ಪ್ರತ್ಯೇಕ ಆಸ್ಪತ್ರೆ ಸ್ಥಾಪಿಸಲು ಇನ್ಫೋಸಿಸ್‍ನಿಂದ 100 ಕೋಟಿ ನೆರವು

Update: 2020-03-31 15:13 GMT

ಬೆಂಗಳೂರು, ಮಾ.31: ಕೊರೋನ ಸೋಂಕಿತರಿಗೆಂದೇ ಪ್ರತ್ಯೇಕ ಆಸ್ಪತ್ರೆ ಸ್ಥಾಪಿಸಲು ನೆರವು ನೀಡುವುದಾಗಿ ಘೋಷಿಸಿದ ಬಳಿಕ ಇದೀಗ ಇನ್ಫೋಸಿಸ್ ಮತ್ತೆ ಸಹಾಯ ಹಸ್ತ ಚಾಚಿದ್ದು, 100 ಕೋಟಿ ರೂ. ನೀಡುವುದಾಗಿ ಪ್ರಕಟಣೆಯಲ್ಲಿ ತಿಳಿಸಿದೆ.

ಈ ಕುರಿತು ಪತ್ರಿಕಾ ಪ್ರಕಟಣೆ ಹೊರಡಿಸಿರುವ ಇನ್ಫೋಸಿಸ್ ಫೌಂಡೇಶನ್, ಕೊರೋನ ವಿರುದ್ಧ ಹೋರಾಡಲು ಒಟ್ಟು 100 ಕೋಟಿ ರೂ.ಗಳನ್ನು ಬಿಡುಗಡೆ ಮಾಡಲಾಗಿದ್ದು, ಇದರಲ್ಲಿ 50 ಕೋಟಿ ರೂ. ಪಿಎಂ ಕೇರ್ಸ್ ನಿಧಿಗೆ ವರ್ಗಾಯಿಸಲಾಗುವುದು. ಉಳಿದ ಹಣವನ್ನು ರೋಗಿಗಳ ಚಿಕಿತ್ಸೆಗೆ ಆಸ್ಪತ್ರೆಗಳ ಸಾಮರ್ಥ್ಯ ವಿಸ್ತರಣೆಗೆ ಬಳಸಿಕೊಳ್ಳಲಾಗುತ್ತಿದೆ. ಅಲ್ಲದೆ ವೆಂಟಿಲೇಟರ್, ಪರೀಕ್ಷಾ ಕಿಟ್ ಹಾಗೂ ಪರ್ಸನಲ್ ಪ್ರೋ ಆಕ್ಟಿವ್ ಇಕ್ವಿಪ್‍ಮೆಂಟ್(ಪಿಪಿಇ)ಗಳಾದ ಮಾಸ್ಕ್ ಸೇರಿದಂತೆ ಇನ್ನಿತರೆ ಪರಿಕರಗಳನ್ನು ಆರೋಗ್ಯ ರಕ್ಷಣೆ ಸಿಬ್ಬಂದಿಗೆ ನೀಡಲು ಮುಂದಾಗಿದೆ.

ಅಲ್ಲದೆ ದುರ್ಬಲ ವರ್ಗದವರಿಗೆ ಆಹಾರ ಮತ್ತು ಪೌಷ್ಠಿಕಾಂಶ ಲಭ್ಯವಾಗುವಂತೆ ಮಾಡಲು ಇದನ್ನು ಬಳಸಿಕೊಳ್ಳಲಾಗುತ್ತದೆ. ಬೆಂಗಳೂರಿನಲ್ಲಿ ಕೊರೋನ ವೈರಸ್‍ಗೆಂದೇ ಪ್ರತ್ಯೇಕ ಆಸ್ಪತ್ರೆ ಸ್ಥಾಪನೆಗೆ ನೆರವು ನೀಡುವುದಾಗಿ ಘೋಷಿಸಿತ್ತು. ಅಲ್ಲದೆ ದೇಶದ ಮಿಲಿಟರಿ ಮತ್ತು ಸರಕಾರಿ ಆಸ್ಪತ್ರೆಗಳಿಗೆ ವೈದ್ಯಕೀಯ ಮತ್ತು ಪಿಪಿಇ ಸಲಕರಣೆ ನೀಡುವುದಾಗಿ ಘೋಷಿಸಿದೆ.

ಈ ಕುರಿತು ಮಾತನಾಡಿರುವ ಸುಧಾಮೂರ್ತಿ ಅಗತ್ಯವಿರುವ ಎಲ್ಲರಿಗೂ ಪರಿಹಾರ ಸಾಮಗ್ರಿಗಳು ತಲುಪುವಂತೆ ಮಾಡುವ ಎಲ್ಲ ಪ್ರಯತ್ನಗಳನ್ನು ಮಾಡುತ್ತಿದ್ದೇವೆ. ಚಿಕಿತ್ಸೆಗೆ ಹಣ ಭರಿಸಲು ಸಾಧ್ಯವಾಗದ ರೋಗಿಗೆ ನಮ್ಮ ಆರೋಗ್ಯ ರಕ್ಷಣೆ ಸಿಬ್ಬಂದಿ ನೆರವಾಗುತ್ತಿದ್ದಾರೆ ಎಂದು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News