ಕೊರೋನ ನಿಯಂತ್ರಣಕ್ಕೆ 25 ಸಾವಿರ ವೈದ್ಯರಿಗೆ ಆನ್‍ಲೈನ್ ಮೂಲಕ ತರಬೇತಿ

Update: 2020-04-01 17:52 GMT
ಸಾಂದರ್ಭಿಕ ಚಿತ್ರ

ಬೆಂಗಳೂರು, ಎ.1: ರಾಜ್ಯದಲ್ಲಿ ಕೊರೋನ ಸೋಂಕಿನಿಂದ ಎದುರಾಗಬಹುದಾದ ಅಪಾಯದಿಂದ ಪಾರಾಗಲು ಸರ್ವರೀತಿಯಲ್ಲೂ ಸನ್ನದ್ಧಗೊಳಿಸುವ ದೃಷ್ಟಿಯಿಂದ ವೈದ್ಯರಿಗೆ ಆನ್‍ಲೈನ್ ಮೂಲಕ ತರಬೇತಿ ಪ್ರಾರಂಭಿಸಲಾಗಿದೆ.

ರಾಜ್ಯದಲ್ಲಿ ಒಟ್ಟು 25 ಸಾವಿರ ವೈದ್ಯರು ಹಾಗೂ ಒಂದು ಸಾವಿರ ಅರೆ ವೈದ್ಯರಿಗೆ ಆನ್‍ಲೈನ್ ಮೂಲಕ ತರಬೇತಿ ನೀಡಲಾಗುತ್ತದೆ. ಇನ್ನು 15 ದಿನಗಳ ಕಾಲ ಕಟ್ಟೆಚ್ಚರದಿಂದ ಇರಬೇಕಾಗುತ್ತದೆ. ಹೀಗಾಗಿ ಚಿಕಿತ್ಸೆ ವಿಚಾರದಲ್ಲೂ ವೈದ್ಯರಲ್ಲೂ ನಿಖರತೆ ಇರಬೇಕು ಎಂಬ ಉದ್ದೇಶದಿಂದ ತರಬೇತಿಯ ವ್ಯವಸ್ಥೆ ಮಾಡಲಾಗಿದೆ.

ರಾಜೀವ್‍ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯ(ಆರ್ ಜಿಯುಎಚ್‍ಎಸ್) ಈ ತರಬೇತಿಯ ಏರ್ಪಾಡು ಮಾಡಿದ್ದು, ನಿಮ್ಹಾನ್ಸ್ ಸಂಸ್ಥೆಯ ಡಿಜಿಟಲ್ ಅಕಾಡೆಮಿ ಕೈ ಜೋಡಿಸಿದೆ. ನಿಮ್ಹಾನ್ಸ್ ಸಂಸ್ಥೆಯಲ್ಲಿ ತಜ್ಞರ ನೆರವಿನೊಂದಿಗೆ ಈ ತರಬೇತಿ ಸೋಮವಾರದಿಂದ ಆರಂಭವಾಗಿದೆ. 300 ವೈದ್ಯರು ಈಗಾಗಲೇ ಇದರ ಪ್ರಯೋಜನ ಪಡೆದುಕೊಂಡಿದ್ದಾರೆ.

ಏಕರೂಪ ಚಿಕಿತ್ಸೆ: ವಿಶ್ವ ಆರೋಗ್ಯ ಸಂಸ್ಥೆ, ಕೇಂದ್ರ ಆರೋಗ್ಯ ಸಚಿವಾಲಯಗಳ ಮಾರ್ಗಸೂಚಿ ಅನುಸಾರ ಕೋವಿಂಡ್-19 ಸೋಂಕು ತಗುಲಿದವರಿಗೆ ಏಕರೂಪ ಚಿಕಿತ್ಸೆ ನೀಡಬೇಕಾಗುತ್ತದೆ. ಈ ವಿಚಾರದಲ್ಲಿ ವೈದ್ಯ ಸಮೂಹದಲ್ಲೂ ಯಾವುದೇ ರೀತಿಯ ಗೊಂದಲ ಇರಬಾರದು. ಈ ದೃಷ್ಟಿಯಿಂದ ಆನ್‍ಲೈನ್ ತರಬೇತಿ ಮಹತ್ವದ್ದೆನಿಸಿದೆ ಎಂದು ರಾಜೀವ್‍ ಗಾಂಧಿ ಆರೋಗ್ಯ ವಿಜ್ಞಾನಗಳ ವಿವಿಯ ಕುಲಪತಿ ಡಾ.ಸಚ್ಚಿದಾನಂದ ತಿಳಿಸಿದ್ದಾರೆ.

ವೈದ್ಯರನ್ನು ಎ, ಬಿ, ಸಿ, ಡಿ, ಇ, ಎಫ್ ಎಂಬ ವಿಭಾಗದಡಿ ವಿಂಗಡಿಸಿಕೊಳ್ಳಲಾಗಿದೆ. ಎ ವಿಭಾಗದವರು ಸೋಂಕಿತರಿಗೆ ಚಿಕಿತ್ಸೆ ನೀಡುವವರಾಗಿರುತ್ತಾರೆ. ಬಿ ವಿಭಾಗದಲ್ಲಿ ಸರ್ಜನ್, ನೆಪ್ರೊಲಾಜಿ, ನ್ಯೂರೋಲಾಜಿಗಳಿರುತ್ತಾರೆ. ಉಳಿದ ವಿಭಾಗಗಳ ಸಹಕಾರವು ಮುಖ್ಯವಾಗಿರುತ್ತದೆ. ಇವರೆಲ್ಲರಿಗೂ ಚಿಕಿತ್ಸೆ ವಿಧಾನದ ಸ್ಪಷ್ಟ ಮಾರ್ಗದರ್ಶನ ಮಾಡಲಾಗುತ್ತದೆ ಎಂದು ಅವರು ಮಾಹಿತಿ ನೀಡಿದರು.

ವೈದ್ಯಕೀಯ ತುರ್ತು ಪರಿಸ್ಥಿತಿ ಎದುರಿಸಲು ಆನ್‍ಲೈನ್ ತರಬೇತಿ ಉತ್ತಮ ಕಾರ್ಯವಾಗಿದೆ. ವೈದ್ಯರಿಗೆ ಮಾಸ್ಕ್ ಸೇರಿದಂತೆ ರಕ್ಷಣಾ ಸಾಮಗ್ರಿ ಒದಗಿಸಲಾಗುವುದು. ಪಿಎಚ್‍ಸಿ ಮಟ್ಟದ ವೈದ್ಯರಿಗೆ ಸಂಪೂರ್ಣ ಸಹಕಾರ ನೀಡಲಾಗುವುದು.

-ಡಾ.ಕೆ.ಸುಧಾಕರ್, ವೈದ್ಯಕೀಯ ಶಿಕ್ಷಣ ಸಚಿವ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News