ಸಿಎಂ ಬಿಎಸ್‌ವೈ ವಿರುದ್ಧದ ಆಡಿಯೋ ವೈರಲ್: ಮೂವರು ಶಿಕ್ಷಕರ ಅಮಾನತಿಗೆ ಆದೇಶ

Update: 2020-04-02 14:18 GMT

ಚಿಕ್ಕಮಗಳೂರು, ಎ.2: ಕೋರೋನ ಭೀತಿ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಪರಿಹಾರ ನಿಧಿಗೆ ದೇಣಿಗೆ ನೀಡುವಂತೆ ಕೇಳಿರುವ ಸಿಎಂ ವಿರುದ್ಧ ಅವಹೇಳನಕಾರಿಯಾಗಿ ಆಡಿಯೋ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಪ್ರಸಾರ ಮಾಡಿದ ಆರೋಪದ ಮೇರೆಗೆ ಜಿಲ್ಲೆಯ ಮೂವರು ಶಿಕ್ಷಕರನ್ನು ಅಮಾನತು ಮಾಡಲು ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಆದೇಶಿಸಿದ್ದಾರೆ.

ಜಿಲ್ಲೆಯ ಕಡೂರು ತಾಲೂಕಿನ ಗಿರಿಯಾಪುರದ ಗುರುಕೃಪ ಪ್ರೌಢಶಾಲೆಯ ಧರಣೇಂದ್ರ ಮೂರ್ತಿ, ತರೀಕೆರೆ ತಾಲೂಕಿನ ಅಮೃತೇಶ್ವರ ಪ್ರೌಢಶಾಲೆಯ ಎಂ.ರಂಗಣ್ಣ ಹಾಗೂ ಕಡೂರು ತಾಲೂಕು ಬಾಸೂರಿನ ಚೆನ್ನಕೇಶ್ವರ ಪ್ರೌಢಶಾಲೆಯ ಸಿ.ಎಚ್.ಕುಮಾರ್ ಎಂಬವರು ವಾಟ್ಸ್ ಆ್ಯಪ್ ಗ್ರೂಪ್‍ನಲ್ಲಿ ಮುಖ್ಯಮಂತ್ರಿಗಳ ವಿರುದ್ಧ 'ಹಲೋ ಸಿಎಂ ಸಾಹೇಬರೇ...ಸಾರ್ವಜನಿಕರಿಂದ ಹಣ ಕೇಳಿದ್ದೀರಿ. ಹಣದ ಲೀಸ್ಟ್ ಇಲ್ಲಿದೆ ನೋಡಿ' ಎಂಬ ಆಡಿಯೋ ರೆಕಾರ್ಡ್ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು ಎಂದು ಆರೋಪಿಸಲಾಗಿದೆ.

ಈ ಮೂಲಕ ಶಿಕ್ಷಕರು ಶಿಕ್ಷಣ ಕಾಯ್ದೆ 1999 ನಿಯಮ 24 ಮತ್ತು 25(3) (ಎಫ್) ಉಲ್ಲಂಘನೆ ಮಾಡಿದ್ದು, ಆಯಾಯ ಶಾಲಾ ಆಡಳಿತ ಮಂಡಳಿಗಳು ಈ ಶಿಕ್ಷಕರನ್ನು ತಕ್ಷಣದಿಂದಲೇ ಅಮಾನತ್ತಿನಲ್ಲಿಡುವಂತೆ ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಸಿ.ನಂಜಯ್ಯ ಅವರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News