ಸಾಲಕ್ಕಾಗಿ ಬ್ಯಾಂಕ್ ಮುಂದೆ ಜಮಾಯಿಸಿದ ಜನತೆ: ಪೊಲೀಸರ ಎಚ್ಚರಿಕೆ ಬಳಿಕ ವಾಪಸ್

Update: 2020-04-02 12:07 GMT

ಬಳ್ಳಾರಿ, ಎ.2: ಕಡಿಮೆ ಬಡ್ಡಿ ದರದಲ್ಲಿ 10 ಸಾವಿರ ಸಾಲ ನೀಡಲಾಗುತ್ತದೆ ಎಂಬ ಪ್ರಕಟನೆ ಮೇರೆಗೆ ನಗರದ ಗೌತಮ ನಗರದ ನಿವಾಸಿಗಳು ಇಲ್ಲಿನ ಗಡಿಗಿ ಚೆನ್ನಪ್ಪ ವೃತ್ತದಲ್ಲಿರುವ ಸುಕೋ ಬ್ಯಾಂಕ್ ಮುಂಭಾಗ ಗುರುವಾರ ಬೆಳಗ್ಗೆಯೇ ಜನ ನೆರೆದಿದ್ದರು.

ಏಕಾಏಕಿ ಗುಂಪು ಸೇರಿದ್ದರಿಂದ ಆತಂಕಗೊಂಡ ಪೊಲೀಸರು ಜನರನ್ನು ವಾಪಸ್ ಕಳಿಸಲು ಹರಸಾಹಸ ಪಡೆಯಬೇಕಾಯಿತು. ಪೊಲೀಸರು ಎಷ್ಟೇ ಪ್ರಯತ್ನ ಪಟ್ಟರೂ ಜನರು ಅಲ್ಲಿಂದ ಕದಲಲಿಲ್ಲ. ಬ್ಯಾಂಕ್ ತೆರೆಯುವರೆಗೂ ನಾವಿಲ್ಲೇ ಇರುತ್ತೇವೆ. ವ್ಯವಸ್ಥಾಪಕರು ಬರುವರೆಗೂ ಹೋಗುವುದಿಲ್ಲ ಎಂದು ಪಟ್ಟು ಹಿಡಿದ ಪ್ರಸಂಗ ನಡೆಯಿತು. ಗುಂಪು ಸೇರಿದರೆ ಪ್ರಕರಣ ದಾಖಲಿಸಿ ವಶಕ್ಕೆ ಪಡೆಯಬೇಕಾಗುತ್ತದೆ ಎಂದು ಪೊಲೀಸರು ಎಚ್ಚರಿಕೆ ನೀಡಿದ ಬಳಿಕ ಜನರು ಚದುರಿದರು.

ಅಸಮಾಧಾನ: ಬ್ಯಾಂಕ್‍ನವರು ಸಾಲ ಕೊಡುತ್ತಾರೆ ಎಂಬ ಕಾರಣಕ್ಕೆ ನಾವಿಲ್ಲಿಗೆ ಬಂದಿದ್ದೇವೆ. ಆದರೆ, ಈಗ ನೋಡಿದರೆ ಲಾಕ್‍ಡೌನ್ ಮುಗಿಯುವರೆಗೂ ಕೊಡಲಾಗಲ್ಲ ಎನ್ನುತ್ತಿದ್ದಾರೆ ಅಧಿಕಾರಿಗಳು. ಅಲ್ಲಿಯವರೆಗೂ ಬಡವರು ಹೇಗೆ ಬದುಕಬೇಕು ಎಂದು ಇಲ್ಲಿನ ನಿವಾಸಿ ಗೌತಮ ನಗರದ ಹೊನ್ನೂರು ಬೇಸರ ವ್ಯಕ್ತಪಡಿಸಿದರು.

ಈ ಕುರಿತು ಪ್ರತಿಕ್ರಿಯೆ ನೀಡಿದ ಬ್ಯಾಂಕಿನ ಪ್ರಾದೇಶಿಕ ವ್ಯವಸ್ಥಾಪಕ ವೆಂಕಟೇಶರಾವ್, ಲಾಕ್‍ಡೌನ್ ಅವಧಿ ಮುಗಿದ ಬಳಿಕ ಅರ್ಜಿದಾರರ ದಾಖಲೆ, ವಾಸಸ್ಥಳ ಪರಿಶೀಲಿಸಿ ಸಾಲ ನೀಡುವ ಪ್ರಕ್ರಿಯೆ ಮಾಡುತ್ತೇವೆ. ಅದುವರೆಗೂ ಜನತೆ ತಾಳ್ಮೆಯಿಂದ ಇರಬೇಕು ಎಂದು ಮನವಿ ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News