ಎ.14ರವರೆಗೆ ರಾಜ್ಯದಲ್ಲಿ ಮೀನುಗಾರಿಕೆಗೆ ಅನುಮತಿ

Update: 2020-04-02 16:28 GMT
ಫೈಲ್ ಚಿತ್ರ

ಬೆಂಗಳೂರು, ಎ.2: ಕೊರೋನ ಸೋಂಕು ಹರಡುವಿಕೆ ಸಂಬಂಧ ಹಾಕಲಾಗಿದ್ದ ತಾತ್ಕಲಿಕ ನಿರ್ಬಂಧ ತೆರವುಗೊಳಿಸಿ, ಪ್ರೋಟಿನ್ ಯುಕ್ತ ಉತ್ತಮ ಮೀನು ಲಭ್ಯತೆ ದೃಷ್ಟಿಯಿಂದ ರಾಜ್ಯದಲ್ಲಿ ಮೀನುಗಾರಿಕೆ ಪ್ರಕ್ರಿಯೆಗೆ ಅನುಮತಿ ನೀಡಲಾಗಿದೆ.

ಗುರುವಾರ ಈ ಕುರಿತು ಆದೇಶ ಹೊರಡಿಸಿರುವ ಪಶುಸಂಗೋಪನೆ ಮತ್ತು ಮೀನುಗಾರಿಕೆ ಇಲಾಖೆ ಕಾರ್ಯದರ್ಶಿ ಎ.ಬಿ.ಇಬ್ರಾಹೀಂ, ರಾಜ್ಯದಲ್ಲಿರುವ ಸುಮಾರು 9 ಸಾವಿರಕ್ಕೂ ಅಧಿಕ ಕರಾವಳಿ ನಾಡ ಮೀನುಗಾರರು ಹಾಗೂ ಸಹಸ್ರಾರು ಒಳನಾಡು ಮೀನುಗಾರರ ಜೀವನೋಪಾಯ ರಕ್ಷಿಸುವ ದೃಷ್ಟಿಯಿಂದ ನಿರ್ಬಂಧಿತ ರೀತಿಯಲ್ಲಿ ಎ.14ರವರೆಗೆ ಮೀನುಗಾರಿಕೆ ನಡೆಸಲು ಅನುಮತಿ ನೀಡಲಾಗಿದೆ ಎಂದು ತಿಳಿಸಿದ್ದಾರೆ.

ಜಲಾಶಯಗಳಲ್ಲಿ ಪರವಾನಿಗೆ ಪಡೆದ ಮೀನುಗಾರರು ತಮ್ಮ ಹರಿಗೋಲುಗಳ ಮೂಲಕ ಮೀನು ಹಿಡುವಳಿ ಕೈಗೊಳ್ಳಬಹುದಾಗಿದೆ. ಹಿಡಿದ ಮೀನುಗಳನ್ನು ಸಾಧ್ಯವಾದಷ್ಟು ಪ್ರತ್ಯೇಕ ಇಳುವಡಿ ಕೇಂದ್ರಗಳಲ್ಲಿ 1 ತೀರ ಪ್ರದೇಶಗಳಲ್ಲಿ ಮಾಡತಕ್ಕದ್ದು ಎಂದು ಅವರು ಸಲಹೆ ನೀಡಿದ್ದಾರೆ.

ಮೀನು ಮಾರಾಟ ಸಂದರ್ಭದಲ್ಲಿ ಜನಸಂದಣಿಯಾಗದಂತೆ, ವ್ಯಕ್ತಿಗತ ಅಂತರವನ್ನು ಕಾಪಾಡಿಕೊಳ್ಳುವುದು. ಸ್ಥಳೀಯ ಪರಿಸ್ಥಿತಿಗನುಗುಣವಾಗಿ ಮನೆ ಮನೆಗೆ ಮಾರಾಟ ಮಾಡುವ ಬಗ್ಗೆ ಹಾಗೂ ಮಾರುಕಟ್ಟೆ ಮಳಿಗೆಗಳಲ್ಲಿ ಮಾರಾಟ ಮಾಡುವ ಬಗ್ಗೆ ಸ್ಥಳೀಯ ಪ್ರಾಧಿಕಾರಗಳ ಅನುಮತಿ ಮೇರೆಗೆ ಮಾಡತಕ್ಕದ್ದು, ಜೊತೆಗೆ ಮೀನು ಸಾಗಾಟ ಸಂಗ್ರಹಣೆ ಮತ್ತು ಜೋಪಾಸನೆ ಬಗ್ಗೆ ಕರ್ನಾಟಕ ಮೀನುಗಾರಿಕೆ ಅಭಿವೃದ್ಧಿ ನಿಗಮ, ಮಂಗಳೂರು ಮತ್ತು ಕರ್ನಾಟಕ ಸಹಕಾರಿ ಮೀನುಗಾರಿಕೆ ಮಹಾಮಂಡಳಿ (ನಿ), ಮೈಸೂರು ಈ ಸಂಸ್ಥೆಗಳ ಸಹಕಾರ ಪಡೆಯಬೇಕು. ಮೀನುಗಾರಿಕೆ ಹಾಗೂ ಮಾರಾಟಕ್ಕೆ ಸಂಬಂಧಿಸಿದಂತೆ ಜಿಲ್ಲಾಧಿಕಾರಿಗಳು ನಿಗದಿತ ಪಾಸ್ ನೀಡಲು, ಅಂಗಡಿಗಳಲ್ಲಿ ಮೀನು ಮಾರಾಟ ಮಾಡಲು ಪೂರಕ ಕ್ರಮ ಜರುಗಿಸಬೇಕಾಗಿ ಸೂಚಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News