ಲಾಕ್​ಡೌನ್ ನಡುವೆ ರಾಜ್ಯದಲ್ಲಿ ನೀರಿನ ಅಭಾವ

Update: 2020-04-03 17:29 GMT
ಸಾಂದರ್ಭಿಕ ಚಿತ್ರ

ಬೆಂಗಳೂರು, ಎ.3: ರಾಜ್ಯದಲ್ಲಿ ಈಗಾಗಲೇ ಕೊರೋನ ಮಹಾಮಾರಿ ಹೆಚ್ಚು ಆತಂಕ ಮೂಡಿಸಿದ್ದು, ಜನರನ್ನು ಮನೆಯಿಂದ ಹೊರಗೆ ಕಾಲಿಡದಂತೆ ಮಾಡಿದೆ. ಅದರ ನಡುವೆಯೇ ಇದೀಗ ಎಲ್ಲೆಡೆ ಭೀಕರ ನೀರಿನ ಅಭಾವ ಎದುರಾಗುವ ಸಾಧ್ಯತೆಯಿದ್ದು, ಜನ-ಜಾನುವಾರುಗಳಿಗೆ ಕುಡಿಯುವ ನೀರಿನ ಸಮಸ್ಯೆಯಾಗುತ್ತಿರುವುದು ವರದಿಯಾಗುತ್ತಿದೆ.

ಕಳೆದ ಸಾಲಿಗೆ ಹೋಲಿಸಿಕೊಂಡರೆ ಈ ವರ್ಷದ ಬೇಸಿಗೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾಗಿಲ್ಲವಾದರೂ, ಕೆಲವು ಜಿಲ್ಲೆಗಳಲ್ಲಿ ಪರಿಸ್ಥಿತಿ ನಿಧಾನವಾಗಿ ಬಿಗಡಾಯಿಸುತ್ತಿದೆ. ಪರಿಸ್ಥಿತಿ ಕೈ ಮೀರುವ ಮೊದಲೇ ಜನಪ್ರತಿನಿಧಿಗಳು ಸಮಸ್ಯೆ ಬಗೆಹರಿಸುವ ಸವಾಲನ್ನು ಕೈಗೆತ್ತಿಕೊಳ್ಳಬೇಕಾಗಿದೆ.

ಪ್ರಸಕ್ತ ಸರಕಾರದ ಬಳಿಯಿರುವ ಮಾಹಿತಿಗೂ, ಶಾಸಕರು ಹಾಗೂ ಸಚಿವರ ಮಾಹಿತಿಗೂ ಸಾಕಷ್ಟು ವ್ಯತ್ಯಾಸವಿದೆ. ವಿಧಾನಮಂಡಲ ಅಧಿವೇಶನ ಸಂದರ್ಭದಲ್ಲಿ ಹಲವು ಶಾಸಕರು ತಮ್ಮ ಕ್ಷೇತ್ರ ವ್ಯಾಪ್ತಿಯಲ್ಲಿ ಕುಡಿಯುವ ನೀರಿನ ಸಮಸ್ಯೆಯ ಕುರಿತು ಚರ್ಚಿಸಲು, ಸಿಎಂ ಹಾಗೂ ಗ್ರಾಮೀಣಾಭಿವೃದ್ಧಿ ಸಚಿವರೊಂದಿಗೆ ಚರ್ಚಿಸಿ ಹಣ ಬಿಡುಗಡೆಗೆ ಒತ್ತಾಯಿಸಿದ್ದರು. ಅಲ್ಲದೆ, ಇತ್ತೀಚಿನ ಸಚಿವ ಸಂಪುಟ ಸಭೆಯ ಬಳಿಕ ಚಿಕ್ಕಬಳ್ಳಾಪುರ ಕ್ಷೇತ್ರದ ನೀರಿನ ತೀವ್ರ ಸಮಸ್ಯೆ ಕುರಿತು ಸಚಿವ ಸುಧಾಕರ್ ಅಧಿಕಾರಿಗಳ ಗಮನಕ್ಕೆ ತಂದಿದ್ದಾರೆ. ಜತೆಗೆ ಕಳವಳ ವ್ಯಕ್ತಪಡಿಸಿ ತುರ್ತಾಗಿ ನೆರವಾಗಲೇಬೇಕು ಎಂದು ತಿಳಿಸಿದ್ದಾರೆ.

ಚರ್ಚೆ: ನಿರಂತರ ಬರದ ಬಗ್ಗೆ ವಿಧಾನಸಭೆಯಲ್ಲಿ ಚರ್ಚೆ ನಡೆಯುತ್ತಿದೆ. ಅದಕ್ಕೆ ಪೂರಕವಾಗಿ ಕೃಷ್ಣಭೈರೇಗೌಡ ಗ್ರಾಮೀಣಾಭಿವೃದ್ಧಿ ಸಚಿವರಾಗಿದ್ದ ವೇಳೆ 'ಜಲಧಾರೆ' ಯೋಜನೆ ರೂಪಿಸಿ ಸಮಗ್ರ ಯೋಜನೆ ಕುರಿತು ಪ್ರಸ್ತಾಪಿಸಿದ್ದರು. ಸರಕಾರ ಬದಲಾದಂತೆ ಯೋಜನೆ ಹಳ್ಳ ಹಿಡಿಯಿತು. ಬಹುಗ್ರಾಮ ಕುಡಿಯುವ ನೀರಿನ ಯೋಜನೆಗಳು ಅತಿವೃಷ್ಟಿ ಸಂದರ್ಭದಲ್ಲಿ ಹಾನಿಯಾಗಿದ್ದು, ಅದರ ದುರಸ್ತಿಗೆ ಸರಕಾರ ಒಂದಷ್ಟು ಸಮಯ ತೆಗೆದುಕೊಂಡಿತು. ಬಳಿಕ ನೆರೆ-ಅತಿವೃಷ್ಟಿ ಕಾರಣಕ್ಕೆ ಕೆಲವು ಕುಡಿಯುವ ನೀರಿನ ಯೋಜನೆಗಳು ನಿರೀಕ್ಷಿತ ವೇಗದಲ್ಲಿ ಆರಂಭವಾಗಿಲ್ಲ. ಒಟ್ಟಾರೆ ಶಾಶ್ವತ ವ್ಯವಸ್ಥೆಯಲ್ಲಿ ನೀರು ಕೊಡುವ ಪರಿಸ್ಥಿತಿ ಕಳೆದ ವರ್ಷಕ್ಕಿಂತ ಭಿನ್ನವಾಗಿಲ್ಲ.

ಅಂತರ್ಜಲ ಕುಸಿತದ ಕಾರಣಕ್ಕೆ ಕೆಲ ಜಿಲ್ಲೆಗಳಲ್ಲಿ ಬೋರ್ವೆಲ್ ಕೊರೆಯುವುದನ್ನು ಜಿಲ್ಲಾಧಿಕಾರಿ ನಿಷೇಧಿಸಿದ್ದರು. ಇದೂ ಸರಕಾರದ ಗಮನಕ್ಕೆ ಬಂದಿದ್ದು, ಕುಡಿಯುವ ನೀರಿನ ಸಮಸ್ಯೆ ಆಗದಂತೆ ಬೋರ್ವೆಲ್ ಕೊರೆಸಲು ಅವಕಾಶ ನೀಡಬೇಕೆಂದು ಸೂಚಿಸುವುದಾಗಿ ಕಂದಾಯ ಸಚಿವ ಹೇಳಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News