ಜವಾಬ್ದಾರಿಯಿಂದ ನುಣಿಚಿಕೊಂಡ ರಾಜ್ಯದ ಜನಪ್ರತಿನಿಧಿಗಳು: ನೆಟ್ಟಿಗರ ಟೀಕೆಗಳಿಂದ ಎಚ್ಚೆತ್ತರು

Update: 2020-03-31 13:35 GMT
ಸಾಂದರ್ಭಿಕ ಚಿತ್ರ

ಬೀದರ್, ಮಾ.31: ಕೊರೋನ ವಿರುದ್ಧ ಸಮರ ಸಾರಿರುವ ಕೇಂದ್ರ ಮತ್ತು ರಾಜ್ಯ ಸರಕಾರಗಳು ದೇಶದಾದ್ಯಂತ ಲಾಕ್‍ಡೌನ್ ಘೋಷಿಸಿದ ಹಿನ್ನೆಲೆಯಲ್ಲಿ ಜವಾಬ್ದಾರಿಯಿಂದ ನುಣಿಚಿಕೊಂಡಿದ್ದ ಸಂಸದ ಭಗವಂತ ಖೂಬಾ, ಜಿಲ್ಲಾ ಉಸ್ತುವಾರಿ ಸಚಿವ ಪ್ರಭು ಚೌಹಾಣ್ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ಟೀಕೆಗಳ ಸುರಿಮಳೆ ಹರಿದುಬಂದ ನಂತರ ಎಚ್ಚೆತ್ತುಕೊಂಡಿದ್ದಾರೆ.

ಲಾಕ್‍ಡೌನ್ ನೆಪದಲ್ಲಿ ಮನೆಯಲ್ಲಿಯೇ ಉಳಿದುಕೊಂಡಿದ್ದ ಈ ಇಬ್ಬರ ವಿರುದ್ಧ ಟ್ವಿಟರ್, ಪೇಸ್‍ಬುಕ್ ಹಾಗೂ ಮತ್ತಿತರೆ ಸಾಮಾಜಿಕ ಜಾಲತಾಣದಲ್ಲಿ ಜವಾಬ್ದಾರಿ ತೆಗೆದುಕೊಳ್ಳಬೇಕಾದ ನೀವೇ ಮನೆಯಲ್ಲಿ ಉಳಿದುಕೊಳ್ಳುವುದು ಎಷ್ಟು ಸರಿ. ಜನ ಸಂಕಷ್ಟದಲ್ಲಿದ್ದಾರೆ, ನೀವು ನೆಮ್ಮದಿಯಾಗಿದ್ದೀರಾ ಎಂದು ತರಾಟೆಗೆ ತೆಗೆದುಕೊಂಡಿದ್ದರ ಪರಿಣಾಮ ಈಗ ಎಚ್ಚೆತ್ತುಕೊಂಡಿದ್ದಾರೆ.

ಮನೆಯಲ್ಲಿಯೇ ಇದ್ದ ಉಸ್ತುವಾರಿ ಸಚಿವ ಪ್ರಭು ಚೌಹಾಣ್ ಜಿಲ್ಲೆಯ ಗಡಿಯಲ್ಲಿರುವ ಚೆಕ್‍ಪೋಸ್ಟ್ ಗಳಿಗೆ ತೆರಳಿ ಅಲ್ಲಿನ ಸಿಬ್ಬಂದಿಗೆ ನೀರು ಹಾಗೂ ಊಟದ ವ್ಯವಸ್ಥೆ ಮಾಡದ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ಅನಂತರ ಅಲೆಮಾರಿಗಳು ವಾಸವಾಗಿರುವ ಸ್ಥಳಕ್ಕೆ ಭೇಟಿ ನೀಡಿ ಅವರಿಗೆ ಆಹಾರ ಧಾನ್ಯಗಳನ್ನು ವಿತರಿಸಿದರು.

ವಾಪಸ್ಸು ಕಳುಹಿಸುತ್ತಿರುವ ಪೊಲೀಸರು: ತೆಲಂಗಾಣ ಮತ್ತು ಮಹಾರಾಷ್ಟ್ರದಲ್ಲಿ ಕೂಲಿ ಮಾಡಿಕೊಂಡು ಹೊಟ್ಟೆ ತುಂಬಿಸಿಕೊಳ್ಳಲು ಹೋಗಿದ್ದ ಕೂಲಿ ಕಾರ್ಮಿಕರನ್ನು ಅಲ್ಲಿನ ಪೊಲೀಸರು ಮರಳಿ ಊರಿಗೆ ಕಳುಹಿಸುತ್ತಿದ್ದಾರೆ. ಕಗ್ಗತ್ತಲನ್ನು ಸುಡು ಬಿಸಿಲು ಎನ್ನದೇ ಅನೇಕ ಜನ ಮಕ್ಕಳೊಂದಿಗೆ ನೂರಾರು ಕಿ.ಮೀ. ನಡೆದುಕೊಂಡು ಜಿಲ್ಲೆಗೆ ಬರುತ್ತಿದ್ದಾರೆ.

ಗಡಿಯಲ್ಲಿ ಜಿಲ್ಲಾ ಸಶಸ್ತ್ರ ಪಡೆಯ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಬೀದರ್ ಜಿಲ್ಲೆಯ ವಾಸಿಗಳು ಎನ್ನುವ ದಾಖಲೆಗಳು ಇಲ್ಲದ ಎಲ್ಲರನ್ನೂ ವಾಪಸ್ ಕಳಿಸಲಾಗಿದೆ. ಹೈದರಾಬಾದ್‍ನಿಂದ ಬಂದಿರುವ ದಾಖಲೆಯಿಲ್ಲದವರಿಗೆ ಜಹೀರಾಬಾದ್‍ನಲ್ಲಿ ವ್ಯವಸ್ಥೆ ಮಾಡಲಾಗಿದೆ. ಅವರ ಮೇಲೆ ತೆಲಂಗಾಣದ ಪೊಲೀಸರು ನಿಗಾ ಇಟ್ಟಿದ್ದಾರೆ. ಮಧ್ಯರಾತ್ರಿ ದಾಖಲೆಯಿಲ್ಲದೆ ಬರುತ್ತಿರುವ ಬೀದರ್ ಜಿಲ್ಲೆಯ ಮಾರ್ಗವಾಗಿ ಮಹಾರಾಷ್ಟ್ರಕ್ಕೆ ಹೊರಟಿರುವ ಕಾರ್ಮಿಕರ ಕೈಗಳ ಮೇಲೆ 21 ದಿನ ಅಳಿಯದ ಶಾಹಿ ಗುರುತು ಹಾಕಲಾಗುತ್ತಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News