'ಇದೆಂತಹ ಗುಲಾಮಗಿರಿ ?': ಪಿಎಂ ಕೇರ್ ಫಂಡ್‍ಗೆ ರಾಜ್ಯದ ಶಾಸಕರ ದೇಣಿಗೆ ಬಗ್ಗೆ ಸಿದ್ದರಾಮಯ್ಯ ಕಿಡಿ
ಬೆಂಗಳೂರು, ಎ. 2: ಕ್ಷೇತ್ರದ ಅಭಿವೃದ್ಧಿಗೆ ಮೀಸಲಿಟ್ಟಿದ್ದ ಸಂಸದರ ನಿಧಿಯ ಹಣವನ್ನು ಬಿಜೆಪಿ ಸಂಸದರು, ‘ಪ್ರಧಾನ ಮಂತ್ರಿ ಪರಿಹಾರ ನಿಧಿ’ಗೆ ನೀಡುವುದು ನಿಯಮಬಾಹಿರ. ಮಾತ್ರವಲ್ಲ, ಸ್ವಕ್ಷೇತ್ರದ ಮತದಾರರಿಗೆ ಮಾಡಿರುವ ಅನ್ಯಾಯ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಗುರುವಾರ ಈ ಸಂಬಂಧ ಸರಣಿ ಟ್ವೀಟ್ ಮಾಡಿರುವ ಅವರು, ಸಂಸತ್ ಸದಸ್ಯರು ಸ್ವಕ್ಷೇತ್ರದ ಅಭಿವೃದ್ಧಿಗೆ ನೆರವಾಗುವ ಉದ್ದೇಶದಿಂದಲೇ ಸಂಸತ್ ಸದಸ್ಯರ ಪ್ರದೇಶಾಭಿವೃದ್ಧಿಯನ್ನು ಸ್ಥಾಪಿಸಿರುವುದು. ಹೀಗಾಗಿ ಆ ಹಣವನ್ನು ಯಾವುದೇ ಕಾರಣಕ್ಕೂ ಅನ್ಯ ಉದ್ದೇಶಕ್ಕೆ ಬಳಕೆ ಮಾಡುವುದು ಸರಿಯಲ್ಲ ಎಂದು ವಿರೋಧಿಸಿದ್ದಾರೆ.
ಬಿಜೆಪಿ ಸಂಸದರು ಎಂಪಿ ಗ್ರಾಂಟ್‍ನಿಂದ 1ಕೋಟಿ ರೂ. ಮತ್ತು ವೇತನದ 1ಲಕ್ಷ ರೂ.ಗಳನ್ನು ಪಿಎಂ ಕೇರ್ ಫಂಡ್‍ಗೆ ನೀಡಲು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ನೀಡಿರುವ ಸೂಚನೆ ಬೇಜವಾಬ್ದಾರಿತನದ್ದು. ಮುಖ್ಯಮಂತ್ರಿ ಪರಿಹಾರ ನಿಧಿಗೆ ಹಣ ನೀಡಬೇಕಿರುವುದು ಪ್ರತಿಯೊಬ್ಬ ಸಂಸದನ ಜವಾಬ್ದಾರಿ ಎಂದು ಸಿದ್ದರಾಮಯ್ಯ ಇಂದಲ್ಲಿ ಸಲಹೆ ಮಾಡಿದ್ದಾರೆ.
ಕೊರೋನ ವೈರಸ್ ಸೋಂಕು ಯಾವುದೇ ಒಂದು ರಾಜ್ಯಕ್ಕೆ ಅಲ್ಲವೇ ಪ್ರದೇಶಕ್ಕೆ ಸೀಮಿತವಾದುದಲ್ಲ. ಪ್ರತಿಯೊಂದು ರಾಜ್ಯವೂ ಕಷ್ಟದಲ್ಲಿದೆ. ಎಂಪಿ ಲ್ಯಾಡ್ ಹಣವನ್ನು ಜಿಲ್ಲಾಧಿಕಾರಿಗಳಿಗೆ ನೀಡಿ ಸ್ಥಳೀಯವಾಗಿ ಖರ್ಚು ಮಾಡುವಂತೆ ಮಾಡಬೇಕು ಎಂದು ಸಿದ್ಧರಾಮಯ್ಯ ಸೂಚಿಸಿದ್ದಾರೆ.
ತಮ್ಮದೆ ತೆರಿಗೆ ಹಣದಲ್ಲಿ ನ್ಯಾಯಯುತ ಪಾಲು ನೀಡದೆ ಕರ್ನಾಟಕಕ್ಕೆ ಪ್ರಧಾನಿ ಮೋದಿ ಅನ್ಯಾಯ ಮಾಡುತ್ತಿದ್ದಾರೆ. ರಾಜ್ಯದಲ್ಲಿ ಖರ್ಚಾಗಬೇಕಿದ್ದ ಹಣವನ್ನೂ ಕೇಂದ್ರ ತರಿಸಿಕೊಂಡು ಮತ್ತೆ ಕರ್ನಾಟಕಕ್ಕೆ, ಹೊಸದಿಲ್ಲಿ ದೊರೆಗಳ ಎದುರು ಕೈಯೊಡ್ಡಿ ನಿಲ್ಲುವಂತೆ ಮಾಡಿದೆ ಎಂದು ಸಿದ್ದರಾಮಯ್ಯ, ಬಿಜೆಪಿ ಸಂಸದರು ಮತ್ತು ಕೇಂದ್ರ ಸರಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕರ್ನಾಟಕ ಶಾಸಕರು ತಮ್ಮ ಒಂದು ತಿಂಗಳ ವೇತನವನ್ನು ಪಿಎಂ ಕೇರ್ ಫಂಡ್‍ಗೆ ಕೊಡಬೇಕಂತೆ. ಇಲ್ಲಿನ ಮುಖ್ಯಮಂತ್ರಿ ಯಡಿಯೂರಪ್ಪನವರು ಕೊರೋನ ನಿಯಂತ್ರಣಕ್ಕಾಗಿ ದೇಣಿಗೆ ಕೊಡುವಂತೆ ಸಾರ್ವಜನಿಕರ ಬಳಿ ಬೇಡಿಕೊಳ್ಳುತ್ತಿದ್ದಾರೆ. ಇದೆಂತಹ ವಿಪರ್ಯಾಸ? ಇದೆಂತಹ ಗುಲಾಮಗಿರಿ? ಎಂದು ಸಿದ್ದರಾಮಯ್ಯ ಟ್ವೀಟ್ಟರ್ ಮೂಲಕ ಖಾರವಾಗಿ ಪ್ರಶ್ನೆ ಮಾಡಿದ್ದಾರೆ.
ಕರ್ನಾಟಕದ ಶಾಸಕರು ತಮ್ಮ ಒಂದು ತಿಂಗಳ ಸಂಬಳವನ್ನು ಪಿಎಂ ಕೇರ್ ಫಂಡ್ ಗೆ ಕೊಡಬೇಕಂತೆ.
— Siddaramaiah (@siddaramaiah) April 2, 2020
ಇಲ್ಲಿನ ಮುಖ್ಯಮಂತ್ರಿ @BSYBJP ಅವರು ಕೊರೊನಾ ನಿಯಂತ್ರಣಕ್ಕಾಗಿ ದೇಣಿಗೆ ಕೊಡುವಂತೆ ಸಾರ್ವಜನಿಕರ ಬಳಿ ಬೇಡಿಕೊಳ್ಳುತ್ತಿದ್ದಾರೆ. ಇದೆಂತಹ ವಿಪರ್ಯಾಸ? ಇದೆಂತಹ ಗುಲಾಮಗಿರಿ?
5/5#Corona pic.twitter.com/hsdJtpMPpY