ಆಹಾರ ಸಿಗದೆ ರಾಜ್ಯದಲ್ಲಿ ಇಬ್ಬರ ಸಾವು: ಆರೋಪ

Update: 2020-03-31 14:07 GMT

ಬಳ್ಳಾರಿ, ಮಾ.31: ಸಮಯಕ್ಕೆ ಸರಿಯಾಗಿ ಆಹಾರ ಸಿಗದೆ ಇಬ್ಬರು ಸಾವನ್ನಪ್ಪಿರುವ ಘಟನೆ ಬಳ್ಳಾರಿ ಜಿಲ್ಲೆಯ ಹೊಸಪೇಟೆ ನಗರದಲ್ಲಿ ನಡೆದಿದೆ ಎನ್ನುವ ಗಂಭೀರ ಆರೋಪ ಕೇಳಿಬಂದಿದ್ದು, ಮೃತದೇಹಗಳನ್ನು ಕಸ ವಿಲೇವಾರಿ ವಾಹನದಲ್ಲಿ ಸಾಗಿಸಿದ ಆಘಾತಕಾರಿ ಘಟನೆ ನಡೆದಿದೆ.

ರಸ್ತೆಯ ಬದಿಯಲ್ಲಿ ಇಬ್ಬರು ಮೃತಪಟ್ಟಿದ್ದು, ಇಬ್ಬರ ಶವಗಳನ್ನೂ ನಗರಸಭೆಯ ಕಸ ವಿಲೇವಾರಿ ವಾಹನದಲ್ಲಿ ಸಾಗಿಸುತ್ತಿರುವ ಫೋಟೊಗಳು ವೈರಲ್ ಆಗಿದೆ.

ಕೊರೋನ ವೈರಸ್ ತಡೆಗಟ್ಟಲು ಲಾಕ್‍ ಡೌನ್ ಘೋಷಿಸಿದ್ದರಿಂದ ಮನೆಯಿಲ್ಲದೆ ಜೀವನ ಸಾಗಿಸುತ್ತಿದ್ದ ನಿರ್ಗತಿಕರು, ಭಿಕ್ಷುಕರು ಆಹಾರ, ನೀರಿಲ್ಲದೆ ಹೆಣಗಾಡುವ ಪರಿಸ್ಥಿತಿ ಉಂಟಾಗಿದೆ. ಇಂದು ಅನ್ನ, ನೀರಿಲ್ಲದೆ ಇಬ್ಬರು ಮೃತಪಟ್ಟಿರುವ ಘಟನೆ ಭಾರೀ ಆಕ್ರೋಶಕ್ಕೆ ಕಾರಣವಾಗಿದೆ.

ನಗರದಲ್ಲಿ ನಿರ್ಗತಿಕರು, ಭಿಕ್ಷುಕರು, ಅಲೆಮಾರಿಗಳು ಭಾರೀ ಸಂಖ್ಯೆಯಲ್ಲಿದ್ದಾರೆ. ಇವರೆಲ್ಲರೂ ಹೊಸಪೇಟೆ ನಗರದ ರೈಲ್ವೆ ಸ್ಟೇಷನ್, ರಸ್ತೆ ಬದಿಗಳಲ್ಲಿ ಜೋಪಡಿ ಕಟ್ಟಿಕೊಂಡು ವಾಸಿಸುತ್ತಾರೆ. ಇನ್ನು ಕೆಲವರು ದೇವಸ್ಥಾನಗಳ ಹೊರಗಡೆ ವಾಸ ಮಾಡುತ್ತಾರೆ.

ಹೊಸಪೇಟೆ ನಗರದಲ್ಲಿ ಮನೆ ಇಲ್ಲದೆ ಜೋಪಡಿಗಳಲ್ಲಿ ಸಾಕಷ್ಟು ಜನರು ವಾಸ ಮಾಡುತ್ತಿದ್ದಾರೆ. ಬಳ್ಳಾರಿ ನಗರದ ಶ್ರೀಮಂತರು, ಜಿಲ್ಲಾಧಿಕಾರಿಗಳು ಇವರೆಲ್ಲರಿಗೂ ಅನ್ನ, ನೀರಿನ ವ್ಯವಸ್ಥೆ ಮಾಡಬೇಕೆಂದು ಸಾಮಾಜಿಕ ಕಾರ್ಯಕರ್ತ ಸೋಮಶೇಖರ್ ಬಣ್ಣದಮನೆ ಆಗ್ರಹಿಸಿದರು.

‘ಹೊಸಪೇಟೆ ನಗರದ ರಸ್ತೆ ಬದಿಯಲ್ಲಿ ಇಬ್ಬರು ಮೃತಪಟ್ಟಿದ್ದು, ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಆಸ್ಪತ್ರೆಗೆ ಸಾಗಿಸಲಾಗಿದೆ. ಆದರೆ, ಅನ್ನ, ನೀರು ಇಲ್ಲದೇ ಮೃತಪಟ್ಟಿದ್ದಾರೆ ಎಂದು ಹೇಳಲು ಆಗುವುದಿಲ್ಲ. ಮರಣೋತ್ತರ ಪರೀಕ್ಷೆಯ ಬಳಿಕವೇ ಸ್ಪಷ್ಟ ಮಾಹಿತಿ ದೊರಕಲಿದೆ.’

-ಎಚ್.ವಿಶ್ವನಾಥ್, ತಹಶೀಲ್ದಾರ್, ಹೊಸಪೇಟೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News