ಹುಬ್ಬಳ್ಳಿ: ನಮಾಝ್ ತಡೆಯಲು ಬಂದ ಪೊಲೀಸರ ಮೇಲೆ ಕಲ್ಲು ತೂರಾಟ; ಲಘು ಲಾಠಿ ಪ್ರಹಾರ

Update: 2020-04-03 14:09 GMT

ಹುಬ್ಬಳ್ಳಿ, ಎ.3: ಕೊರೋನ ವೈರಸ್ ಹರಡುವುದನ್ನು ನಿಯಂತ್ರಿಸಲು ಲಾಕ್‍ಡೌನ್ ಇದ್ದ ಸಂದರ್ಭದಲ್ಲಿ ಸಾಮೂಹಿಕ ನಮಾಝ್ ಮಾಡಲು ಬಂದವರನ್ನು ಪೊಲೀಸರು ತಡೆದಿದ್ದು, ಈ ವೇಳೆ ಜನರು ಪೊಲೀಸ್ ಸಿಬ್ಬಂದಿ ಮೇಲೆ ಕಲ್ಲು ತೂರಿದ ಘಟನೆ ನಗರದ ಮಂಟೂರು ರಸ್ತೆ ಬಳಿಯ ಅರಳಿಕಟ್ಟಿ ಕಾಲನಿ ಬಳಿ ನಡೆದಿದೆ.

ಲಾಕ್‍ಡೌನ್ ಹಿನ್ನೆಲೆಯಲ್ಲಿ ಮಸೀದಿಯಲ್ಲಿ ಸಾಮೂಹಿಕ ಪ್ರಾರ್ಥನೆ ಮಾಡಬೇಡಿ ಎಂದು ಜನರಿಗೆ ಪೊಲೀಸರು ಹೇಳಿದ್ದಾರೆ. ಆದರೆ ಇದನ್ನು ವಿರೋಧಿಸಿದ ಜನರು ಪೊಲೀಸರ ಮೇಲೆಯೇ ಕಲ್ಲು ತೂರಾಟ ನಡೆಸಿದ್ದಾರೆ ಎನ್ನಲಾಗಿದ್ದು, ಈ ವೇಳೆ ಪೊಲೀಸರು ಲಘು ಲಾಠಿ ಪ್ರಹಾರ ನಡೆಸಿ ಜನರನ್ನು ಚದುರಿಸಿದ್ದಾರೆ ಎಂದು ತಿಳಿದುಬಂದಿದೆ.

ಘಟನೆಯಲ್ಲಿ ಗಾಯಗೊಂಡ ಪೊಲೀಸರನ್ನು ಚಿಕಿತ್ಸೆಗಾಗಿ ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಹುಬ್ಬಳ್ಳಿ ಶಹರ ಠಾಣೆ ಪೊಲೀಸರು ಹಲವರನ್ನು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದ್ದಾರೆ.

ಪೊಲೀಸರು ಹಾಗೂ ಸ್ಥಳದಲ್ಲಿ ಸೇರಿದ್ದ ಜನರ ನಡುವೆ ಮಾತಿನ ಚಕಮಕಿ ನಡೆಯುತ್ತಿದ್ದರೆ, ಮತ್ತೊಂದು ಕಡೆ ಪೊಲೀಸರ ಮೇಲೆ ಮಹಿಳೆಯರು, ಯುವಕರು ಕಲ್ಲು ತೂರಾಟ ನಡೆಸಿದ್ದಾರೆ ಎನ್ನಲಾಗಿದೆ. ಜನರನ್ನು ಚದುರಿಸಲು ಪೊಲೀಸರು ಲಘು ಲಾಠಿ ಪ್ರಹಾರ ನಡೆಸಿದ್ದು, ಕಲ್ಲು ತೂರಿದ ಹಲವರು ಸ್ಥಳದಿಂದ ಪರಾರಿಯಾಗಿದ್ದಾರೆ.

ಧರ್ಮ ಸಭೆಯಲ್ಲಿ ಪಾಲ್ಗೊಳ್ಳದಿದ್ದರೂ ಕ್ವಾರಂಟೈನ್‍ಗೆ ?: ನಿಝಾಮುದ್ದೀನ್ ಮರ್ಕಝ್ ನ ಸಭೆಯಲ್ಲಿ ಪಾಲ್ಗೊಳ್ಳದಿದ್ದರೂ ನಿಝಾಮುದ್ದೀನ್ ಮರ್ಕಝ್ ನವರು ಎಂಬ ಒಂದೇ ಕಾರಣಕ್ಕೆ ದಿಲ್ಲಿ ಮೂಲದ 12 ಮಂದಿಯನ್ನು ಹುಬ್ಬಳ್ಳಿ ನಗರದ ಹೊಟೇಲ್‍ವೊಂದರಲ್ಲಿ ಕ್ವಾರಂಟೈನ್‍ನಲ್ಲಿ ಇರಿಸಿದ್ದಾರೆ ಎಂದು ಹೇಳಲಾಗುತ್ತಿದೆ.

ಹೊಸದಿಲ್ಲಿಯ ನಿಝಾಮುದ್ದೀನ್ ಮರ್ಕಝ್ ನಲ್ಲಿ ವಾಸವಾಗಿದ್ದ 12 ಮಂದಿ ಧರ್ಮ ಪ್ರಚಾರಕ್ಕಾಗಿ ಮಾ.3ರಂದು ಹುಬ್ಬಳ್ಳಿಗೆ ಆಗಮಿಸಿದ್ದರು. ಇವರು ಸ್ವಾಗತ ಕಾಲನಿ ದರ್ಗಾದಲ್ಲಿ ವಾಸವಾಗಿದ್ದರು. ಆದರೆ, ಇವರು ನಿಝಾಮುದ್ದೀನ್‍ನಲ್ಲಿ ನಡೆದ ಧರ್ಮಸಭೆಯಲ್ಲಿ ಪಾಲ್ಗೊಂಡಿರಲಿಲ್ಲ. ಅಲ್ಲದೆ, ಇವರಿಗೆ ಕೆಮ್ಮು, ನೆಗಡಿ, ಜ್ವರ ಯಾವುದೂ ಇರಲಿಲ್ಲ. ಆದರೂ ಪೊಲೀಸರು ಅವರನ್ನು ಕಿಮ್ಸ್ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಆರೋಗ್ಯ ಪರೀಕ್ಷೆ ಮಾಡಿಸಿದ್ದಾರೆ. ಆದರೆ ಸ್ಥಳೀಯರು ವಿರೋಧ ವ್ಯಕ್ತಪಡಿಸಿದ್ದರಿಂದ ಆರೋಗ್ಯ ಇಲಾಖೆಯೇ ಸಜ್ಜುಗೊಳಿಸಿರುವ ಹೊಟೇಲ್‍ವೊಂದರಲ್ಲಿ ಇವರನ್ನು ಕ್ವಾರಂಟೈನ್‍ನಲ್ಲಿ ಇಡಲಾಗಿದೆ ಎಂದು ತಿಳಿದುಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News