ಸಾವಿರಾರು ಕೋಟಿ ನರೇಗಾ ಕೂಲಿ ಹಣ ಬಾಕಿ: ಹಳೆಯ ಬಾಕಿ ಬಿಡುಗಡೆಯ ನಿರೀಕ್ಷೆಯಲ್ಲಿ ರಾಜ್ಯದ ಕಾರ್ಮಿಕರು

Update: 2020-04-01 18:11 GMT
ಸಾಂದರ್ಭಿಕ ಚಿತ್ರ

ಬೆಂಗಳೂರು, ಎ.1: ಕೊರೋನ ನಿಯಂತ್ರಿಸಲು ಕೇಂದ್ರ ಸರಕಾರ ದೇಶದ ಜನತೆಗೆ ಪ್ರೋತ್ಸಾಹ ಧನವನ್ನು ಘೋಷಣೆ ಮಾಡುತ್ತಿದೆ. ಆದರೆ ಕಳೆದ ಎರಡು ವರ್ಷಗಳಿಂದ ರಾಜ್ಯದ ನರೇಗಾ ಕಾರ್ಮಿಕರಿಗೆ ನೀಡಬೇಕಿರುವ ಕೂಲಿ ಹಣ 1,744 ಕೋಟಿ ನೀಡದೇ ಬಾಕಿ ಉಳಿಸಿಕೊಂಡಿದೆ. ಈಗ ರಾಜ್ಯಾದ್ಯಂತ ಲಾಕ್‍ಡೌನ್ ಜಾರಿಯಾಗಿರುವುದರಿಂದ ಇತ್ತ ಕೆಲಸವೂ ಇಲ್ಲದೆ ಸಂಕಷ್ಟದಲ್ಲಿ ಸಿಲುಕಿದ್ದಾರೆ. ಇಂತಹ ವೇಳೆಯಲ್ಲಿ ನರೇಗಾ ಕಾರ್ಮಿಕರು ಹಳೆಯ ಬಾಕಿ ನಿರೀಕ್ಷೆಯಲ್ಲಿದ್ದಾರೆ.

ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಕೆಲವು ದಿನಗಳ ಹಿಂದೆ ನರೇಗಾ ಕಾರ್ಮಿಕರಿಗೆ ಎರಡು ತಿಂಗಳ ಕೂಲಿಯನ್ನು ಮುಂಗಡವಾಗಿ ನೀಡುವುದಾಗಿ ಘೋಷಿಸಿದ್ದರು. ಆದರೆ, ಈಗಾಗಲೇ ದುಡಿದವರಿಗೆ ಕೂಲಿಯೇ ಬಂದಿಲ್ಲ. ಮೊದಲು ಸರಕಾರ ಅದನ್ನು ನೀಡಲಿ ಎಂದು ಕಾರ್ಮಿಕರ ಒತ್ತಾಯವಾಗಿದೆ.

ರಾಜ್ಯ ಸರಕಾರವೂ 755 ಕೋಟಿ ರೂ. ಕೂಲಿ ಹಣ ಬಾಕಿ ಉಳಿಸಿಕೊಂಡಿದೆ. 2018-19 ನೇ ಸಾಲಿನ 32.81 ಕೋಟಿ ಕೂಲಿ ಹಣ, 119.17 ಕೋಟಿ ಸಾಮಗ್ರಿ ಖರೀದಿ ಹಣ ಹಾಗೂ 2019-20 ನೇ ಸಾಲಿನ 53.61 ಕೋಟಿ ಕೂಲಿ ಹಣ, 549 ಕೋಟಿ ಸಾಮಗ್ರಿ ಹಣವನ್ನು ಬಾಕಿಯುಳಿಸಿಕೊಂಡಿದ್ದಾರೆ.

ನರೇಗಾ ಯೋಜನೆ ಅಡಿಯಲ್ಲಿ 2015-16 ರಿಂದ ಇದುವರೆಗೂ ರಾಜ್ಯ ಸರಕಾರ 3,513 ಕೋಟಿ ಪಾವತಿ ಮಾಡಿದ್ದು, ಅದರಲ್ಲಿ ಕೇಂದ್ರ ಸರಕಾರ 3,097.10 ಕೋಟಿ ರೂ. ಮರು ಪಾವತಿ ಮಾಡಿದೆ. ಇನ್ನು 416.12 ಕೋಟಿ ರೂ.ಗಳನ್ನು ಕೇಂದ್ರ ಸರಕಾರ ಮರು ಪಾವತಿ ಮಾಡಬೇಕಿದೆ.

ಗೊಂದಲದ ಆದೇಶ: ರಾಜ್ಯ ಸರಕಾರ ಕೊರೋನ ಹಿನ್ನೆಲೆಯಲ್ಲಿ ನರೇಗಾ ಅಡಿಯಲ್ಲಿ ವೈಯಕ್ತಿಕವಾಗಿ ಯಾವುದೇ ಆಕ್ಷನ್ ಪ್ಲಾನ್ ಇಲ್ಲದೇ ಕಾಮಗಾರಿ ಕೈಗೊತ್ತಿಕೊಳ್ಳಲಿ ಸರಕಾರ ಅವಕಾಶ ಕಲ್ಪಿಸಿ ಆದೇಶೀಸಿದೆ. ಇದು ಪಿಡಿಒ ಮತ್ತು ಪಂಚಾಯತ್ ಸದಸ್ಯರು ಬೇಕಾದವರಿಗೆ ಅನುಕೂಲ ಕಲ್ಪಿಸಿಕೊಟ್ಟಂತಾಗುತ್ತದೆ ಎಂಬ ಆರೋಪ ಕೇಳಿ ಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News