ಕಲಬುರಗಿಯಲ್ಲೂ ಫೀವರ್ ಕ್ಲಿನಿಕ್ ಪ್ರಾರಂಭವಾಗಲಿ: ಸಿಪಿಎಂ ಒತ್ತಾಯ

Update: 2020-03-31 16:06 GMT

ಕಲಬುರಗಿ, ಮಾ.31: ಕೊರೋನ ಸೋಂಕಿನ ಕುರಿತು ಮುಂಜಾಗ್ರತೆ ವಹಿಸಲು ಅನುಕೂಲವಾಗುವಂತೆ ಬೆಂಗಳೂರಿನಲ್ಲಿ ತೆರದಿರುವಂತೆ ಫೀವರ್ ಕ್ಲಿನಿಕ್‍ಗಳನ್ನು ಕಲಬುರಗಿಯಲ್ಲೂ ಪ್ರಾರಂಭಿಸಬೇಕೆಂದು ಸಿಪಿಎಂ ಕಾರ್ಯದರ್ಶಿ ಶರಣಬಸಪ್ಪ ಒತ್ತಾಯಿಸಿದ್ದಾರೆ.

ನಗರದ ಜನತೆ ಸಾಮಾನ್ಯ ಜ್ವರ, ನೆಗಡಿ, ಕೆಮ್ಮು ಬಂದರೂ ಭಯಭೀತರಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಇವರ ಭಯವನ್ನು ನಿವಾರಿಸಿ ಅವರಲ್ಲಿ ಆತ್ಮವಿಶ್ವಾಸ ಮೂಡಿಸುವಂತಹ ತಪಾಸಣಾ ಕೇಂದ್ರಗಳನ್ನು ತೆರೆಯಬೇಕು. ಹಾಗೂ ಜಿಲ್ಲೆಯಲ್ಲಿ ವೆಂಟಿಲೇಟರ್‍ಗಳನ್ನು ಸಾಕಷ್ಟು ಪ್ರಮಾಣದಲ್ಲಿ ಒದಗಿಸಬೇಕೆಂದು ಅವರು ಮನವಿ ಮಾಡಿದ್ದಾರೆ.

ರಾಜ್ಯ ಸರಕಾರ ಕೂಡಲೇ ಜನಧನ್ ಖಾತೆ ಮತ್ತು ಬಿಪಿಎಲ್ ಫಲಾನುಭವಿಗಳಿಗೆ 5ಸಾವಿರ ರೂ.ವರ್ಗಾವಣೆ ಮಾಡಬೇಕು. ವಿಧವಾ, ವೃದ್ಧಾಪ್ಯ ಮುಂತಾದ ಮಾಸಿಕ ಸಹಾಯಧನವನ್ನು ಪಡೆಯುವವರಿಗೆ ಕನಿಷ್ಟ 3ತಿಂಗಳ ಹಣವನ್ನು ಮುಂಗಡವಾಗಿ ಬಿಡುಗಡೆ ಮಾಡಬೇಕು.

ಮಹಾತ್ಮಾಗಾಂಧಿ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯನ್ನು 200 ದಿನಗಳವರೆಗೆ ವಿಸ್ತರಿಸಿ ಅವರ ದಿನಗೂಲಿಯನ್ನು 700ರೂ.ಗೆ ಏರಿಕೆ ಮಾಡಬೇಕು. ಬಡವರು, ಮಧ್ಯಮ ವರ್ಗದವರು ಪಡೆದಿರುವ ಸಾಲದ ಮೇಲಿನ ಬಡ್ಡಿಯನ್ನು ಮನ್ನಾ ಮಾಡಬೇಕು. ಹಾಗೂ ಸಾಲವನ್ನು ಪಾವತಿಸಲು ಸಾಕಷ್ಟು ಸಮಯಾವಕಾಶ ನೀಡಬೇಕು. ಹಾಗೂ ಇಂದಿರಾ ಕ್ಯಾಂಟೀನ್‍ನಲ್ಲಿ ಮೂರು ಹೊತ್ತು ಆಹಾರ ಲಭ್ಯವಾಗುವಂತೆ ಕ್ರಮ ವಹಿಸಬೇಕೆಂದು ಅವರು ಪತ್ರಿಕಾ ಪ್ರಕಟನೆಯ ಮೂಲಕ ಒತ್ತಾಯಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News