ರಾಜ್ಯದಲ್ಲಿ ಕೊರೋನ ಸೋಂಕಿತರ ಸಂಖ್ಯೆಯಲ್ಲಿ ಮತ್ತಷ್ಟು ಹೆಚ್ಚಳ

Update: 2020-04-01 14:52 GMT
ಸಾಂದರ್ಭಿಕ ಚಿತ್ರ

ಬೆಂಗಳೂರು, ಎ.1: ರಾಜ್ಯದಲ್ಲಿ ಕೊರೋನ ಸೋಂಕಿತರ ಸಂಖ್ಯೆ ಹೆಚ್ಚುತ್ತಲೇ ಇದ್ದು, ಬುಧವಾರ ಸೋಂಕಿತರ ಸಂಖ್ಯೆ 110 ಕ್ಕೆ ಏರಿಕೆಯಾಗಿದೆ. ಅದರಲ್ಲಿ 9 ಪ್ರಕರಣಗಳು ಇಂದು ದೃಢಪಟ್ಟಿದ್ದು, ಇದುವರೆಗೆ ಒಟ್ಟು ಮೂರು ಜನರು ಮರಣ ಹೊಂದಿದ್ದಾರೆ.

ಈಗಾಗಲೇ ನೂರರ ಗಡಿ ದಾಟಿರುವ ಸೋಂಕಿತರ ಸಂಖ್ಯೆ ಮತ್ತಷ್ಟು ವೇಗದಲ್ಲಿ ಹೆಚ್ಚುತ್ತಲೇ ಇದೆ. ಇದರ ನಡುವೆ ಸಾಕಷ್ಟು ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುವಂತೆ ಸರಕಾರ, ಆರೋಗ್ಯ ಇಲಾಖೆ ಸಾರ್ವಜನಿಕರಿಗೆ ಸೂಚನೆ ನೀಡುತ್ತಿದ್ದರೂ ಜನರು ಗಂಭೀರವಾಗಿ ಪರಿಗಣಿಸದೇ ಇರುವುದು ಕಂಡುಬಂದಿದೆ.

ಇಂದಿನ ಸೋಂಕಿತರ ವಿವರ

ರೋಗಿ 102: ಬೆಂಗಳೂರಿನ ನಿವಾಸಿಯಾಗಿರುವ 24 ವರ್ಷದ ಪುರುಷರಾಗಿದ್ದು, ಇವರ ಬಗ್ಗೆ ವಿವರವಾದ ತನಿಖೆಯು ಪ್ರಗತಿಯಲ್ಲಿದೆ. ಇವರನ್ನು ಬೆಂಗಳೂರಿನ ನಿಗದಿತ ಆಸ್ಪತ್ರೆಯಲ್ಲಿ ಪ್ರತ್ಯೇಕಗೊಳಿಸಲಾಗಿದೆ.

ರೋಗಿ 103: ನಂಜನಗೂಡಿನ 37 ವರ್ಷದ ಪುರುಷರಾಗಿದ್ದು, ಈ ಹಿಂದೆ ಸೋಂಕು ದೃಢಪಟ್ಟ ರೋಗಿ ಕೆಲಸ ಮಾಡುತ್ತಿದ್ದ ಇಲ್ಲಿನ ಔಷಧಿ ಕಂಪೆನಿಯಲ್ಲಿ ಕೆಲಸ ಮಾಡುತ್ತಿದ್ದರು. 

ರೋಗಿ 104: ನಂಜನಗೂಡಿನ 27 ವರ್ಷದ ಪುರುಷರಾಗಿದ್ದು, ಈ ಹಿಂದೆ ಸೋಂಕು ದೃಢಪಟ್ಟ ರೋಗಿ ಕೆಲಸ ಮಾಡುತ್ತಿದ್ದ ಇಲ್ಲಿನ ಔಷಧಿ ಕಂಪೆನಿಯಲ್ಲಿ ಕೆಲಸ ಮಾಡುತ್ತಿದ್ದರು. ಇವರಿಬ್ಬರನ್ನೂ ಮೈಸೂರಿನ ನಿಗದಿತ ಆಸ್ಪತ್ರೆಯಲ್ಲಿ ಪ್ರತ್ಯೇಕಗೊಳಿಸಲಾಗಿದೆ.

ರೋಗಿ 105: ಬೆಂಗಳೂರು ಜಿಲ್ಲೆಯವರಾದ 33 ವರ್ಷದ ಪುರುಷರಾಗಿದ್ದು, ಈ ಹಿಂದೆ ಸೋಂಕು ದೃಢಪಟ್ಟ ರೋಗಿಯ ಸಂಪರ್ಕಿತ ವ್ಯಕ್ತಿಯಾಗಿದ್ದಾರೆ. ಇವರನ್ನು ಮೈಸೂರಿನ ನಿಗದಿತ ಆಸ್ಪತ್ರೆಯಲ್ಲಿ ಪ್ರತ್ಯೇಕಗೊಳಿಸಲಾಗಿದೆ.

ರೋಗಿ 106: ಪುತ್ತೂರು ನಿವಾಸಿಯಾದ 49 ವರ್ಷದ ಪುರುಷರಾಗಿದ್ದು, ದುಬೈ ಪ್ರವಾಸ ಮಾಡಿದ ಹಿನ್ನೆಲೆಯುಳ್ಳವರಾಗಿದ್ದಾರೆ. ಇವರನ್ನು ಪುತ್ತೂರು ಆಸ್ಪತ್ರೆಯಲ್ಲಿ ಪ್ರತ್ಯೇಕಗೊಳಿಸಲಾಗಿದೆ.

ರೋಗಿ 107: ಬೆಂಗಳೂರು ನಿವಾಸಿಯಾದ 26 ವರ್ಷದ ಯುವಕರಾಗಿದ್ದು, ಸ್ಪೇನ್ ದೇಶಕ್ಕೆ ಪ್ರಯಾಣ ಮಾಡಿರುವ ಹಿನ್ನೆಲೆಯಿದೆ. ಇವರನ್ನು ಬೆಂಗಳೂರಿನ ನಿಗದಿತ ಆಸ್ಪತ್ರೆಯಲ್ಲಿ ಪ್ರತ್ಯೇಕಗೊಳಿಸಲಾಗಿದೆ.

ರೋಗಿ 108: ಕೇರಳ ರಾಜ್ಯದ ನಿವಾಸಿಯಾದ 63 ವರ್ಷದ ವ್ಯಕ್ತಿಯಾಗಿದ್ದು, ಜರ್ಮನಿಗೆ ಪ್ರಯಾಣ ಮಾಡಿರುವ ಹಿನ್ನೆಲೆಯಿದ್ದು, ಅಬುಧಾಬಿ ಮೂಲಕ ಬೆಂಗಳೂರಿಗೆ ಬಂದಿದ್ದರು. ಇವರನ್ನು ನೇರವಾಗಿ ಕ್ವಾರಂಟೈನ್ ಮಾಡಲಾಗಿದ್ದು, ನಿಗದಿತ ಆಸ್ಪತ್ರೆಯಲ್ಲಿ ಪ್ರತ್ಯೇಕಗೊಳಿಸಲಾಗಿದೆ.

ರೋಗಿ 109: ಮೈಸೂರು ಜಿಲ್ಲೆಯವರಾದ 63 ವರ್ಷದ ಪುರುಷರಾಗಿದ್ದು, ಈ ಹಿಂದೆ ಸೋಂಕು ಇದ್ದ ರೋಗಿಯ ಸಂಪರ್ಕದಲ್ಲಿದ್ದವರು. ಇವರ ಆರೋಗ್ಯ ಸ್ಥಿರವಾಗಿದ್ದು, ಮೈಸೂರಿನ ನಿಗದಿತ ಆಸ್ಪತ್ರೆಯಲ್ಲಿ ಪ್ರತ್ಯೇಕಗೊಳಿಸಲಾಗಿದೆ.

ರೋಗಿ 110: ಮೈಸೂರು ನಿವಾಸಿಯಾದ 27 ವರ್ಷದ ಮಹಿಳೆಯಾಗಿದ್ದು, ಈ ಹಿಂದೆ ಸೋಂಕು ಇದ್ದ ರೋಗಿಯ ಸಂಪರ್ಕದಲ್ಲಿದ್ದವರು. ಇವರ ಆರೋಗ್ಯ ಸ್ಥಿರವಾಗಿದ್ದು, ಮೈಸೂರಿನ ನಿಗದಿತ ಆಸ್ಪತ್ರೆಯಲ್ಲಿ ಪ್ರತ್ಯೇಕಗೊಳಿಸಲಾಗಿದೆ.

ರಾಜ್ಯ ಸರಕಾರವು ಎಲ್ಲ ವೈದ್ಯಕೀಯ ಕಾಲೇಜುಗಳಿಗೆ(ಸರಕಾರಿ, ಖಾಸಗಿ ಮತ್ತು ಅನುದಾನಿತ/ಖಾಸಗಿ ವಿವಿ ವೈದ್ಯಕೀಯ ಕಾಲೇಜು) ಆಯಾ ಜಿಲ್ಲಾ ಅಧಿಕಾರಿಗಳೊಂದಿಗೆ ಸಮನ್ವಯದಿಂದ ಕೆಲಸ ಮಾಡುವಂತೆ ಆದೇಶಿಸಿದೆ. ಎಲ್ಲ ವೈದ್ಯಕೀಯ ಕಾಲೇಜುಗಳ ಸಮುದಾಯ ಆರೋಗ್ಯ ವಿಭಾಗದ ಅಧ್ಯಾಪಕರ ಸೇವೆಗಳನ್ನು ಸಮುದಾಯ ಆಧಾರಿತ ಚಟುವಟಿಕೆಗಳಿಗೆ ಮತ್ತು ಜಿಲ್ಲಾ ಹಾಗೂ ತಾಲೂಕು ಮಟ್ಟದಲ್ಲಿ ಯೋಜನೆಗೆ ಬಳಸಿಕೊಳ್ಳಲು ಆದೇಶಿಸಿದೆ.

ಬಿಬಿಎಂಪಿ ವ್ಯಾಪ್ತಿಯಡಿ ಜ್ವರ ಕ್ಲಿನಿಕ್‍ಗಳನ್ನು ಸ್ಥಾಪಿಸಲು ಮಾರ್ಗಸೂಚಿಯನ್ನು ಹೊರಡಿಸಲಾಗಿತ್ತು. ಮುಂದುವರಿದು ಮಾ.31 ರ ಸುತ್ತೋಲೆಯಂತೆ ಎಲ್ಲ ಜಿಲ್ಲೆಗಳಲ್ಲಿ ಸ್ಥಳೀಯ ಅಗತ್ಯಗಳಿಗೆ ಅನುಗುಣವಾಗಿ ಶಂಕಿತ ಕೋವಿಡ್ 19 ಪ್ರಕರಣಗಳಿಗೆ ಜ್ವರ ಕ್ಲಿನಿಕ್‍ಗಳನ್ನು ಸ್ಥಾಪಿಸಲು ಸರಕಾರ ಆದೇಶಿಸಿದೆ. ಕೇಂದ್ರ ಸರಕಾರದ ಸೂಚನೆಯಂತೆ ಎಲ್ಲ ಕೋವಿಡ್ 19 ಪ್ರಯೋಗಾಲಯಗಳನ್ನು ಜ್ವರ ಚಿಕಿತ್ಸಾಲಯಗಳಾಗಿ ಕಾರ್ಯ ನಿರ್ವಹಿಸುವಂತೆ ಮತ್ತು ಜ್ವರ ಚಿಕಿತ್ಸಾಲಯ ಪ್ರೊಟೋಕಾಲ್‍ನ್ನು ಅನುಸರಿಸಿ ಕೇಂದ್ರಿಕೃತ ಸಾಪ್ಟ್‍ವೇರ್ ನಲ್ಲಿ ವರದಿ ಮಾಡುವಂತೆ ಸೂಚಿಸಿದೆ.

ರಾಜ್ಯದ ಎಲ್ಲ ಜಿಲ್ಲಾಧಿಕಾರಿಗಳಿಗೆ ಕೋವಿಡ್ 19 ಪರೀಕ್ಷೆ ಮತ್ತು ಸ್ಕ್ರೀನಿಂಗ್ ಹಾಗೂ ಇತರ ಉಪಕರಣಗಳನ್ನು ಖರೀದಿಸಲು ಡಿಎಂಎಫ್ ಅನುದಾನವನ್ನು ಒಂದು ಬಾರಿ ಬಂಡವಾಳ ವೆಚ್ಚಕ್ಕಾಗಿ ಬಳಸಿಕೊಳ್ಳಲು ಆದೇಶಿಸಲಾಗಿದೆ.

ದಿಲ್ಲಿಯ ಮಸೀದಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಪಾಲ್ಗೊಂಡವರು ರಾಜ್ಯ ಆರೋಗ್ಯ ಇಲಾಖೆ ಸಹಾಯವಾಣಿ ಸಂಖ್ಯೆ 080-29711171ಕ್ಕೆ ಕರೆ ಮಾಡಿ ಸಂಪರ್ಕಿಸಬೇಕು. ಟೆಲಿ ಮೆಡಿಸಿನ್‍ನಲ್ಲಿ ಸ್ವಯಂಪ್ರೇರಿತವಾಗಿ ಕೆಲಸ ಮಾಡಲು ಬಂದಿರುವ ವೈದ್ಯರಿಗೆ ದೂರವಾಣಿ ಸಂಖ್ಯೆ 080-47192219 ಗೆ ಮಿಸ್ಡ್‍ಕಾಲ್ ನೀಡಲು ಮನವಿ ಮಾಡಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News