ಸಾಮೂಹಿಕ ನಮಾಝ್ ನಿರ್ಬಂಧ ಎ.14ರವರೆಗೆ ವಿಸ್ತರಣೆ: ಸಚಿವ ಪ್ರಭು ಚೌಹಾಣ್

Update: 2020-04-01 15:10 GMT

ಬೆಂಗಳೂರು, ಎ.1: ಕೊರೋನ ಸೋಂಕು ಹರಡುವ ಭೀತಿಯಿಂದ ದೇಶವನ್ನು ಸಂಪೂರ್ಣವಾಗಿ ಲಾಕ್‍ಡೌನ್ ಮಾಡಲಾಗಿದ್ದು, ಇತ್ತೀಚೆಗೆ ಮಸೀದಿಗಳಲ್ಲಿ ಸಾಮೂಹಿಕ ನಮಾಝ್ ಮಾಡುತ್ತಿರುವುದು ಮಾಧ್ಯಮಗಳ ಮೂಲಕ ಕಂಡು ಬರುತ್ತಿದೆ. ಈ ಹಿನ್ನೆಲೆಯಲ್ಲಿ ರಾಜ್ಯ ವಕ್ಫ್ ಮಂಡಳಿಯ ಅಧಿಕಾರಿಗಳು ಹಾಗೂ ಇಲಾಖಾ ಕಾರ್ಯದರ್ಶಿಯೊಂದಿಗೆ ಚರ್ಚಿಸಿ ಕಟ್ಟುನಿಟ್ಟಾದ ಕ್ರಮ ಕೈಗೊಳ್ಳಲು ಸೂಚಿಸಲಾಗಿದೆ ಎಂದು ಪಶುಸಂಗೋಪನೆ, ಹಜ್ ಮತ್ತು ವಕ್ಫ್ ಸಚಿವ ಪ್ರಭು ಚೌಹಾಣ್ ತಿಳಿಸಿದ್ದಾರೆ.

ಮುಸ್ಲಿಮರು ದಿನಕ್ಕೆ ಐದು ಬಾರಿ ನಮಾಝ್ ಮಾಡುತ್ತಾರೆ. ಆದರೆ ರಾಜ್ಯದ ಎಲ್ಲ ವಕ್ಫ್ ಸಂಸ್ಥೆಗಳ ವ್ಯವಸ್ಥಾಪನಾ ಸಮಿತಿಗಳು ಹಾಗೂ ಸಾರ್ವಜನಿಕರ ಹಿತದೃಷ್ಟಿಯಿಂದ ಮಾ.31ರವರೆಗೆ ಸಾರ್ವಜನಿಕವಾಗಿ ನಮಾಝ್ ಮಾಡಲು ನಿರ್ಬಂಧಿಸಲಾಗಿತ್ತು. ಇದನ್ನು ಎ.14ರವರೆಗೆ ವಿಸ್ತರಿಸಲಾಗಿದೆ ಎಂದು ಅವರು ಹೇಳಿದ್ದಾರೆ.

ಅಲ್ಲದೆ, ಪ್ರತಿದಿನದ ಐದು ಹೊತ್ತಿನ ನಮಾಝ್ ಅನ್ನು ಯಾವುದೆ ಕಾರಣಕ್ಕೂ ಮಸೀದಿಗೆ ತೆರಳಿ ಮಾಡಬಾರದು. ಮುಂದಿನ ಆದೇಶ ಬರುವವರೆಗೆ ತಮ್ಮ ತಮ್ಮ ಮನೆಗಳಲ್ಲಿ ನಮಾಝ್ ಮಾಡಲು ತಿಳಿಸಲಾಗಿದೆ. ಯಾವುದೇ ಕಾರಣಕ್ಕೂ ನೆರೆಹೊರೆಯವರೊಂದಿಗೆ ಸೇರಿ ನಮಾಝ್ ಮಾಡಲು ಅವಕಾಶ ಇರುವುದಿಲ್ಲ ಎಂದು ಪ್ರಭು ಚೌಹಾಣ್ ಸ್ಪಷ್ಟಪಡಿಸಿದ್ದಾರೆ

ಸರಕಾರದ ಆದೇಶವನ್ನು ಉಲ್ಲಂಘಿಸಿ ಸಾಮೂಹಿಕವಾಗಿ ನಮಾಝ್ ಮಾಡುವುದು ಕಂಡು ಬಂದಲ್ಲಿ ಆಯೋಜಕರ ವಿರುದ್ಧ ಕಾನೂನು ರೀತಿಯಲ್ಲಿ ಕ್ರಮ ಕೈಗೊಳ್ಳಲಾಗುವುದು. ವಿಶೇಷವಾಗಿ ಯುವಕರು, ಅನಾವಶ್ಯಕವಾಗಿ ಓಡಾಡುವುದು, ಬೀದಿಗಳಲ್ಲಿ ಗುಂಪು ಸೇರುವುದು ಹಾಗೂ ಬೈಕ್ ಓಡಿಸುವುದನ್ನು ನಿಲ್ಲಿಸಬೇಕು ಎಂದು ಅವರು ತಿಳಿಸಿದ್ದಾರೆ.

ಸರಕಾರ ಹಾಗೂ ಸ್ಥಳೀಯ ಆಡಳಿತದಿಂದ ಕಾಲಕಾಲಕ್ಕೆ ನೀಡುವ ನಿರ್ದೇಶನ ಹಾಗೂ ಸೂಚನೆಗಳನ್ನು ಕಡ್ಡಾಯವಾಗಿ ಪಾಲಿಸಲು ಸೂಚಿಸಲಾಗಿದೆ. ಕೊರೋನ ಸೋಂಕು ಅಥವಾ ಆರೋಗ್ಯದಲ್ಲಿ ಏರುಪೇರು ಕಂಡುಬಂದಲ್ಲಿ ತಕ್ಷಣಕ್ಕೆ ವೈದ್ಯರನ್ನು ಸಂಪರ್ಕಿಸಿ ಚಿಕಿತ್ಸೆ ಪಡೆಯಬೇಕು ಎಂದು ಪ್ರಭು ಚೌಹಾಣ್ ಪ್ರಕಟಣೆಯಲ್ಲಿ ಮನವಿ ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News