ಜೀವಕ್ಕಿಂತ ಯಾವ ಧರ್ಮವೂ ದೊಡ್ಡದಲ್ಲ, ತಪಾಸಣೆಗೆ ಒಳಗಾಗಿ: ಕುಮಾರಸ್ವಾಮಿ ಮನವಿ

Update: 2020-04-02 15:38 GMT

ಬೆಂಗಳೂರು, ಎ. 2: ಹೊಸದಿಲ್ಲಿಯ ನಿಝಾಮುದ್ದೀನ್ ಧಾರ್ಮಿಕ ಸಭೆಯಲ್ಲಿ ಭಾಗವಹಿಸಿದವರೆಲ್ಲರೂ ಕಡ್ಡಾಯವಾಗಿ ಸ್ವಯಂ ಪ್ರೇರಿತರಾಗಿ ವೈದ್ಯಕೀಯ ತಪಾಸಣೆಗೆ ಒಳಗಾಗಬೇಕು ಎಂದು ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಹಾಗೂ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಇಂದಿಲ್ಲಿ ಮನವಿ ಮಾಡಿದ್ದಾರೆ.

ಗುರುವಾರ ಈ ಸಂಬಂಧ ಸರಣಿ ಟ್ವೀಟ್ ಮಾಡಿರುವ ಅವರು, ಜೀವಕ್ಕಿಂತ ಯಾವ ಧರ್ಮವೂ ದೊಡ್ಡದಲ್ಲ. ತಪಾಸಣೆ ಮಾಡಲು ಬಂದ ವೈದ್ಯಕೀಯ ಸಿಬ್ಬಂದಿಯ ಮೇಲೆ ಹಲ್ಲೆ ಮಾಡುವುದು, ತಿರುಗಿ ಬೀಳುವುದು ಖಂಡನೀಯ. ದೇಶದ ಸ್ವಾಸ್ಥ್ಯ ಮತ್ತು ಸಂವಿಧಾನಕ್ಕಿಂತ ಯಾರೂ ದೊಡ್ಡವರಲ್ಲ ಎಂದು ಪ್ರತಿಪಾದಿಸಿದ್ದಾರೆ.

ಬೆಂಗಳೂರಿನ ಹೆಗಡೆ ನಗರದ ಬಳಿ ಬರುವ ಸಾದಿಕ್ ನಗರದಲ್ಲಿ ಆಶಾ ಕಾರ್ಯಕರ್ತೆಯರು ತಪಾಸಣೆ ಮಾಡುವ ವೇಳೆ ಯುವಕರು ಗುಂಪಾಗಿ ಸೇರಿ ಅಸಭ್ಯವಾಗಿ ವರ್ತಿಸಿ ಹಲ್ಲೆ ಮಾಡಿದ್ದು ಇವರು ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಕುಮಾರಸ್ವಾಮಿ ಒತ್ತಾಯ ಮಾಡಿದ್ದಾರೆ.

ರಾಷ್ಟ್ರದ ಹಿತಾಸಕ್ತಿ ವಿರುದ್ಧ ಯಾರೂ ಧ್ವನಿ ಎತ್ತಬಾರದು. ಅತಿರೇಕದ ವರ್ತನೆಗಳಿಗೆ ಖಂಡಿತಾ ನನ್ನ ಬೆಂಬಲವಿಲ್ಲ. ಇದು ಜಾತಿ, ಧರ್ಮಗಳ ಪ್ರಶ್ನೆಯಲ್ಲ. ರಾಷ್ಟ್ರದ ಭವಿಷ್ಯದ ಪ್ರಶ್ನೆ ಎಂದು ಕುಮಾರಸ್ವಾಮಿ ತಮ್ಮ ಟ್ವೀಟ್ಟರ್ ನಲ್ಲಿ ಬರೆದುಕೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News