ಕೊಲೆ ಪ್ರಕರಣದಲ್ಲಿ ಜೈಲು ಸೇರಿದ್ದ ವ್ಯಕ್ತಿ ಈಗ ಎಂಬಿಬಿಎಸ್ ಪದವೀಧರ !

Update: 2020-04-01 14:33 GMT

ಕಲಬುರಗಿ, ಎ.1: ಕೊಲೆ ಪ್ರಕರಣದಲ್ಲಿ ಕಾರಾಗೃಹ ಸೇರಿ 14 ವರ್ಷ ಶಿಕ್ಷೆ ಅನುಭವಿಸಿ, ಬಳಿಕ ಸನ್ನಡತೆಯಿಂದ ಹೊರಬಂದಿದ್ದ ಅಫಜಲಪುರ ತಾಲೂಕಿನ ಬೋಸಗಾ ಗ್ರಾಮದ ಸುಭಾಷ್ ಪಾಟೀಲ್, ತಾವು ಅರ್ಧಕ್ಕೆ ನಿಲ್ಲಿಸಿದ್ದ ಎಂಬಿಬಿಎಸ್ ಪದವಿ ಪೂರೈಸಿ ಈಗ ಡಾಕ್ಟರ್ ಆಗಿ ಬದಲಾಗಿದ್ದು, ಸಮಾಜ ಸೇವೆಯಲ್ಲಿ ತೊಡಗಲು ಮುಂದಾಗಿದ್ದಾರೆ.

2002ರಲ್ಲಿ ಕೊಲೆ ಪ್ರಕರಣದಲ್ಲಿ ಸುಭಾಷ್ ಪಾಟೀಲ್ ಕಾರಾಗೃಹ ಪಾಲಾಗಿದ್ದರು. ಆಗ ಅವರು ಎಂಬಿಬಿಎಸ್ 2ನೆ ವರ್ಷದಲ್ಲಿ ಓದುತ್ತಿದ್ದರು. ಕಾರಾಗೃಹ ಪಾಲಾಗಿದ್ದರಿಂದ ಎಂಬಿಬಿಎಸ್ ಕೋರ್ಸ್ ಅನ್ನು ಅರ್ಧಕ್ಕೆ ಮೊಟಕುಗೊಳಿಸಬೇಕಾಯಿತು. 2016ರಲ್ಲಿ ಸನ್ನಡತೆ ಆಧಾರದ ಮೇಲೆ ಕಾರಾಗೃಹದಿಂದ ಹೊರಬಂದ ಸುಭಾಷ್ ಪಾಟೀಲ್, 14 ವರ್ಷದ ಹಿಂದೆ ಅರ್ಧಕ್ಕೆ ನಿಲ್ಲಿಸಿದ್ದ ಎಂಬಿಬಿಎಸ್ ಕೋರ್ಸ್‍ಗೆ ಸೇರ್ಪಡೆಯಾದರು.

ಕಲಬುರಗಿ ನಗರದಲ್ಲಿರುವ ಎಂಆರ್‍ಎಂಸಿ ಮೆಡಿಕಲ್ ಕಾಲೇಜಿಗೆ ಸೇರಿದ ಸುಭಾಷ್, 3 ವರ್ಷ ನಿರಂತರವಾಗಿ ಅಧ್ಯಯನ ಮಾಡಿ ಇದೀಗ ಎಂಬಿಬಿಎಸ್ ಕೋರ್ಸ್ ಪೂರ್ತಿ ಮಾಡಿದ್ದಾರೆ. 2019ರಲ್ಲಿ ಎಂಬಿಬಿಎಸ್ ಪೂರ್ಣಗೊಳಿಸಿ, 1 ವರ್ಷ ಇಂಟರ್ನ್‍ಶಿಪ್ ಸಹ ಪೂರ್ಣಗೊಳಿಸಿದ್ದಾರೆ. 

ಡಾ.ಸುಭಾಷ್ ಪಾಟೀಲ್, ಮುಂದೆ ತನ್ನದೆ ಆದ ಕ್ಲಿನಿಕ್ ಪ್ರಾರಂಭಿಸಿ, ಕೈದಿಗಳ ಕುಟುಂಬದವರಿಗೆ ಹಾಗೂ ಯೋಧರ ಕುಟುಂಬದವರಿಗೆ ಉಚಿತವಾಗಿ ಆರೋಗ್ಯ ಸೇವೆಯನ್ನು ನೀಡುವ ಮಹದಾಸೆ ಹೊಂದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News