5,000 ಪ್ರಯಾಣಿಕರ ಕೋಚ್‍ಗಳನ್ನು ಐಸೋಲೇಷನ್ ವಾರ್ಡ್‍ಗಳಾಗಿ ಪರಿವರ್ತಿಸಲಿರುವ ಭಾರತೀಯ ರೈಲ್ವೆ

Update: 2020-04-02 14:40 GMT
ಸಾಂದರ್ಭಿಕ ಚಿತ್ರ

ಬೆಂಗಳೂರು, ಎ.2: ದೇಶದಲ್ಲಿ ಕೋವಿಡ್-19 ಸೋಂಕು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಐಸೋಲೇಷನ್ ವಾರ್ಡ್‍ಗಳನ್ನು ಹೆಚ್ಚಿಸಬೇಕಾದ ಅಗತ್ಯವಿರುವುದರಿಂದ ಭಾರತೀಯ ರೈಲ್ವೆಯು 5 ಸಾವಿರ ಪ್ರಯಾಣಿಕ ಕೋಚ್‍ಗಳನ್ನು ಕೋವಿಡ್-19 ರೋಗಿಗಳ ಐಸೋಲೇಷನ್ ವಾರ್ಡ್‍ಗಳಾಗಿ ಪರಿವರ್ತಿಸಲು ಕ್ರಮ ಕೈಗೊಂಡಿದೆ.

ಈ ಕೋಚ್‍ಗಳ ಮಾದರಿಯನ್ನು ಭಾರತೀಯ ಸಶಸ್ತ್ರ ಪಡೆಗಳ ವೈದ್ಯಕೀಯ ಸೇವೆಗಳು, ಭಾರತೀಯ ರೈಲ್ವೆಯ ವೈದ್ಯಕೀಯ ಇಲಾಖೆ ಹಾಗೂ ಆಯುಷ್ಮಾನ್ ಭಾರತ್ ಇಲಾಖೆಯ ಸಹಯೋಗದೊಂದಿಗೆ ಅಭಿವೃದ್ದಿಪಡಿಸಲಾಗಿದೆ. ಐಸೋಲೇಷನ್ ವಾರ್ಡ್‍ಗಳಲ್ಲಿ ಅಗತ್ಯವಿರುವ ವೈದ್ಯಕೀಯ ಸೌಲಭ್ಯಗಳ ಅಗತ್ಯತೆಯನ್ನು ಪರಿಗಣಿಸಿ, ಮಾರ್ಪಡಿಸಲಾಗುತ್ತದೆ.

ಈ ಕೋಚ್‍ಗಳು ಮೊಬೈಲ್ ಮತ್ತು ಲ್ಯಾಪ್‍ಟಾಪ್ ಚಾರ್ಜರ್ ಪಾಯಿಂಟ್‍ಗಳನ್ನು, ಸೊಳ್ಳೆ ಪರದೆ ಮುಂತಾದ ಸೌಲಭ್ಯಗಳನ್ನು ಒಳಗೊಂಡಿರುತ್ತದೆ. ವೈದ್ಯಕೀಯ ಮತ್ತು ಅರೆವೈದ್ಯಕೀಯ ಸಿಬ್ಬಂದಿಯು ತಂಗಲು ಸ್ಥಳಾವಕಾಶ ಸಹ ನೀಡಲಾಗಿದೆ. ಪ್ರತಿ ಕೋಚ್ ಎಂಟು ರೋಗಿಗಳಿಗೆ ಅಗತ್ಯವಿರುವ ಸವಲತ್ತುಗಳನ್ನು ಹೊಂದಿರುತ್ತದೆ.

ನೈರುತ್ಯ ರೈಲ್ವೆಯು 312 ಪ್ರಯಾಣಿಕರ ಕೋಚ್‍ಗಳನ್ನು ಐಸೋಲೇಷನ್ ವಾರ್ಡ್‍ಗಳನ್ನಾಗಿ ಪರಿವರ್ತಿಸಲು ಗುರಿ ಹೊಂದಿದ್ದು, ದಿನವೊಂದಕ್ಕೆ ಸರಾಸರಿ 20 ಕೋಚ್‍ಗಳನ್ನು ಪರಿರ್ತಿಸುವ ಕ್ಷಮತೆಯನ್ನು ನೈರುತ್ಯ ರೈಲ್ವೆಯು ಹೊಂದಿದೆ. ಪ್ರಸಕ್ತ ಹುಬ್ಬಳ್ಳಿಯಲ್ಲಿ 138, ಮೈಸೂರಿನಲ್ಲಿ 138, ಹಾಗೂ ಬೆಂಗಳೂರಿನಲ್ಲಿ 36 ಕೋಚ್‍ಗಳನ್ನು ಪರಿವರ್ತಿಸುವ ಕಾರ್ಯವು ಜಾರಿಯಲ್ಲಿದೆ ಹಾಗೂ ಒಟ್ಟಾರೆ 312 ಕೋಚ್‍ಗಳಲ್ಲಿ ಈಗಾಗಲೇ, 39 ಕೋಚ್‍ಗಳನ್ನು ಪರಿವರ್ತನೆಗೊಳಿಸಲಾಗಿದೆ

ಸುಮಾರು 2,500 ಮಂದಿಯನ್ನು ಪ್ರತ್ಯೇಕಿಸಲು ಈ ಕೋಚ್‍ಗಳು ನೆರವಿಗೆ ಬರುತ್ತವೆ. ಈ ಕೋಚ್‍ಗಳನ್ನು ರೈಲ್ವೆ ಸಂಪರ್ಕ ಹೊಂದಿರುವ ಯಾವುದೇ ಪ್ರದೇಶಕ್ಕೆ ಸ್ಥಳಾಂತರಿಸಬಹುದಾಗಿದೆ. ಕರ್ನಾಟಕ ಸರಕಾರದ ಮೂಲಸೌಲಭ್ಯ ಅಭಿವೃದ್ದಿ ಇಲಾಖೆ ಹಾಗೂ ನೈರುತ್ಯ ರೈಲ್ವೆಯು ಈ ಕೋಚ್‍ಗಳನ್ನು ಅಗತ್ಯದ ಸಂದರ್ಭದಲ್ಲಿ ಬಳಸಲು ಯೋಜಿಸಿದೆ ಎಂದು ಮೂಲಸೌಲಭ್ಯ ಅಭಿವೃದ್ದಿ ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News