ಲಾಕ್​ಡೌನ್: ಬೀದಿ ನಾಯಿ, ಜಾನುವಾರುಗಳಿಗೆ ಆಹಾರದ ವ್ಯವಸ್ಥೆ ಮಾಡಿದ ಕಲಬುರಗಿ ಮಹಾನಗರ ಪಾಲಿಕೆ

Update: 2020-04-03 16:21 GMT
ಸಾಂದರ್ಭಿಕ ಚಿತ್ರ

ಕಲಬುರಗಿ, ಎ.3: ಕೊರೋನಾ ವೈರಸ್ (ಕೋವಿಡ್-19) ಹರಡದಂತೆ ಮುಂಜಾಗೃತಾ ಕ್ರಮವಾಗಿ ದೇಶದಾದ್ಯಂತ 2020ರ ಎಪ್ರಿಲ್ 14ರವರೆಗೆ ಲಾಕ್​ಡೌನ್ ಘೋಷಿಸಲಾಗಿದ್ದು, ಈ ಸಂದರ್ಭದಲ್ಲಿ ಕಲಬುರಗಿ ಮಹಾನಗರ ಪಾಲಿಕೆಯಿಂದ ನಗರದ ಬೀದಿಗಳಲ್ಲಿರುವ ಪ್ರಾಣಿಗಳಿಗೆ ಆಹಾರ ಮತ್ತು ನೀರಿನ ತೊಂದರೆಯಾಗದಂತೆ ನೋಡಿಕೊಳ್ಳಲು ಪ್ರಥಮ ಹಂತದಲ್ಲಿ ನಗರದ ಹತ್ತು ಸ್ಥಳಗಳನ್ನು ಗುರುತಿಸಿ ಸ್ವಚ್ಛ ಕುಡಿಯುವ ನೀರು ಮತ್ತು ಪೌಷ್ಟಿಕ ಆಹಾರದ ವ್ಯವಸ್ಥೆ ಮಾಡಲಾಗಿದೆ ಎಂದು ಕಲಬುರಗಿ ಮಹಾನಗರ ಪಾಲಿಕೆ ಆಯುಕ್ತರು ತಿಳಿಸಿದ್ದಾರೆ. 

ಕಲಬುರಗಿ ನಗರದಲ್ಲಿರುವ ಖಾನಾವಳಿ, ರೆಸ್ಟೋರೆಂಟ್, ಕಲ್ಯಾಣ ಮಂಟಪ, ಇನ್ನಿತರೆ ಸ್ಥಳಗಳಿಂದ ಆಹಾರ ಹುಡುಕಿ ತಿನ್ನುವ ಪ್ರಾಣಿಗಳಿಗೆ ಹೋಟೆಲ್-ರೆಸ್ಟೋರೆಂಟ್ ಬಂದ್ ನಿಂದ ಆಹಾರದ ಸಮಸ್ಯೆಯಾಗುತ್ತಿವೆ. ಹೀಗಾಗಿ, ಎಪ್ರಿಲ್ 3 ರಿಂದ ಬೀದಿ ನಾಯಿಗಳಿಗೆ ಅನ್ನದ ಜೊತೆಯಲ್ಲಿ ಪೆಡಿಗ್ರೀ ಮತ್ತು ಡ್ರೂಲ್ಸ್ ನಾಯಿಗಳ ಆಹಾರವನ್ನು ನೀಡಲಾಗುತ್ತಿದೆ. ಪ್ರಪ್ರಥಮ ಬಾರಿಗೆ ಕರ್ನಾಟಕ ರಾಜ್ಯದಲ್ಲಿ ಬೀದಿ ನಾಯಿ ಮತ್ತು ಬೆಕ್ಕುಗಳಿಗೆ ಇಂತಹ ಪೌಷ್ಟಿಕ ಆಹಾರವನ್ನು ನೀಡಲಾಗುತ್ತಿದೆ.

ಬೀದಿ ಆಕಳು, ಎತ್ತು, ಎಮ್ಮೆ ಮತ್ತು ಕೋಣಗಳಿಗೆ ಹಸಿ ಮೇವನ್ನು ಸಣ್ಣ ಗಾತ್ರದಲ್ಲಿ ಕಟಾವಣೆ ಮಾಡಿ ಹತ್ತು ಆಯ್ಕೆ ಮಾಡಿದ ಜಾಗದಲ್ಲಿ ಇಡಲಾಗಿದೆ. ಈ ಮೇವಿನ ಮೇಲೆ ಬೆಲ್ಲದ ನೀರನ್ನು ಕೂಡ ಸಿಂಪಡಿಸಲಾಗಿದೆ.

ಪ್ರಾಣಿ ಪ್ರೇಮಿಗಳಾದ ಅಲ್ಲಂ ಪ್ರಭು ಖುಬಾ ಅವರು ಮಹಾನಗರ ಪಾಲಿಕೆಯಿಂದ ಬೀದಿ ಪ್ರಾಣಿಗಳಿಗೆ ನೀಡುತ್ತಿರುವ ಆಹಾರ ಕಾರ್ಯಕ್ರಮದಲ್ಲಿ ಭಾಗವಹಿಸಿ, 3,000 ಕೆ.ಜಿ. ಅಕ್ಕಿಯನ್ನು ದಾನ ಮಾಡಿದ್ದಾರೆ. ನಾಯಿಗಳಿಗೆ ಆಹಾರದ ಕೊರತೆಯನ್ನು ಮನಗಂಡು ಮೆಹಬೂಬ್ ಸಾಬ ಹಾಗೂ ಅವಿನಾಶ್ ಪೆಟ್ ಕೇರ್ ಸಂಸ್ಥೆಯವರು ಪೆಡಿಗ್ರೀ ಮತ್ತು ಡ್ರೂಲ್ಸ್ ಆಹಾರವನ್ನು ದಾನ ಮಾಡಿದ್ದಾರೆ. 

ಕಲಬುರಗಿ ಆರ್ಯನ್ ಗೋಶಾಲೆ ಟ್ರಸ್ಟ್ (ರಿ)ನ ವಿರೇಶ ಎಸ್.ಮಠ ಅವರು ಆಕಳು ಮತ್ತು ಎಮ್ಮೆಗಳಿಗೆ ಪ್ರತಿದಿನ 500 ಕೆ.ಜಿ. ಹಸಿ ಮೇವು ದಾನ ಮಾಡುತ್ತಿದ್ದಾರೆ. ಬೀದಿಯಲ್ಲಿ ಆಕಳು ಮತ್ತು ಇತರೆ ಜಾನುವಾರುಗಳ ಸಂಖ್ಯೆ ಹೆಚ್ಚಾದಲ್ಲಿ ಆಸಕ್ತಿಯುಳ್ಳ ಪ್ರಾಣಿ ಕಲ್ಯಾಣ ಸಂಘಗಳಿಗೆ ಹಾಗೂ ಗೋಶಾಲೆಗಳಿಗೆ ಸಂಪರ್ಕಿಸಿ ಪ್ರಾಣಿಗಳನ್ನು ಗೋ-ಶಾಲೆಗೆ ಸೇರಿಸಲಾಗುವ ಪ್ರಯತ್ನ ಕೂಡ ಮಾಡಲಾಗುತ್ತಿದೆ ಎಂದು ಆಯುಕ್ತರು ತಿಳಿಸಿದ್ದಾರೆ

ಕಲಬುರಗಿ ನಗರ ಪ್ರದೇಶದಲ್ಲಿರುವ ಸುಮಾರು 10,000 ಬೀದಿ ನಾಯಿಗಳು, ಬೀದಿ ಆಕಳು ಮತ್ತು ಎಮ್ಮೆಗಳಲ್ಲಿ ಯಾವುದೇ ತರಹದ ರೋಗವನ್ನು ಬಾರದೇ ನೋಡಿಕೊಳ್ಳಲಾಗುತ್ತಿದೆ. ಯಾವುದೇ ರೋಗದ ಲಕ್ಷಣ ಕಂಡುಬಂದಲ್ಲಿ ಕಲಬುರಗಿ ಪಶು ಪಾಲನಾ ಇಲಾಖೆಗೆ ಮಾಹಿತಿ ನೀಡಿ ಪ್ರಾಣಿಗಳಿಗೆ ಸೂಕ್ತ ಚಿಕಿತ್ಸೆ ಸೌಲಭ್ಯ ನೀಡಲು ಈಗಾಗಲೇ ಕಾರ್ಯಕ್ರಮ ರೂಪಿಸಲಾಗಿದೆ.

ಪಶು-ಪಕ್ಷಿ ಪ್ರೇಮಿಗಳು ಬೀದಿ ಪ್ರಾಣಿಗಳಿಗಾಗಿ ಆಹಾರ ಮತ್ತು ನೀರು ಸ್ವಇಚ್ಚೆಯಿಂದ ಸರಬರಾಜು ಮಾಡಲು ಆಸಕ್ತಿಯಿರುವ ವ್ಯಕ್ತಿಗಳು ಮಹಾನಗರ ಪಾಲಿಕೆ ಕಚೇರಿಯ ದೂರವಾಣಿ ಸಂಖ್ಯೆ 08472-278675, 18004251364ಗಳಿಗೆ ಸಂಪರ್ಕಿಸಲು ಕೋರಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News