ಸಾರ್ವಜನಿಕರಿಗೆ ಅಗತ್ಯ ಸಾಮಗ್ರಿ ಪೂರೈಕೆಯಲ್ಲಿ ಗೊಂದಲ ಬೇಡ: ಸಚಿವ ಬಿ.ಎ.ಬಸವರಾಜ

Update: 2020-04-01 18:22 GMT

ಬೆಂಗಳೂರು. ಎ.1: ಲಾಕ್‍ಡೌನ್ ಹಿನ್ನೆಲೆಯಲ್ಲಿ ಸಾರ್ವಜನಿಕರಿಗೆ ಅಗತ್ಯ ಸಾಮಗ್ರಿ ಪೂರೈಕೆಯಲ್ಲಿ ಯಾವುದೆ ರೀತಿಯ ಗೊಂದಲಗಳು ಉಂಟಾಗದಂತೆ ನೋಡಿಕೊಳ್ಳಬೇಕು ಎಂದು ಅಧಿಕಾರಿಗಳಿಗೆ ನಗರಾಭಿವೃದ್ಧಿ ಸಚಿವ ಬಿ.ಎ.ಬಸವರಾಜ ಸೂಚನೆ ನೀಡಿದರು.

ಬುಧವಾರ ಮಹದೇವಪುರ ವಲಯ ಬಿಬಿಎಂಪಿ ಕಚೇರಿಯಲ್ಲಿ ಕೆ.ಆರ್.ಪುರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಕೊರೋನ ಸೋಂಕು ಹರಡುವುದನ್ನು ನಿಯಂತ್ರಿಸಲು ಕೈಗೊಂಡಿರುವ ಕ್ರಮಗಳ ಕುರಿತು ಅಧಿಕಾರಿಗಳೊಂದಿಗೆ ಅವರು ಚರ್ಚೆ ನಡೆಸಿದರು.

ಮಹಾಮಾರಿ ಕೊರೋನ ಸೋಂಕನ್ನು ಎಲ್ಲರೂ ಒಗ್ಗಟ್ಟಾಗಿ ಎದುರಿಸಬೇಕು. ಸರಕಾರ ಕೈಗೊಳ್ಳುತ್ತಿರುವ ಕ್ರಮಗಳಿಗೆ ಸಾರ್ವಜನಿಕರ ಸಹಕಾರವು ತುಂಬಾ ಮುಖ್ಯ. ಅನಗತ್ಯವಾಗಿ ಹೊರಗಡೆ ಓಡಾಡುವವರಿಗೆ ಕಡಿವಾಣ ಹಾಕುವುದು ಅತ್ಯವಶ್ಯಕವಾಗಿದೆ. ಈ ನಿಟ್ಟಿನಲ್ಲಿ ಪೊಲೀಸ್ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು ಎಂದು ಅವರು ಹೇಳಿದರು.

ಬಡವರು, ನಿರ್ಗತಿಕರು, ದಿನಗೂಲಿ ನೌಕರರಿಗೆ ಅಗತ್ಯ ಸಾಮಗ್ರಿ ವಿತರಣೆ ಮಾಡಬೇಕು. ಈಗಾಗಲೆ ಕೆ.ಆರ್.ಪುರ ಕ್ಷೇತ್ರದ ಪ್ರತಿಯೊಂದು ವಾರ್ಡ್‍ನಲ್ಲಿ ಎರಡು ಸಾವಿರ ಕುಟುಂಬಗಳಿಗೆ ಸ್ವಂತ ಖರ್ಚಿನಲ್ಲಿ ಅಗತ್ಯ ವಸ್ತುಗಳನ್ನು ಪೂರೈಕೆ ಮಾಡಲಾಗುತ್ತಿದೆ. ನಮ್ಮ ಜೊತೆ ದಾನಿಗಳು ಕೈ ಜೋಡಿಸಿದರೆ ಹೆಚ್ಚಿನ ಜನರಿಗೆ ಸೌಲಭ್ಯ ತಲುಪಿಸಬಹುದು ಎಂದು ಬಸವರಾಜ ತಿಳಿಸಿದರು.

ಕ್ಷೇತ್ರಾದ್ಯಂತ ಔಷಧಿ ಸಿಂಪಡಣೆ, ಸಮರ್ಪಕ ಕಸವಿಲೇವಾರಿ, ಸ್ವಚ್ಛತೆ ಆದ್ಯತೆ ನೀಡಬೇಕು. ಆಸ್ಪತ್ರೆಗಳಲ್ಲೂ ಸ್ವಚ್ಛತೆಯನ್ನು ಕಾಪಾಡಬೇಕು. ಸಾರ್ವಜನಿಕರ ಹಿತದೃಷ್ಟಿಯಿಂದ ಪ್ರಧಾನಿ ಕರೆ ನೀಡಿರುವ 21 ದಿನಗಳ ಲಾಕ್‍ಡೌನ್ ಅನ್ನು ನಾವು ಗೌರವಿಸಬೇಕಿದೆ. ಆದುದರಿಂದ, ಸಾರ್ವಜನಿಕರು ತಮ್ಮ ತಮ್ಮ ಮನೆಯಲ್ಲಿದ್ದು, ತಮ್ಮ ಹಾಗೂ ತಮ್ಮ ಕುಟುಂಬದ ಹಿತವನ್ನು ಕಾಪಾಡಬೇಕು ಎಂದು ಅವರು ಮನವಿ ಮಾಡಿದರು.

ಹೊಸದಿಲ್ಲಿಯ ನಿಝಾಮುದ್ದೀನ್‍ನಲ್ಲಿ ನಡೆದ ಧಾರ್ಮಿಕ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ವೈಟ್‍ಫೀಲ್ಡ್ ನಿಂದ ಸುಮಾರು 22 ರಿಂದ25 ಜನ ಹೋಗಿದ್ದರು ಎಂದು ಹೇಳಲಾಗುತ್ತಿದೆ. ಅವರನ್ನು ಪತ್ತೆ ಹಚ್ಚಿ ಮನೆಗಳಲ್ಲಿ ಕ್ವಾರಂಟೈನ್ ಮಾಡಲು ಪೊಲೀಸ್ ಇಲಾಖೆ ಹಾಗೂ ಆರೋಗ್ಯ ಇಲಾಖೆ ಕ್ರಮ ಕೈಗೊಂಡಿದೆ ಎಂದು ಬಸವರಾಜ ತಿಳಿಸಿದರು.

ಸಭೆಯಲ್ಲಿ ಬಿಬಿಎಂಪಿ ಸದಸ್ಯರಾದ ಎಂ.ಎನ್.ಶ್ರೀಕಾಂತ್, ಜಯಪ್ರಕಾಶ್, ಪದ್ಮಾವತಿ ಶ್ರೀನಿವಾಸ್, ಸುರೇಶ್, ಬೆಂಗಳೂರು ಪೂರ್ವ ತಾಲೂಕು ತಹಶೀಲ್ದಾರ್ ತೇಜಸ್‍ಕುಮಾರ್, ತಾಲೂಕು ಆರೋಗ್ಯಾಧಿಕಾರಿ ಡಾ.ಚಂದ್ರಶೇಖರ್, ಮಹದೇವಪುರ ವಲಯ ಜಂಟಿ ಆಯುಕ್ತ ವೆಂಕಟಾಚಲ ಸೇರಿದಂತೆ ಇನ್ನಿತರ ಅಧಿಕಾರಿಗಳು ಭಾಗವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News