×
Ad

ಕೊರೋನ ನಿಯಂತ್ರಿಸಲು ಎಲ್ಲ ಧರ್ಮಗುರುಗಳು ಸಹಕರಿಸಬೇಕು: ಸಿಎಂ ಯಡಿಯೂರಪ್ಪ ಮನವಿ

Update: 2020-04-02 17:15 IST

ಬೆಂಗಳೂರು, ಎ. 2: ಮಾರಕ ಕೊರೋನ ವೈರಸ್ ಸೋಂಕನ್ನು ಸಮರ್ಥವಾಗಿ ನಿಯಂತ್ರಿಸಲು ಎಲ್ಲ ಧರ್ಮಗುರುಗಳು ಸಹಕರಿಸಬೇಕು. ತಮ್ಮ ಸಮುದಾಯದ ಜನರಲ್ಲಿ ಅರಿವು ಮೂಡಿಸಿ, ರಾಜ್ಯ ಸರಕಾರದೊಂದಿಗೆ ಸಹಕರಿಸಬೇಕು ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಇಂದಿಲ್ಲಿ ಮನವಿ ಮಾಡಿದ್ದಾರೆ.

ಗುರುವಾರ ವಿಧಾನಸೌಧದ ಸಮಿತಿ ಕೊಠಡಿಯಲ್ಲಿ ಕೊರೋನ ವೈರಸ್ ಸೋಂಕು ನಿಯಂತ್ರಣ ಸಂಬಂಧ ಪ್ರಧಾನಿ ಮೋದಿ ಅವರೊಂದಿಗೆ ವಿಡಿಯೋ ಸಂವಾದದಲ್ಲಿ ಪಾಲ್ಗೊಂಡ ಬಳಿಕ ಮಾತನಾಡಿದ ಅವರು, ನಿಝಾಮುದ್ದೀನ್‍ನಲ್ಲಿ ನಡೆದ ಪ್ರಾರ್ಥನಾ ಸಭೆಯಲ್ಲಿ ಪಾಲ್ಗೊಂಡ 391 ಜನರನ್ನು ಈಗಾಗಲೇ ಗುರುತಿಸಿ, ಮನೆಗಳನ್ನು ಪ್ರತ್ಯೇಕವಾಗಿ ಇರಿಸಲಾಗಿದೆ. ಇನ್ನುಳಿದವರನ್ನು ಪತ್ತೆ ಮಾಡಲಾಗುತ್ತಿದೆ. ಇವರು ಧರ್ಮ ಪ್ರಚಾರ ಮತ್ತು ಇತರ ಚಟುವಟಿಕೆಗಳಿಗೆ ವಿವಿಧ ಜಿಲ್ಲೆಗಳಿಗೆ ತೆರಳಿ ಲಾಕ್ ಡೌನ್ ಹಿನ್ನೆಲೆಯಲ್ಲಿ ಅಲ್ಲಿಯೆ ಸಿಲುಕಿಕೊಂಡಿರುವ ಸಾಧ್ಯತೆ ಇದೆ ಎಂದು ಹೇಳಿದರು.

ಇವರು ಎಲ್ಲಿ ಇದ್ದಾರೆಯೋ ಅಲ್ಲಿಯೆ ಕ್ವಾರೆಂಟೈನ್ ಮಾಡುವಂತೆ ಜಿಲ್ಲಾಧಿಕಾರಿಗಳಿಗೆ ಸೂಚಿಸಲಾಗಿದೆ. ಈ ಬಗ್ಗೆ ವ್ಯಾಪಕ ವಿಚಾರಣೆ ಮತ್ತು ತಾಂತ್ರಿಕ ಪ್ರಯತ್ನಗಳ ಅಗತ್ಯವಿದೆ. ಇವರನ್ನು ಕಡ್ಡಾಯವಾಗಿ ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲು ನಿರ್ಧರಿಸಲಾಗಿದೆ. ಅವರಲ್ಲಿ ಬೀದರ್ ನಲ್ಲಿ 91 ಜನರನ್ನು ಪರೀಕ್ಷಿಸಲಾಗಿದ್ದು, 11 ಜನರಿಗೆ ಕೊರೋನ ವೈರಸ್ ಸೋಂಕಿರುವುದು ದೃಢಪಟ್ಟಿದೆ ಎಂದು ಯಡಿಯೂರಪ್ಪ ವಿವರಿಸಿದರು.

ಬೆಂಗಳೂರಿನಲ್ಲಿ 30ಕ್ಕೂ ಹೆಚ್ಚು ಜನರನ್ನು ಪರೀಕ್ಷಿಸಲಾಗಿದ್ದು, ಅವರಿಗೆ ಸೋಂಕು ತಗುಲದೆ ಇರುವುದು ಗೊತ್ತಾಗಿದೆ. ಕೊರೋನ ವೈರಸ್ ಸೋಂಕನ್ನು ಸಮರ್ಥವಾಗಿ ನಿಯಂತ್ರಿಸಲು ಎಲ್ಲ ಧರ್ಮಗುರುಗಳು ಸಹಕರಿಸಬೇಕು. ತಮ್ಮ ಸಮುದಾಯದ ಜನರಲ್ಲಿ ಕೊರೋನ ಸೋಂಕಿನ ಕುರಿತು ಜಾಗೃತಿ ಮೂಡಿಸಬೇಕೆಂದು ಯಡಿಯೂರಪ್ಪ ಇದೇ ಸಂದರ್ಭದಲ್ಲಿ ಕೋರಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News