ರಾಜ್ಯದಲ್ಲಿ ಪಡಿತರ ವಿತರಣೆ ಆರಂಭ: ಎ.10ರ ಒಳಗಾಗಿ ವಿತರಣೆ ಕಾರ್ಯ ಪೂರ್ಣಗೊಳಿಸಲು ಸೂಚನೆ

Update: 2020-04-01 11:31 GMT
ಸಾಂದರ್ಭಿಕ ಚಿತ್ರ

ಬೆಂಗಳೂರು, ಎ.1: ರಾಜ್ಯದಲ್ಲಿನ ಬಿಪಿಎಲ್ ಮತ್ತು ಅಂತ್ಯೋದಯ ಪಡಿತರ ಚೀಟಿದಾರರಿಗೆ ಎರಡು(ಎಪ್ರಿಲ್ ಮತ್ತು ಮೇ) ತಿಂಗಳ ಪಡಿತರ ಧಾನ್ಯಗಳನ್ನು ವಿತರಿಸಲು ಒಟ್ಟಿಗೆ ವಿತರಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ಆಹಾರ ಮತ್ತು ನಾಗರಿಕ ಪೂರೈಕೆ ಖಾತೆ ಸಚಿವ ಕೆ.ಗೋಪಾಲಯ್ಯ ಇಂದಿಲ್ಲಿ ತಿಳಿಸಿದ್ದಾರೆ.

ಬುಧವಾರ ಇಲ್ಲಿನ ಮಹಾಲಕ್ಷ್ಮಿ ಲೇಔಟ್‍ನ ನಾಗಪುರ ವಾರ್ಡ್ ಕಚೇರಿಯಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಇಂದಿನಿಂದಲೇ(ಎ.1) ಪಡಿತರ ವಿತರಣೆ ಆರಂಭ ಮಾಡಲಾಗಿದ್ದು, ಎ.10ರ ಒಳಗಾಗಿ ರಾಜ್ಯದಲ್ಲಿ ಪಡಿತರ ವಿತರಣೆ ಪೂರ್ಣಗೊಳಿಸಲು ಉದ್ದೇಶ ಹೊಂದಲಾಗಿದೆ ಎಂದು ಕೆ.ಗೋಪಾಲಯ್ಯ ಇದೇ ಸಂದರ್ಭದಲ್ಲಿ ಸ್ಪಷ್ಟನೆ ನೀಡಿದರು.

ಕಡುಬಡವ ಅಂತ್ಯೋದಯ ಕಾರ್ಡ್‍ದಾರರಿಗೆ ತಿಂಗಳಿಗೆ 70 ಕೆಜಿ ಅಕ್ಕಿ ದೊರೆಯಲಿದೆ. ಬಿಪಿಎಲ್ ಕಾರ್ಡ್‍ದಾರರಿಗೆ ಪ್ರತಿ ಯೂನಿಟ್‍ಗೆ ತಲಾ 5 ಕೆಜಿ ಅಕ್ಕಿ, 2 ಕೆಜಿ ಗೋಧಿಯಂತೆ ಒಟ್ಟು ಹತ್ತು ಕೆಜಿ ಅಕ್ಕಿ ಮತ್ತು ನಾಲ್ಕು ಕೆಜಿ ಗೋಧಿ ದೊರೆಯಲಿದೆ ಎಂದ ಅವರು, ರಾಜ್ಯಕ್ಕೆ ಪೂರೈಸಲು ಅಗತ್ಯವಿರುವಷ್ಟು ಅಕ್ಕಿ ಗೋದಾಮಿನಲ್ಲಿ ದಾಸ್ತಾನು ಇದ್ದು, ಶೀಘ್ರದಲ್ಲೆ ಪೂರೈಕೆ ಮಾಡಲಾಗುವುದು ಎಂದು ತಿಳಿಸಿದರು.

ಒಟಿಪಿ ಜಿಲ್ಲಾಧಿಕಾರಿಗಳ ವಿವೇಚನೆಗೆ: ಬಯೋಮೆಟ್ರಿಕ್ ಬದಲು ಮೊಬೈಲ್ ಸಂಖ್ಯೆಗೆ ಬರುವ ಒಟಿಪಿ ಪಡೆದು ಆಹಾರ ಧಾನ್ಯಗಳನ್ನು ವಿತರಿಸುವ ವಿಚಾರ ಆಯಾ ಜಿಲ್ಲಾಧಿಕಾರಿಗಳ ವಿವೇಚನೆಗೆ ಬಿಟ್ಟದ್ದು. ಆಧಾರ್ ಕಾರ್ಡ್ ಲಿಂಕ್ ಆಗಿರುವ ಫಲಾನುಭವಿಗಳ ಮೊಬೈಲ್ ಸಂಖ್ಯೆಗೆ ಒಟಿಪಿ ಸಂಖ್ಯೆ ಬರುತ್ತದೆ. ಅದನ್ನು ನ್ಯಾಯಬೆಲೆ ಅಂಗಡಿಗಳಿಗೆ ನೀಡಿ ಪಡಿತರ ಪಡೆಯಬಹುದಾಗಿದೆ ಎಂದು ಕೆ.ಗೋಪಾಲಯ್ಯ ತಿಳಿಸಿದರು.

ಕೊರೋನ ವೈರಸ್ ಸೋಂಕಿನ ಹಿನ್ನೆಲೆಯಲ್ಲಿ ಎರಡು ತಿಂಗಳ ಪಡಿತರ ಏಕಕಾಲಕ್ಕೆ ನೀಡಲು ರಾಜ್ಯ ಸರಕಾರ ಘೋಷಿಸಿತ್ತು. ಈ ಮಧ್ಯೆ ಕೇಂದ್ರ ಸರಕಾರವೂ ಅಕ್ಕಿ ನೀಡುವುದಾಗಿ ಹೇಳಿದ್ದು, ಎಪ್ರಿಲ್ 10ರ ನಂತರ ಕೇಂದ್ರ ಸರಕಾರದ ಪಡಿತರ ಪ್ಯಾಕೇಜ್ ಪಡಿತರ ಫಲಾನುಭವಿಗಳಿಗೆ ವಿತರಣೆ ಮಾಡಲು ಆರಂಭ ಮಾಡಲಾಗುವುದು ಎಂದು ಗೋಪಾಲಯ್ಯ ಇದೇ ವೇಳೆ ಸ್ಪಷ್ಟನೆ ನೀಡಿದರು.

ಗ್ರಾಮೀಣ ಪ್ರದೇಶದಲ್ಲಿ ವಿತರಣೆಗೆ ಇನ್ನೂ ಎರಡು ದಿನ ಕಾಲಾವಕಾಶ ಬೇಕಾಗಲಿದೆ. ದಾಸ್ತಾನು ತಲುಪಲು ಸಮಯಾವಕಾಶದ ಅಗತ್ಯವಿದೆ. ಕೊರೋನ ವೈರಸ್ ಸೋಂಕಿನ ಹಿನ್ನೆಲೆಯಲ್ಲಿ ಕೇಂದ್ರ ಸರಕಾರ ಲಾಕ್‍ಡೌನ್ ಘೋಷಣೆ ಮಾಡಿದ್ದು, ಪಡಿತರ ಫಲಾನುಭವಿಗಳಿಗೆ ಯಾವುದೇ ತೊಂದರೆ ಆಗದಂತೆ ಇಲಾಖೆಗೆ ಅಗತ್ಯ ಕ್ರಮ ಕೈಗೊಳ್ಳಲಿದೆ ಎಂದು ಅವರು ಸ್ಪಷ್ಟನೆ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News