ರಾಜ್ಯದಲ್ಲಿ ಶುಕ್ರವಾರ ನಾಲ್ಕು ಕೊರೋನ ಪ್ರಕರಣಗಳು ದೃಢ: 128ಕ್ಕೆ ಏರಿದ ಸೋಂಕಿತರ ಸಂಖ್ಯೆ
ಬೆಂಗಳೂರು, ಎ.3: ರಾಜ್ಯದಲ್ಲಿ ಶುಕ್ರವಾರ ಕೊರೋನ ಸೋಂಕಿತರಲ್ಲಿ ನಾಲ್ಕು ಪಾಸಿಟಿವ್ ಬಂದಿದ್ದು, ಒಟ್ಟಾರೆ ಸೋಂಕಿತರ ಸಂಖ್ಯೆ 128ಕ್ಕೆ ಏರಿಕೆಯಾಗಿದೆ. ಈ ಪೈಕಿ ಮೂರು ಜನ ಮರಣ ಹೊಂದಿದ್ದು, 11 ಜನರು ಗುಣಮುಖರಾಗಿ ಆಸ್ಪತ್ರೆಗಳಿಂದ ಬಿಡುಗಡೆಯಾಗಿದ್ದಾರೆ.
ಸೋಂಕಿತರ ವಿವರ:
ರೋಗಿ ನಂ. 125: ಬಾಗಲಕೋಟೆ ಜಿಲ್ಲೆಯ ನಿವಾಸಿಯಾಗಿರುವ 75 ವರ್ಷ ವಯಸ್ಸಿನವರಾಗಿದ್ದು, ಇವರ ವಿವರವಾದ ತನಿಖೆಯು ಪ್ರಗತಿಯಲ್ಲಿದೆ. ಇವರನ್ನು ಬಾಗಲಕೋಟೆಯ ನಿಗದಿತ ಆಸ್ಪತ್ರೆಯಲ್ಲಿ ಪ್ರತ್ಯೇಕಗೊಳಿಸಲಾಗಿದೆ.
ರೋಗಿ 126: ಬೆಳಗಾವಿ ಜಿಲ್ಲೆಯವರಾದ 70 ವರ್ಷದ ಪುರುಷರಾಗಿದ್ದು, ದಿಲ್ಲಿಯಲ್ಲಿ ನಡೆದ ಧಾರ್ಮಿಕ ಸಮಾರಂಭದಲ್ಲಿ ಪಾಲ್ಗೊಂಡಿದ್ದರು.
ರೋಗಿ 127: ಬೆಳಗಾವಿ ಜಿಲ್ಲೆಯವರಾದ 26 ವರ್ಷದ ಪುರುಷರಾಗಿದ್ದು, ದಿಲ್ಲಿಯಲ್ಲಿ ನಡೆದ ಧಾರ್ಮಿಕ ಸಮಾರಂಭದಲ್ಲಿ ಪಾಲ್ಗೊಂಡಿದ್ದರು.
ರೋಗಿ 128: ಬೆಳಗಾವಿ ಜಿಲ್ಲೆಯವರಾದ 20 ವರ್ಷದ ಯುವಕನಾಗಿದ್ದು, ದಿಲ್ಲಿಯಲ್ಲಿ ನಡೆದ ಧಾರ್ಮಿಕ ಸಮಾರಂಭದಲ್ಲಿ ಪಾಲ್ಗೊಂಡಿದ್ದ. ಇವರೆಲ್ಲರನ್ನೂ ಬೆಳಗಾವಿಯ ನಿಗದಿತ ಆಸ್ಪತ್ರೆಯಲ್ಲಿ ಪ್ರತ್ಯೇಕಗೊಳಿಸಲಾಗಿದ್ದು, ಸೂಕ್ತ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಆರೋಗ್ಯ ಇಲಾಖೆಯು ಮಾಹಿತಿ ನೀಡಿದೆ.
ಕೋವಿಡ್ 19 ತುರ್ತು ಪರಿಸ್ಥಿತಿಯ ಹಿನ್ನೆಲೆಯಲ್ಲಿ, ಮಾ.31ರಂದು ನಿವೃತ್ತಿಯಾಗಿದ್ದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ವೈದ್ಯಕೀಯ ಮತ್ತು ಅರೆ ವೈದ್ಯಕೀಯ, ಪೂರಕವಾಗಿರುವ ಕ್ಲಿನಿಕಲ್ ಮತ್ತು ನಾನ್ ಕ್ಲಿನಿಕಲ್ ಸಿಬ್ಬಂದಿಗಳ ಸೇವೆಯನ್ನು ಮುಂದಿನ ಮೂರು ತಿಂಗಳ ಅವಧಿವರೆಗೂ ವಿಸ್ತರಿಸಲಾಗಿದೆ. ಈ ಎಪ್ರಿಲ್ ತಿಂಗಳಲ್ಲಿ ನಿವೃತ್ತಿ ಹೊಂದುವವರ ಸೇವೆಯನ್ನು 2 ತಿಂಗಳ ಅವಧಿಗೆ ವಿಸ್ತರಿಸಲಾಗಿದೆ.
ಲಾಕ್‍ಡೌನ್ ಹಿನ್ನೆಲೆಯಲ್ಲಿ ಅಗತ್ಯ ಸರಕುಗಳ ಸಾಗಾಟ ಹಾಗೂ ಅಗತ್ಯ ಸೇವೆಗಳನ್ನು ನೀಡುವ ನಿಟ್ಟಿನಲ್ಲಿ ಸಂಸ್ಥೆಗಳ ವ್ಯಕ್ತಿ ಅಥವಾ ವಾಹನಗಳು ರಸ್ತೆಯಲ್ಲಿ ಸಂಚರಿಸಲು ಪೊಲೀಸ್ ಕ್ಲಿಯರೆನ್ಸ್ ಪಾಸ್ ಪಡೆಯಬೇಕಾಗುತ್ತದೆ. ಈ ಪಾಸ್‍ಗಳನ್ನು ಆನ್‍ಲೈನ್ ಮೂಲಕವೂ ಪಡೆಯಬಹುದಾಗಿದೆ.
ಸೂಚನೆಗಳು: ದಿಲ್ಲಿಯ ನಿಝಾಮುದ್ದೀನ್ ಮರ್ಕಝ್ ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಎಲ್ಲರೂ ಕಡ್ಡಾಯವಾಗಿ ಆರೋಗ್ಯ ಇಲಾಖೆಯ ಸಹಾಯವಾಣಿ ಸಂಖ್ಯೆಯನ್ನು ಸಂಪರ್ಕಿಸಲು ಸೂಚಿಸಲಾಗಿದೆ.