು ಕೋವಿಡ್-19 ಆಸ್ಪತ್ರೆಯನ್ನಾಗಿ ಪರಿವರ್ತಿಸಿದ್ದಕ್ಕೆ ಶಾಸಕ ಜಿ.ಸೋಮಶೇಖರ್ ರೆಡ್ಡಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ. 

ಮಂಗಳವಾರ ಬಳ್ಳಾರಿ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜಿಲ್ಲಾಸ್ಪತ್ರೆಯು ನಗರದ ಮಧ್ಯ ಭಾಗದಲ್ಲಿಯೇ ಇದೆ. ನಗರ ಸೇರಿ ಸುತ್ತಮುತ್ತಲಿನ ಗ್ರಾಮಗಳ ಜನರು ಚಿಕಿತ್ಸೆಗಾಗಿ ಇಲ್ಲಿಗೆ ಬರುತ್ತಾರೆ. ಹೀಗಾಗಿ, ಜಿಲ್ಲಾಸ್ಪತ್ರೆಯನ್ನೇ ಕೋವಿಡ್-19 ಆಸ್ಪತ್ರೆಯನ್ನಾಗಿ ಪರಿವರ್ತಿಸಿದರೆ ಉಳಿದವರಿಗೂ ಕೊರೋನ ವೈರಸ್ ಹರಡುವ ಸಾಧ್ಯತೆಯಿರುತ್ತದೆ. ಕೋವಿಡ್-19 ಆಗಿ ಪರಿವರ್ತಿಸಿರುವುದು ತಮಗೆ ಅಸಮಾಧಾನ ತಂದಿದೆ ಎಂದು ಹೇಳಿದರು.

ಬಳ್ಳಾರಿ ಜಿಲ್ಲೆಯಲ್ಲಿ ಇಷ್ಟು ದಿನಗಳ ಕಾಲ ಯಾವುದೇ ಕೋವಿಡ್-19 ಪಾಸಿಟಿವ್ ಪ್ರಕರಣಗಳು ಇಲ್ಲ ಎಂದು ನಾವೆಲ್ಲ ಸಮಾಧಾನದಲ್ಲಿದ್ದೆವು. ಆದರೆ, ಸೋಮವಾರ ರಾತ್ರಿ ಹೊಸಪೇಟೆಯಲ್ಲಿ ಮೂರು ಪಾಸಿಟಿವ್ ಪ್ರಕರಣ ದೃಢಪಟ್ಟಿದ್ದು, ಜಿಲ್ಲೆಯ ಜನರು ಮತ್ತಷ್ಟು ಆತಂಕಕ್ಕೊಳಗಾಗಿದ್ದಾರೆ ಎಂದರು. 

ನಗರದ ರಾಣಿತೋಟದಲ್ಲೂ ಗೃಹ ಬಂಧನದಲ್ಲಿರಿಸಿದ ವ್ಯಕ್ತಿಯೊಬ್ಬ ರಸ್ತೆಯಲ್ಲಿ ತಿರುಗಾಡುತ್ತಿದ್ದಾನೆ ಎಂದು ಸ್ಥಳೀಯರು ನನಗೆ ಮಾಹಿತಿ ನೀಡಿದ್ದು, ಕೂಡಲೇ ಪೊಲೀಸರು, ವೈದ್ಯರ ಗಮನ ಸೆಳೆದಾಗ ಆ ವ್ಯಕ್ತಿಯನ್ನು ಹಿಡಿದು ಆಸ್ಪತ್ರೆಗೆ ದಾಖಲಿಸಿದ್ದಾರೆ. ಹೀಗಾಗಿ, ಬೇರೆ ಊರಿಂದ ಬಳ್ಳಾರಿಗೆ ಹಲವರು ಬಂದಿದ್ದಾರೆ. ಅವರು ಹೇಳಿಕೊಳ್ಳಲು ಹಿಂಜರಿಯುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.  

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News