ವಿಜಯ ಕರ್ನಾಟಕ ಪತ್ರಿಕೆ ವರದಿಗೆ ಖಂಡನೆ

Update: 2020-03-31 15:19 GMT

ಬೆಂಗಳೂರು, ಮಾ.31: ವಿಜಯ ಕರ್ನಾಟಕ ಪತ್ರಿಕೆಯಲ್ಲಿ ಪ್ರಕಟಿಸಿದ ‘ಸತ್ತವರೆಲ್ಲ ಒಂದೇ ಸಮುದಾಯದವರು' ವರದಿ ಅನ್ನು ತೀವ್ರವಾಗಿ ಖಂಡಿಸಿರುವ ಗ್ರಾಮ ಸೇವಾ ಸಂಘ, ಕೊರೋನ ವೈರಸ್ ತಡೆಗಟ್ಟಲು ಇಡೀ ಮನುಕುಲವೇ ಹೋರಾಟ ನಡೆಸುತ್ತಿರುವ ಸಂದರ್ಭದಲ್ಲಿ ಒಗ್ಗಟ್ಟು ಮುರಿಯುವ ಷಡ್ಯಂತ್ರ ನಡೆಯುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದೆ.

ಕೊರೋನದಿಂದ ಸತ್ತವರೆಲ್ಲ ಒಂದೇ ಸಮುದಾಯದವರು, ಈಗಲೂ ಅವರು ಪ್ರಾರ್ಥನೆಯ ಹೆಸರಿನಲ್ಲಿ ಗುಂಪು ಸೇರುವುದೇಕೆ? ಎಂಬ ತಲೆಬರಹದ ಸುದ್ದಿಯೊಂದನ್ನು ಪ್ರಕಟಿಸಲಾಗಿದೆ. ಸಾಮಾಜಿಕ ಜಾಲತಾಣಗಳಲ್ಲಂತೂ ಇಂತಹದ್ದೇ ಸುದ್ದಿಗಳು ಹರಿದಾಡುತ್ತಿದ್ದು, ಕೊರೋನ ವೈರಸ್ ತಡೆಯುವ ಉತ್ಸಾಹದಲ್ಲಿ ಕೋಮು ವೈರಸ್ ಅನ್ನು ಹರಡುತ್ತಿದ್ದೇವೆ ಎಂದು ಗ್ರಾಮ ಸೇವಾ ಸಂಘ ತನ್ನ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದೆ.

ಸರಕಾರಗಳು, ವೈದ್ಯರು ವೈರಸ್ ತಡೆಗಟ್ಟುವ ನಿಟ್ಟಿನಲ್ಲಿ ಹಗಲು ರಾತ್ರಿ ಶ್ರಮಿಸುತ್ತಿರುವಾಗ ಅವುಗಳೊಟ್ಟಿಗೆ ಸಹಕರಿಸುವ ಬದಲು ಈ ರೀತಿಯ ಸುದ್ದಿಗಳನ್ನು ಹರಡಬಹುದೇ ನಾವು. ಅಲ್ಲದೆ, ಸಾಮಾಜಿಕ ದೂರೀಕರಣ (ಸೋಷಿಯಲ್ ಡಿಸ್ಪಂಸಿಂಗ್) ಎಂಬ ತತ್ವವನ್ನು ತಪ್ಪಾಗಿ ಹಾಗೂ ಅಪಾಯಕಾರಿಯಾಗಿ ಅರ್ಥೈಸುತ್ತಿದ್ದು, ಈ ಬಗ್ಗೆ ಎಚ್ಚರಿಕೆ ವಹಿಸಿ ದೇಶದ ಒಗ್ಗಟ್ಟನ್ನು ಕಾಪಾಡಿಕೊಳ್ಳಬೇಕಾಗಿದೆ ಎಂದು ಸಂಘದ ಕಾರ್ಯದರ್ಶಿ ಸಿ.ಎ.ಅಭಿಲಾಷ್ ತಿಳಿಸಿದ್ದಾರೆ.

'ಕೊರೋನಗೆ ಕೋಮು ಬಣ್ಣ ಬೇಡ'
ಮುಸ್ಲಿಮರು ಪ್ರಾರ್ಥನೆಗಾಗಿಯೇ ಮಸೀದಿಗಳಿಗೆ ಹೋಗಿದ್ದಾರೆ ಹೊರತು, ಬೇರೆ ಕಾರಣಗಳಿಗೆ ಅಲ್ಲ. ಅಲ್ಲದೆ, ನಾವು ಮಂದಿರಗಳಲ್ಲಿ, ಚರ್ಚ್‍ಗಳಲ್ಲಿ ತಿಳಿಯದೆ, ಒಟ್ಟಾಗಿ ಪೂಜಿಸಿರಲಿಲ್ಲವೇ? ಇದನ್ನು ಏಕೆ ಬಿಂಬಿಸುವುದಿಲ್ಲ?
-ಸಿ.ಎ.ಅಭಿಲಾಷ್, ಕಾರ್ಯದರ್ಶಿ, ಗ್ರಾಮ ಸೇವಾ ಸಂಘ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News