ಬೇಡಿಕೆಗೆ ಅನುಗುಣವಾಗಿ ಉಪಕರಣ ಪೂರೈಕೆಗೆ ಸಿದ್ಧ: ಸಚಿವ ಶ್ರೀರಾಮುಲು

Update: 2020-04-03 12:12 GMT

ಬಾಗಲಕೋಟೆ, ಎ.3: ಕೋವಿಡ್ 19 ವಿರುದ್ಧ ಹೋರಾಡಲು ಅಗತ್ಯವಿರುವ ಉಪಕರಣಗಳನ್ನು ಬೇಡಿಕೆಗೆ ಅನುಗುಣವಾಗಿ ಪೂರೈಸಲು ಕ್ರಮ ಕೈಗೊಳ್ಳಲಾಗುವುದು ಎಂದು ಆರೋಗ್ಯ ಸಚಿವ ಶ್ರೀರಾಮುಲು ಹೇಳಿದ್ದಾರೆ.

ನಗರದಲ್ಲಿಂದು ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ನಡೆದ ಕೋವಿಡ್ 19 ನಿಯಂತ್ರಣದ ಕುರಿತ ಕೈಗೊಂಡ ಕ್ರಮಗಳ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಯಾವುದೇ ಪಾಸಿಟಿವ್ ಪ್ರಕರಣಗಳು ವರದಿಯಾಗಿಲ್ಲ. ಮುಂದಿನ ದಿನಗಳಲ್ಲಿ ಪ್ರಕರಣಗಳು ಸೃಷ್ಟಿಯಾಗಬಾರದು ಎಂಬ ಕಾರಣಕ್ಕೆ ಸಾಕಷ್ಟು ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ಅದಕ್ಕಾಗಿ ಅಗತ್ಯ ವೈದ್ಯಕೀಯ ಸೌಲಭ್ಯ, ಉಪಕರಣಗಳು ಹಾಗೂ ವೈದ್ಯರ ತಂಡ ಸೇರಿದಂತೆ ಸೂಕ್ತ ಕ್ರಮಗಳನ್ನು ತಯಾರಿಯಲ್ಲಿಟ್ಟುಕೊಂಡಿರಬೇಕು ಎಂದು ಸೂಚಿಸಿದರು.

ಜಿಲ್ಲೆಯಾದ್ಯಂತ ಕೊರತೆಯಿರುವ ಉಪಕರಣಗಳನ್ನು ಸರಕಾರದಿಂದ ಒದಗಿಸಲಾಗುವುದು. ಸ್ಥಳೀಯ ಆಡಳಿತವು ಯಾವುದೇ ನಿರ್ಲಕ್ಷವಿಲ್ಲದೆ, ಸರಕಾರದ ಸೂಚನೆಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ಆ ಮೂಲಕ ಕೊರೋನವನ್ನು ನಿರ್ನಾಮ ಮಾಡಲು ಸಾಧ್ಯವಾಗುತ್ತದೆ ಎಂದು ಹೇಳಿದರು.

ಜಿಲ್ಲಾಧಿಕಾರಿ ಡಾ.ಕೆ.ರಾಜೇಂದ್ರ ಮಾತನಾಡಿ, ಜಿಲ್ಲೆಯಾದ್ಯಂತ 166 ಜನ ವಿದೇಶಿಯರಿದ್ದು, ಎಲ್ಲರನ್ನೂ ಹೋಮ್ ಕ್ವಾರಂಟೈನ್‍ನಲ್ಲಿಡಲಾಗಿದೆ. ಜಿಲ್ಲೆಯಿಂದ ಲ್ಯಾಬ್‍ಗೆ ಕಳಿಸಿದ್ದ 11 ಮಾದರಿಗಳು ನೆಗೆಟಿವ್ ಬಂದಿದೆ. ಮಂಗಳವಾರ ರಾತ್ರಿ ಒಂದು ಸ್ಯಾಂಪಲ್ ಕಳಿಸಿದ್ದು, ವರದಿ ಬರಬೇಕಿದೆ. ಬೇರೆ ಜಿಲ್ಲೆ ಹಾಗೂ ರಾಜ್ಯಗಳಿಂದ ಬಂದಂತಹ 1,700 ಜನರನ್ನು ಗೃಹಬಂಧನದಲ್ಲಿಟ್ಟು, ನಿಗಾ ವಹಿಸಲಾಗುತ್ತಿದೆ ಎಂದು ಮಾಹಿತಿ ನೀಡಿದರು.

ದಿಲ್ಲಿಯಲ್ಲಿ ನಡೆದ ಧಾರ್ಮಿಕ ಕಾರ್ಯಕ್ರಮದಲ್ಲಿ ಜಿಲ್ಲೆಯಿಂದ 21 ಜನ ಭಾಗವಹಿಸಿದ್ದರು ಎಂಬ ಮಾಹಿತಿಯಿದೆ. ಅವರಲ್ಲಿ ಒಬ್ಬರು ಈಗಾಗಲೇ ಜಿಲ್ಲೆಗೆ ಆಗಮಿಸಿದ್ದು, ಆರೋಗ್ಯವಾಗಿದ್ದಾರೆ. ಸ್ಯಾಂಪಲ್ ಟೆಸ್ಟ್ ಗೆ ಕಳಿಸಿದ್ದು, ಅವರನ್ನು ಐಸೋಲೇಷನ್‍ನಲ್ಲಿಡಲಾಗಿದೆ. ಅವರ ಜತೆಯಲ್ಲಿ ಆಗಮಿಸಿದ ಮೂರು ಜನರನ್ನು ಹೋಂ ಕ್ವಾರಂಟೈನ್‍ನಲ್ಲಿಡಲಾಗಿದೆ ಎಂದು ಅವರು ವಿವರಿಸಿದರು.

ಸರಕಾರದ ನಿರ್ದೇಶನದಂತೆ ಜಿಲ್ಲೆಯಲ್ಲಿ 14 ಫೀವರ್ ಕ್ಲಿನಿಕ್ ತೆರೆದಿದ್ದು, ತಾತ್ಕಾಲಿಕವಾಗಿ ಎಸ್‍ಐಸಿಗಳನ್ನು ತೆರೆಯಲು ಮೂರು ಹಾಸ್ಟೆಲ್‍ಗಳನ್ನು ಗುರುತಿಸಲಾಗಿದೆ. ಅಗತ್ಯವಿರುವ ವೆಂಟಿಲೇಟರ್‍ಗಳನ್ನು ಜಿಲ್ಲಾಸ್ಪತ್ರೆಯಲ್ಲಿ, ತಾಲೂಕು ಆಸ್ಪತ್ರೆಗಳಲ್ಲಿ ಹಾಗೂ ಖಾಸಗಿ ಆಸ್ಪತ್ರೆಗಳಲ್ಲಿ ಸಿದ್ಧಪಡಿಸಿಕೊಳ್ಳಲಾಗಿದೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಸಂಸದ ಪಿ.ಸಿ.ಗದ್ದಿಗೌಡರ, ಶಾಸಕರಾದ ವೀರಣ್ಣ ಚರಂತಿಮಠ ಹಾಗೂ ಮುರುಗೇಶ ನಿರಾಣಿ, ವಿಧಾನಪರಿಷತ್ ಸದಸ್ಯ ಹನಮಂತ ನಿರಾಣಿ, ಕಲ್ಯಾಣಾಧಿಕಾರಿ ಡಾ.ಎ.ಎನ್.ದೇಸಾಯಿ, ಪೊಲೀಸ್ ವರಿಷ್ಠಾಧಿಕಾರಿ ಲೋಕೇಶ ಜಲಸಾಗರ ಸೇರಿದಂತೆ ಹಲವರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News