ಕ್ವಾರಂಟೈನ್‍ನಲ್ಲಿ ಇರುವವರು ನಮ್ಮ ಹಾಗೆ ಮನುಷ್ಯರು: ಮೈಸೂರು ಜಿಲ್ಲಾಧಿಕಾರಿ ಅಭಿರಾಮ್ ಜಿ.ಶಂಕರ್

Update: 2020-04-03 17:41 GMT

ಮೈಸೂರು,ಎ.3: ಕ್ವಾರಂಟೈನ್‍ನಲ್ಲಿ ಇರುವವರು ನಮ್ಮ ಹಾಗೆ ಮನುಷ್ಯರು, ಅವರು ಉದ್ದೇಶಪೂರ್ವಕವಾಗಿ ಕ್ವಾರಂಟೈನ್‍ನಲ್ಲಿ ಇಲ್ಲ. ಇದನ್ನು ಜನರು ಅರ್ಥಮಾಡಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಅಭಿರಾಮ್ ಜಿ.ಶಂಕರ್ ತಿಳಿಸಿದರು.

ನಗರದ ಜೆ.ಕೆ.ಮೈದಾನದಲ್ಲಿ ಶುಕ್ರವಾರ ಮನೆ ಮನೆಗೆ ಉಚಿತ ಪಡಿತರ ವಿತರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು. ನಂಜನಗೂಡಿನ ಜ್ಯುಬಿಲಿಯಂಟ್ ಕಂಪನಿಯ ಕೊರೋನ ಪಾಸಿಟಿವ್ ಸಂಪರ್ಕ ಹೊಂದಿದ್ದ ವ್ಯಕ್ತಿಗಳನ್ನು ನಗರದ ದೇವರಾಜ ಮೊಹಲ್ಲಾದ ಲಾಡ್ಜ್ ಒಂದರಲ್ಲಿ ಕ್ವಾರಂಟೈನ್ ಮಾಡಲಾಗಿತ್ತು. ಇದನ್ನು ವಿರೋಧಿಸಿ ಅಲ್ಲಿನ ನಾಗರೀಕರು ಪ್ರತಿಭಟನೆ ನಡೆಸಿದ್ದರು. 

ಇದರಿಂದ ಬೇಸರಗೊಂಡ ಜಿಲ್ಲಾಧಿಕಾರಿಗಳು 'ನಾವೇನು ಪಿಕ್‍ನಿಕ್‍ಗೆ ಬಂದಿಲ್ಲ, ನಿಮ್ಮೆಲ್ಲರ ಜೀವ ಉಳಿಸಲು ಹೊರಗೆ ಓಡಾಡುತ್ತಿದ್ದೇವೆ. ಕ್ವಾರಂಟೈನ್‍ನಲ್ಲಿ ಇರುವವರು ನಮ್ಮ ಹಾಗೆ ಮನುಷ್ಯರು, ಅವರು ಬದುಕಬೇಕು ಎಂದು ಬಂದಿದ್ದಾರೆ. ದಯವಿಟ್ಟು ಅರ್ಥಮಾಡಿಕೊಳ್ಳಿ, ಜಿಲ್ಲಾಡಳಿತದೊಂದಿಗೆ ಸಹಕರಿಸಿ. ಹೀಗೆ ವಿರೋಧ ಮಾಡುವುದು ಸರಿಯಲ್ಲ ಎಂದು ಹೇಳಿದರು.

ಜ್ಯುಬಿಲಿಯಂಟ್ ಕಂಪನಿ ನೌಕರರು ಮತ್ತು ಅವರಿಗೆ ಸಂಬಂಧಿಸಿದಂತೆ 21 ಜನರಿಗೆ ಕೊರೋನ ಪಾಸಿಟಿವ್ ಬಂದಿದೆ. ಅವರೆಲ್ಲರಿಗೂ ನೂತನ ಕೋವಿಡ್-19 ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಅವರೆಲ್ಲೂ ಆರೋಗ್ಯವಾಗಿದ್ದಾರೆ ಎಂದು ಹೇಳಿದರು.

ಕೊರೋನ ಪಾಸಿಟಿವ್ ಬಂದಿರುವ 19 ಜನರ ಪ್ರೈಮರಿ ಸಂಪರ್ಕ ಹೊಂದಿರುವ 223 ಜನರನ್ನು ಕ್ವಾರಂಟೈನ್ ಮಾಡಲಾಗಿದೆ. ಇವರಿಗೆ 12 ದಿನಗಳು ಕಳೆದ ನಂತರ ಇವರ ರಕ್ತಪರೀಕ್ಷೆಯನ್ನು ಮಾಡಬೇಕಿದೆ. ಎಲ್ಲರ ವರದಿ ಬಂದ ನಂತರ ಮಾಹಿತಿ ನೀಡುತ್ತೇವೆ ಎಂದು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News