'ಅಮಾನವೀಯ': ಕರ್ನಾಟಕ-ಕೇರಳ ಗಡಿ ಬಂದ್ ವಿಚಾರದಲ್ಲಿ ಸಿಎಂಗೆ ಪತ್ರ ಬರೆದ ದೇವೇಗೌಡ

Update: 2020-04-01 14:39 GMT

ಬೆಂಗಳೂರು, ಎ.1: ಕರ್ನಾಟಕ ಹಾಗೂ ಕೇರಳ ಗಡಿಯಲ್ಲಿ ದಿಗ್ಬಂಧನ ವಿಧಿಸಿರುವುದರಿಂದ ಕನ್ನಡಿಗರು ಹೆಚ್ಚಾಗಿರುವ ಕಾಸರಗೋಡು, ಮಂಜೇಶ್ವರ ಮುಂತಾದೆಡೆಯಿಂದ ಚಿಕಿತ್ಸೆಗಾಗಿ ಮಂಗಳೂರಿನ ಆಸ್ಪತ್ರೆಗಳಿಗೆ ಬರುವ ನೂರಾರು ರೋಗಿಗಳಿಗೆ ಸಮಸ್ಯೆಯಾಗಿದೆ ಎಂದು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ತಿಳಿಸಿದ್ದಾರೆ.

ಈ ಸಂಬಂಧ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪಗೆ ಪತ್ರ ಬರೆದಿರುವ ಅವರು, ಪ್ರತಿ ದಿನ ನೂರಕ್ಕೂ ಹೆಚ್ಚು ಆ್ಯಂಬುಲೆನ್ಸ್ ಗಳು ಕಾಸರಗೋಡು-ಮಂಗಳೂರು ನಡುವೆ ಸಂಚರಿಸುತ್ತಿದ್ದವು. ಇತ್ತೀಚೆಗೆ ಮಂಗಳೂರಿನ ಮಹಿಳೆಯೊಬ್ಬರು ಮಂಜೇಶ್ವರದಿಂದ ತುರ್ತು ಚಿಕಿತ್ಸೆಗಾಗಿ ಮಂಗಳೂರಿಗೆ ಆಂಬ್ಯುಲೆನ್ಸ್ ನಲ್ಲಿ ಬಂದದ್ದನ್ನು ತಡೆದು ವಾಪಸ್ ಕಳುಹಿಸಲಾಗಿದೆ. ಆ ಮಹಿಳೆ ಚಿಕಿತ್ಸೆ ಸಿಗದೆ ಮೃತಪಟ್ಟ ದಾರುಣ ಘಟನೆ ನಡೆದಿದೆ ಎಂದು ತಿಳಿಸಿದ್ದಾರೆ.

ಅದೇ ರೀತಿ ಇನ್ನೊಬ್ಬರು ಮಹಿಳೆ ಕಾಸರಗೋಡಿನ ತುಂಬು ಗರ್ಭಿಣಿ ಹೆರಿಗೆಗಾಗಿ ಮಂಗಳೂರಿಗೆ ಆ್ಯಂಬುಲೆನ್ಸ್ ನಲ್ಲಿ ಬರುವಾಗ ತಡೆದು ನಿಲ್ಲಿಸಿದ್ದು, ಚೆಕ್‍ ಪೋಸ್ಟ್ ನಲ್ಲಿ ಮಹಿಳೆಯ ಹೆರಿಗೆಯಾದ ಘಟನೆಯೂ ನಡೆದಿದೆ ಎಂದು ದೇವೇಗೌಡ ಹೇಳಿದ್ದಾರೆ.

ಕ್ಯಾನ್ಸರ್, ಹೃದಯ ಹಾಗು ಮೂತ್ರಕೋಶ ಸಂಬಂಧಿ ತುರ್ತು ಹಾಗೂ ಉನ್ನತ ಚಿಕಿತ್ಸೆಗೆ ಗಡಿಭಾಗದ ಬಹುತೇಕರು ಮಂಗಳೂರನ್ನೆ ಆಶ್ರಯಿಸುತ್ತಾರೆ. ಪೊಲೀಸರು ತುರ್ತು ಪ್ರಕರಣಗಳಿದ್ದಾಗ ಆ್ಯಂಬುಲೆನ್ಸ್ ನ್ನು ಹೀಗೆ ತಡೆದು ನಿಲ್ಲಿಸುವುದು ಅಮಾನವೀಯ. ತುರ್ತು ಪ್ರಕರಣಗಳಲ್ಲಿ ಆ್ಯಂಬುಲೆನ್ಸ್ ಗಳನ್ನು ಒಳಗೆ ಬಿಡಲು ಕ್ರಮ ಕೈಗೊಳ್ಳಬೇಕು ಹಾಗೂ ಈ ಬಗ್ಗೆ ಮುತುವರ್ಜಿ ವಹಿಸಲು ಅಧಿಕಾರಿಗಳನ್ನು ನೇಮಿಸಬೇಕು ಎಂದು ಅವರು ಮನವಿ ಮಾಡಿದ್ದಾರೆ.

ಕರಾವಳಿಯಲ್ಲಿ ಮೀನು ನಮ್ಮ ಜನರ ಮುಖ್ಯ ಆಹಾರ. ತರಕಾರಿ, ಕೋಳಿ ಮಾಂಸ, ಕುರಿ ಮಾಂಸದ ರೀತಿಯಲ್ಲಿ ಮೀನಿನ ವ್ಯಾಪಾರ ಕೂಡ ನಡೆಯಬೇಕು. ಅದಕ್ಕಾಗಿ ಸರಕಾರ ಮೀನುಗಾರಿಕೆಯ ಮೇಲೆ ಹೇರಿದ ನಿಷೇಧವನ್ನು ಹಿಂತೆಗೆದುಕೊಳ್ಳಬೇಕು. ಕೆಲವು ಸೂಕ್ತ ನಿಯಮಗಳನ್ನು ಜಾರಿಗೆ ತಂದು ಒಂದು ದಿನಕ್ಕೆ ಇಂತಿಷ್ಟು ಬೋಟ್‍ಗಳು ಮೀನುಗಾರಿಕೆ ನಡೆಸುವಂತೆ ಕ್ರಮ ವಹಿಸಬೇಕು ಎಂದು ದೇವೇಗೌಡ ಕೋರಿದ್ದಾರೆ.

ಮಾರುಕಟ್ಟೆಯಲ್ಲಿ ದೂರ ದೂರ ಕುಳಿತು ಮಾರಾಟ ಮಾಡಲು ಅವಕಾಶ ಕೊಡಬೇಕು, ಮಂಗಳೂರು-ಕಾಸರಗೋಡು ಗಡಿಯಲ್ಲಿ ನಿನ್ನೆ ಸರಿಯಾದ ವೈದ್ಯಕೀಯ ಚಿಕಿತ್ಸೆ ದೊರಕದೆ ಏಳು ಜನರು ಮೃತಪಟ್ಟಿದ್ದಾರೆಂದು ತಿಳಿದು ಬಂದಿದೆ. ಈ ಎಲ್ಲ ವಿಷಯಗಳನ್ನು ನಮ್ಮ ಪಕ್ಷದ ರಾಷ್ಟ್ರೀಯ ಕಾರ್ಯಾಧ್ಯಕ್ಷ  ಹಾಗೂ ವಿಧಾನಪರಿಷತ್ ಸದಸ್ಯ ಬಿ.ಎಂ.ಫಾರೂಕ್ ನನ್ನ ಗಮನಕ್ಕೆ ತಂದಿದ್ದಾರೆ ಎಂದು ದೇವೇಗೌಡ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News