ಕೊರೋನ ಭೀತಿ: ಪಾಂಡವಪುರದಲ್ಲಿ 20ಕ್ಕೂ ಹೆಚ್ಚು ಹಂದಿ ಸಾಕಣೆ ಗುಡಿಸಲುಗಳ ನೆಲಸಮ

Update: 2020-04-01 17:12 GMT

ಪಾಂಡವಪುರ: ಮಹಾಮಾರಿ ಕೊರೋನ ವೈರಸ್ ಹರಡಬಹುದೆಂಬ ಭೀತಿಯಿಂದ ಸುಮಾರು 20ಕ್ಕೂ ಹೆಚ್ಚು ಹಂದಿ ಸಾಕಣೆ ಮಾಡುತ್ತಿದ್ದ ಗುಡಿಸಲುಗಳನ್ನು ತಾಲೂಕು ಆಡಳಿತ ನೆಲಸಮ ಮಾಡಿದ ಘಟನೆ ತಾಲೂಕಿನ ತಿರುಮಲಾಪುರ ಗ್ರಾಮದಲ್ಲಿ ಮಂಗಳವಾರ ನಡೆದಿದ್ದು, ಹಂದಿ ಸಾಕಣೆ ಮಾಡುತ್ತಿದ್ದ ಗ್ರಾಮಸ್ಥರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಘಟನೆಯಲ್ಲಿ ನೂರಾರು ಹಂದಿಗಳು ತಮ್ಮ ಮರಿಗಳ ಸಮೇತ ದಿಕ್ಕಾಪಾಲಾಗಿ ಓಡಿ ಹೋಗಿದ್ದು, 20ಕ್ಕೂ ಹೆಚ್ಚು ಗುಡಿಸಲುಗಳನ್ನು ನೆಲಸಮ ಮಾಡಲಾಗಿದೆ. ಯಾವುದೇ ಮುನ್ಸೂಚನೆ ನೀಡದೆ ತಾಲೂಕು ಆಡಳಿತ ಕಾರ್ಯಾಚರಣೆ ನಡೆಸಿದೆ ಎನ್ನಲಾಗಿದ್ದು, ಹಂದಿ ಸಾಕಣೆದಾರರು ಕಂಗಾಲಾಗಿದ್ದು, ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ತಿರುಮಲಾಪುರ ಗ್ರಾಮದಲ್ಲಿ ಸುಮಾರು 150 ಕುಟುಂಬಗಳು ವಾಸವಿದ್ದು, ಎಲ್ಲರೂ ತಮ್ಮ ಜೀವನೋಪಾಯಕ್ಕೆ ವಿಶ್ವೇಶ್ವರಯ್ಯ ನಾಲೆಯ ಏರಿ ಮೇಲೆ ಪುಟ್ಟ ಪುಟ್ಟ ಗುಡಿಸಲುಗಳನ್ನು ಹಾಕಿಕೊಂಡು ಹಲವಾರು ವರ್ಷಗಳಿಂದ ಹಂದಿ ಸಾಕಣೆ ಮಾಡುತ್ತಿದ್ದರು. ಹಂದಿ ಸಾಕಲು ಹತ್ತಾರು ಕಡೆ ಸಂಘ ಸಂಸ್ಥೆಗಳಲ್ಲಿ ಮತ್ತು ಬ್ಯಾಂಕುಗಳಲ್ಲಿ ಸಾಲ ಪಡೆದಿದ್ದಾರೆ. ಅಲ್ಲದೇ ತಮ್ಮಗಳ ಜೀವನೋಪಾಯಕ್ಕೆ ಹಂದಿ ಸಾಕಣೆಯನ್ನೇ ಅವಲಂಬಿಸಿದ್ದು, ತಾಲೂಕು ಆಡಳಿತ ಯಾವುದೇ ನೊಟೀಸ್ ನೀಡದೆ ಏಕಾಏಕಿ ಜೆಸಿಬಿ ಮೂಲಕ ಗುಡಿಸಲು ತೆರವು ಮಾಡಿದ್ದರಿಂದ ಹಂದಿಗಳು ದಿಕ್ಕಾಪಾಲಾಗಿ ಓಡಿವೆ, ಜತೆಗೆ ಗುಡಿಸಲುಗಳನ್ನು ನೆಲಸಮ ಮಾಡಿದ್ದರಿಂದ ಸಾಕಣೆದಾರರಿಗೆ ಲಕ್ಷಾಂತರ ರೂ. ನಷ್ಟ ಉಂಟಾಗಿದೆ ಎಂದು ಗ್ರಾಮಸ್ಥರು ಆರೋಪಿಸಿದರು.

ಇದೇ ಸಂದರ್ಭದಲ್ಲಿ ಗ್ರಾಮದ ಮುಖಂಡ ವಿಜಯಕುಮಾರ್ ಮಾತನಾಡಿ, ಹಂದಿ ಸಾಕಣೆ ಮಾಡುವುದನ್ನು ಏಕಾಏಕಿ ತೆರವುಗೊಳಿಸುವಂತಿಲ್ಲ. ಇದನ್ನೆ ನಂಬಿ ಬದುಕುತ್ತಿರುವ ಜನರಿಗೆ ಬೇರೆ ಸ್ಥಳವನ್ನು ತೋರಿಸಿ ಬಳಿಕ ತೆರವು ಮಾಡುವಂತೆ ಹೈ ಕೋರ್ಟ್ ನಿರ್ದೇಶನ ನೀಡಿದೆ. ಅಧಿಕಾರಿಗಳು ಯಾವುದೇ ನೊಟೀಸ್ ನೀಡದೆ ತೆರವುಗೊಳಿಸಿದ್ದರಿಂದ ಇದನ್ನೆ ನಂಬಿ ಬದುಕುತ್ತಿರುವ ಜನರಿಗೆ ಲಕ್ಷಾಂತರ ರೂ. ನಷ್ಟವಾಗಿದೆ. ಸರ್ಕಾರ ಕೂಡಲೇ ಅವರಿಗೆ ಪರಿಹಾರ ನೀಡಬೇಕು ಎಂದು ಒತ್ತಾಯಿಸಿದರು.

ಕಾಲುವೆಗೆ ಹಂದಿಗಳ ಮಲವನ್ನು ಬಿಡಲಾಗುತ್ತಿತ್ತು
ತಿರುಮಲಾಪುರ ಗ್ರಾಮದ ಮೂಲಕ ಹರಿಯುವ ವಿಶ್ವೇಶ್ವರಯ್ಯ ನಾಲೆಗೆ ಈ ಭಾಗದಲ್ಲಿ ಹಂದಿ ಸಾಕಣೆ ಮಾಡುತ್ತಿದ್ದವರು ಹಂದಿಗಳ ಮಲವನ್ನು ಕಾಲುವೆಗೆ ಬಿಡುತ್ತಿದ್ದರು. ಇದರಿಂದ ನೀರು ಕಲುಷಿತವಾಗಿ ಸಾರ್ವಜನಿಕ ಆರೋಗ್ಯದ ಮೇಲೆ ದುಷ್ಟರಿಣಾಮ ಬೀರುತ್ತಿತ್ತು. ಈ ಬಗ್ಗೆ ಪಂಚಾಯತ್ ಮೂಲಕ ಹಂದಿ ಸಾಕಣೆದಾರರಿಗೆ ನೋಟೀಸ್ ಸಹ ನೀಡಲಾಗಿತ್ತು. ಆದರೂ ಹಂದಿಗಳ ಮಲವನ್ನು ನೀರಿಗೆ ಬಿಡುವುದನ್ನು ನಿಲ್ಲಿಸದ ಕಾರಣ ಗುಡಿಸಲು ತೆರವು ಮಾಡಲಾಗಿದೆ.
-ಪ್ರಮೋದ್ ಎಸ್. ಪಾಟೀಲ್, ತಹಶೀಲ್ದಾರ್, ಪಾಂಡವಪುರ

'ಕಾಲುವೆ ಏರಿಯಲ್ಲಿ ಶುಚಿತ್ವ ಇರಲಿಲ್ಲ 
ತಿರುಮಲಪುರ ಗ್ರಾಮದಲ್ಲಿ ಹರಿಯುವ ವಿಶ್ವೇಶ್ವರಯ್ಯ ಕಾಲುವೆ ಏರಿ ಮೇಲೆ ಹಂದಿ ಸಾಕಣೆ ಮಾಡುತ್ತಿದ್ದು, ಸಾಕಣೆದಾರರು ಇಲ್ಲಿ ಶುಚಿತ್ವ ಕಾಪಾಡುತ್ತಿರಲಿಲ್ಲ. ಸತ್ತ ಕೋಳಿಯ ಕರುಳುಗಳನ್ನು ಮತ್ತು ಇನ್ನಿತರೆ ಗಲೀಜು ಪದಾರ್ಥಗಳನ್ನು ಹಂದಿಗಳಿಗೆ ತಿನ್ನಿಸಿ ಅದರ ಮಲವನ್ನು ಕಾಲುವೆಗೆ ಸುರಿಯುತ್ತಿದ್ದರು. ಇದರಿಂದ ಕೆಳಗಿನ ಭಾಗದ ಜನ ಮತ್ತು ಜಾನುವಾರುಗಳಿಗೆ ನೀರು ಬಳಕೆ ಮಾಡಲು ಆಗುತ್ತಿರಲಿಲ್ಲ. ಕಲುಷಿತ ನೀರಿನಿಂದ ರೋಗ ರುಜಿನಗಳು ಬರುತ್ತಿದ್ದವು. ಸಾರ್ವಜನಿಕರ ಆರೋಗ್ಯ ಕಾಪಾಡುವ ದೃಷ್ಟಿಯಿಂದ ಹಂದಿ ಸಾಕಣೆ ಗುಡಿಸಲುಗಳನ್ನು ತೆರವು ಮಾಡಲಾಗಿದೆ'
-ಆರ್.ಪಿ. ಮಹೇಶ್, ತಾ.ಪಂ. ಕಾರ್ಯನಿರ್ವಣಾಧಿಕಾರಿ ಪಾಂಡವಪುರ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News