ಯಾರೂ ಹಸಿವಿನಿಂದ ಇರದಂತೆ ನೋಡಿಕೊಳ್ಳಿ: ಅಧಿಕಾರಿಗಳಿಗೆ ಸಚಿವ ಸೋಮಣ್ಣ ಸೂಚನೆ

Update: 2020-04-01 18:56 GMT

ಮೈಸೂರು,ಎ.1: ಲಾಕ್‍ಡೌನ್ ಹಿನ್ನೆಲೆಯಲ್ಲಿ ಯಾರೊಬ್ಬರು ಹಸಿವಿನಿಂದ ಇರಬಾರದು. ಅಗತ್ಯವಿರುವ ಎಲ್ಲರಿಗೂ ನಂಜನಗೂಡು ತಾಲೂಕು ಆಡಳಿತದ ವತಿಯಿಂದ ಊಟೋಪಚಾರ ವ್ಯವಸ್ಥೆಯಾಗಬೇಕು ಎಂದು ವಸತಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ವಿ.ಸೋಮಣ್ಣ ಅವರು ತಿಳಿಸಿದರು

ನಂಜನಗೂಡಿನ ಕಾರ್ಖಾನೆಯೊಂದರಲ್ಲೇ ಹೆಚ್ಚಿನ ಕೋವಿಡ್-19 ಪ್ರಕರಣ ವರದಿಯಾದ ಹಿನ್ನೆಲೆಯಲ್ಲಿ ಜ್ಯುಬಿಲಿಯಂಟ್ ಕಾರ್ಖಾನೆ ಆವರಣಕ್ಕೆ ಭೇಟಿ ನೀಡಿ ಪರಿಶೀಲಿಸಿ ಹಾಗೂ ನಂಜನಗೂಡಿನ ಸುತ್ತಮುತ್ತಲಿನ ಪರಿಸ್ಥಿತಿಯನ್ನು ಅವಲೋಕಿಸಿ ಕಡಕೊಳದಲ್ಲಿರುವ ಕೆ.ಇ.ಬಿ ಇಂಜಿನಿಯರ್ಸ್ ಸಭಾಂಗಣದಲ್ಲಿ ಬುಧವಾರ ಅಧಿಕಾರಿಗಳ ಸಭೆ ನಡೆಸಿ ಅವರು ಮಾತನಾಡಿದರು.

ಇದೊಂದು ರಾಷ್ಟ್ರೀಯ ವಿಕೋಪ. ಅಧಿಕಾರಿಗಳು ಹಾಗೂ ವಿವಿಧ ಇಲಾಖೆಗಳು ಸಮನ್ವಯದಿಂದ ಕೆಲಸ ಮಾಡಬೇಕು, ತಪ್ಪಿತಸ್ಥರ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳಬೇಕು. ಕ್ವಾರಂಟೈನ್‍ನಲ್ಲಿರುವವರು ಹೊರಗಡೆ ಬರದಂತೆ ಎಚ್ಚರವಹಿಸಬೇಕೆಂದು ತಿಳಿಸಿದರು. 

ಕ್ವಾರಂಟೈನ್‍ನಲ್ಲಿರುವವರ ಮನೆಗಳಿಗೆ ಪೊಲೀಸರು ಪ್ರತಿದಿನ ಹೋಗಿ ಬರುತ್ತಾರೆ. ಅವರೊಟ್ಟಿಗೆ ಆಶಾ ಕಾರ್ಯಕರ್ತರು, ಅಂಗನವಾಡಿ ಕಾರ್ಯಕರ್ತರು ಸಹ ಹೋಗಿಬರಬೇಕು. ನರ್ಸ್ ಗಳನ್ನು ಈ ಕೆಲಸಕ್ಕೆ ನಿಯೋಜಿಸಬಾರದು. ನರ್ಸ್ಗಳನ್ನು ಆಸ್ಪತ್ರೆ ಕೆಲಸಗಳಿಗೆ ನಿಯೋಜಿಸಬೇಕು ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು. 

ಕಾರ್ಖಾನೆಯ 1,458 ನೌಕರರನ್ನು ಕ್ವಾರಂಟೈನ್‍ನಲ್ಲಿ ಇರಿಸಲಾಗಿದೆ. ಈ ಪೈಕಿ 761 ನಂಜನಗೂಡಿನವರು, 697 ನೌಕರರು ಇತರೆ ತಾಲೂಕಿನವರು ಎಂದು ತಹಶೀಲ್ದಾರ್ ಮಹೇಶ್ ಮಾಹಿತಿ ನೀಡಿದರು. ನಂಜನಗೂಡು ಹಾಗೂ ಸುತ್ತಮುತ್ತ ಸ್ಯಾನಿಟೈಸರ್, ಸ್ಪ್ರೇ ಮಾಡಲಾಗಿದೆ. ಕೆಲವರನ್ನು ಖಾಸಗಿ ಹೋಟೆಲ್‍ಗಳಲ್ಲಿ ಕ್ವಾರಂಟೈನ್ ಮಾಡಲಾಗಿದೆ. ಅವರಿಗೆ ಅಗತ್ಯವಿರುವ ಪರಿಕರಗಳನ್ನು ನೀಡಲಾಗಿದೆ ಎಂದು ತಿಳಿಸಿದರು. 

ಹೋಮ್ ಕ್ವಾರಂಟೈನ್‍ನಲ್ಲಿರುವ ಯಾರೊಬ್ಬರು ಹೊರಗೆ ಬಾರದಂತೆ ಪೊಲೀಸರು ಖಾತರಿ ಪಡಿಸಿಕೊಳ್ಳುತ್ತಾರೆ. ಈ ಬಗ್ಗೆ ಯಾರಿಗೂ ಆತಂಕ ಬೇಡ ಎಂದು ಪೊಲೀಸ್ ವರಿಷ್ಠಾಧಿಕಾರಿ ಸಿ.ಬಿ.ರಿಷ್ಯಂತ್ ಹೇಳಿದರು. 

ಇದಕ್ಕೂ ಮೊದಲು ಕೊರೊನಾ ಪ್ರಕರಣ ಹೆಚ್ಚಾದ ಹಿನ್ನೆಲೆಯಲ್ಲಿ ನಂಜನಗೂಡು ಹಾಗೂ ಸುತ್ತಮುತ್ತಲಿನ ಪ್ರದೇಶವನ್ನು ಕಂಟೈನ್‍ಮೆಂಟ್ ಜೋನ್ ಎಂದು ಘೋಷಿಸಲಾಗಿದೆ. ಇದರಿಂದ ಇಲ್ಲಿನ ಜನರು ಆತಂಕಗೊಂಡಿದ್ದಾರೆ. ಆದರೆ, ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾದ ವಿ.ಸೋಮಣ್ಣ ಅವರು ಬುಧವಾರ ಈ ಪ್ರದೇಶಗಳಿಗೆ ತೆರಳಿ ಪರಿಸ್ಥಿತಿ ಅವಲೋಕನ ಮಾಡಿ, ಜನರು ಆತಂಕ ಪಡುವ ಅಗತ್ಯವಿಲ್ಲ ನಿಮ್ಮೊಂದಿಗೆ ನಾವಿದ್ದೇವೆ ಎಂಬ ಸಂದೇಶವನ್ನು ರವಾನಿಸಿದ್ದಾರೆ. 

ಕಡಕೊಳ ಕೈಗಾರಿಕಾ ಪ್ರದೇಶ, ಸಿಂಧುವಳ್ಳಿ ಗೇಟ್, ನಂಜನಗೂಡು ಟೌನ್, ಶ್ರೀಶ್ರೀಕಂಠೇಶ್ವರ್ ದೇವಸ್ಥಾನ ದಾಸೋಹ ಭವನ ಮುಂತಾದ ಸ್ಥಳಗಳಿಗೆ ಭೇಟಿ ನೀಡಿ ಜಿಲ್ಲಾಡಳಿತ ಕೈಗೊಂಡಿರುವ ಮುನ್ನೆಚ್ಚರಿಕಾ ಕ್ರಮವನ್ನು ಖುದ್ದಾಗಿ ಪರಿಶೀಲಿಸಿದರು. ಪರಿಶೀಲನೆ ಸಂದರ್ಭದಲ್ಲಿ ಸುರಕ್ಷಿತ ಕ್ರಮವಾಗಿ ಮಾಸ್ಕ್ ಧರಿಸಿದ್ದರು. ಜಿಲ್ಲಾಧಿಕಾರಿಗಳು ಹಾಗೂ ವೈದ್ಯರ ಸಲಹೆಯಂತೆ ನಡೆದುಕೊಂಡರು.

ಸಭೆಯಲ್ಲಿ ಸಂಸದರಾದ ಪ್ರತಾಪ್ ಸಿಂಹ, ಶಾಸಕರಾದ ಹರ್ಷವರ್ಧನ್, ಜಿಲ್ಲಾ ಪಂಚಾಯಿತಿ ಸಿ.ಇ.ಒ ಪ್ರಶಾಂತ್ ಕುಮಾರ್ ಮಿಶ್ರ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ವೆಂಕಟೇಶ್ ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News