ಕೋವಿಡ್-19 ನಿಯಂತ್ರಣಕ್ಕೆ ನಿರಂತರವಾಗಿ ಶ್ರಮಿಸುತ್ತಿರುವ ವೈದ್ಯರಿಗೆ ಸಲಾಂ: ಸಿಎಂ ಯಡಿಯೂರಪ್ಪ

Update: 2020-03-31 18:21 GMT

ಬೆಂಗಳೂರು, ಮಾ.31: ಆತ್ಮೀಯ ವೈದ್ಯ ಮಿತ್ರರೆ, ‘ವೈದ್ಯ’ ಎಂಬ ಪದವೂ ದೈವದ ಮೂಲಕವೆ ಸೃಷ್ಟಿಯಾಗಿದೆ ಎನ್ನುವುದು ಮತ್ತೊಮ್ಮೆ ರುಜುವಾತಾಗಿದೆ. ಅದಕ್ಕೆ ಸಾಕ್ಷಿ ಎಂಬಂತೆ ಇಂದಿನ ಮಹಾಮಾರಿ ಕೊರೋನ ವಿರುದ್ಧದದ ಸಮರದಲ್ಲಿ ದೇವರುಗಳು ಬಿಳಿ ಪೋಷಾಕಿನಲ್ಲಿ ನಿಮ್ಮ ಮೂಲಕವಾಗಿ ರಸ್ತೆಗಿಳಿದಿದಾರೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತಿಳಿಸಿದ್ದಾರೆ.

ವೈದ್ಯರಿಗೆ ನಮನ ಸಲ್ಲಿಸುವ ಸಂದೇಶ ನೀಡಿರುವ ಅವರು, ಕಾಯಿಲೆ ಬಿದ್ದ ಜೀವಕ್ಕೆ ಮರುಚೈತನ್ಯ ನೀಡಬಲ್ಲವರು ವೈದ್ಯರು. ವೈದ್ಯರೊಂದಿಗೆ ಹೆಗಲಿಗೆ ಹೆಗಲು ಕೊಟ್ಟು ತಮ್ಮ ಜೀವನವನ್ನೆ ಪಣಕ್ಕಿಟ್ಟು ಶ್ರಮಿಸುತ್ತಿರುವವರು ನರ್ಸಿಂಗ್ ಮತ್ತು ಇತರ ಅರೆವೈದ್ಯಕೀಯ ಸಿಬ್ಬಂದಿ. ಅವರ  ಸೇವೆಯೂ ಶ್ಲಾಘನೀಯ ಎಂದು ಬಣ್ಣಿಸಿದ್ದಾರೆ.

ಇಂದು ನಮ್ಮನ್ನೆಲ್ಲ ಕಾಡುತ್ತಿರುವ ಆತಂಕ, ಅಳುಕು, ಅಸಹಾಯಕತೆಗಳಿಗೆ ನೀವು ನಿಮ್ಮ ಜೀವದ ಹಂಗು ತೊರೆದು ಹಚ್ಚುತ್ತಿರುವ ಭರವಸೆಯ ಬೆಳಕಷ್ಟೆ ಉತ್ತರವಾಗಿದೆ. ಮಾರಕ ಕೋವಿಡ್-19 ವಿರುದ್ಧದ ಹೋರಾಟದಲ್ಲಿ ಸದ್ಯದ ಪರಿಸ್ಥಿತಿಯಲ್ಲಿ ವೈದ್ಯರೆ ಭರವಸೆಯ ಬೆಳಕು ಎಂದು ಮುಖ್ಯಮಂತ್ರಿ ಹೇಳಿದ್ದಾರೆ.

ವೈದ್ಯರ ಕಾರ್ಯವನ್ನು ಮೆಚ್ಚಿ ನರೇಂದ್ರ ಮೋದಿಯವರು ವೈದ್ಯರಿಗೆ ಮತ್ತು ವೈದ್ಯಕೀಯ ಸಿಬ್ಬಂದಿಗೆ 50 ಲಕ್ಷ ರೂ.ಗಳ ವಿಮಾ ಸೌಲಭ್ಯ ಒದಗಿಸಿದ್ದಾರೆ. ಈ ಸೌಲಭ್ಯ ಕೋವಿಡ್-19 ವಿರುದ್ಧ ಹೋರಾಟದಲ್ಲಿ ತೊಡಗಿರುವ ಖಾಸಗಿ ವೈದ್ಯ ಮತ್ತು ಆರೋಗ್ಯ ಸಿಬ್ಬಂದಿಗೂ ವಿಸ್ತರಿಸಲಾಗಿದೆ. ನಮ್ಮ ರಾಜ್ಯ ಸರಕಾರವು ಸಹ ವೈದ್ಯರಿಗೆ ಅಗತ್ಯ ನೆರವು ನಿಡುತ್ತಿದೆ ಎಂದು ಯಡಿಯೂರಪ್ಪ ಹೇಳಿದ್ದಾರೆ.

ಇಡೀ ಸಮಾಜ ಇಂದು ನಿಮ್ಮ ಬದ್ಧತೆಯನ್ನು ಗೌರವಿಸುತ್ತದೆ. ನಿಮ್ಮ ಉಪಕಾರವನ್ನು ಸ್ಮರಿಸುತ್ತದೆ. ನಿಮಗೆ, ನಿಮ್ಮ ಕುಟುಂಬಕ್ಕೆ ಎಂದಿಗೂ ಒಳ್ಳೆಯದಾಗಲೆಂದು ಹಾರೈಸುತ್ತದೆ. ರಾಜ್ಯದ ಮುಖ್ಯಮಂತ್ರಿಯಾಗಿ ನಾನು ಸಹ ಅತ್ಯಂತ ನಮ್ರವಾಗಿ ನಿಮಗೆ ಒಳಿತಾಗಲೆಂದು ಇಂತಹ ಸಂಕಷ್ಟದ ಸಮಯದಲ್ಲಿ ಸಕಲ ಚೈತನ್ಯದೊಂದಿಗೆ ಕೆಲಸ ಮಾಡುವ ಶಕ್ತಿ ನಿಮಗೆ ದೊರೆಯಲೆಂದು ಹಾರೈಸುತ್ತೇನೆ. ಇಂದು ನೀವು ಹಚ್ಚುತ್ತಿರುವ ವಿಶ್ವಾಸದ ದೀವಿಗೆ ನಮ್ಮ ಬೆಳಕಿನ ನಾಳೆಗಳನ್ನು ಸೃಷ್ಟಿಸಬಲ್ಲುದು ಎಂದು ಮುಖ್ಯಮಂತ್ರಿ ತಿಳಿಸಿದ್ದಾರೆ.

ಕೋವಿಡ್-19 ವಿರುದ್ಧದ ಹೋರಾಟದಲ್ಲಿ ‘ಮುಖ್ಯಮಂತ್ರಿ ಪರಿಹಾರ ನಿಧಿ’ಗೆ ದೇಣಿಗೆ ಸಲ್ಲಿಸುವ ಮೂಲಕ ರಾಜ್ಯ ಸರಕಾರದ ಜೊತೆ ಕೈಜೋಡಿಸುವಂತೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮನವಿ ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News