ಲಾಕ್‍ಡೌನ್ ತಂದಿಟ್ಟ ಸಂಕಷ್ಟ: ಉಪವಾಸ ಬೀಳುವಂತಾದ ರಾಜ್ಯದ 6 ಲಕ್ಷ ದೋಬಿಗಳು

Update: 2020-04-03 18:14 GMT
photo: Reuters

ಬೆಂಗಳೂರು, ಎ.3: ಕೊರೋನ ವೈರಸ್ ಸೋಂಕಿನಿಂದಾಗಿರುವ ಲಾಕ್‍ಡೌನ್‍ನಿಂದ ರಾಜ್ಯದಲ್ಲಿನ ಬಡಕೂಲಿ ಕಾರ್ಮಿಕರು ಸೇರಿದಂತೆ ಹಲವು ಜನರಿಗೆ ಸಂಕಷ್ಟ ತಂದಿಟ್ಟಿದ್ದು, ಕುಲಕಸುಬನ್ನೆ ನಂಬಿಕೊಂಡಿರುವ ಆರು ಲಕ್ಷಕ್ಕೂ ಅಧಿಕ ದೋಬಿಗಳು (ಬಟ್ಟೆ ತೊಳೆಯುವವರು) ಅಕ್ಷರಶಃ 'ಹೊಟ್ಟೆಗೆ ತಣ್ಣೀರು ಬಟ್ಟೆ'ಯನ್ನು ಹಾಕಿಕೊಳ್ಳಬೇಕಾದ ದುಸ್ಥಿತಿಗೆ ಸಿಲುಕಿದ್ದಾರೆ.

ರಾಜ್ಯದಲ್ಲಿ 10 ಲಕ್ಷಕ್ಕೂ ಅಧಿಕ ಮಡಿವಾಳ ಸಮುದಾಯದವರಿದ್ದು, ಆ ಪೈಕಿ ದೋಬಿ ಘಾಟ್‍ಗಳಲ್ಲಿ ಬಟ್ಟೆ ತೊಳೆಯುವವರು, ರಸ್ತೆ ಬದಿ ತಳ್ಳುಗಾಡಿಗಳಲ್ಲಿ ಇಸ್ತ್ರಿ ಮಾಡುವವರು ಸೇರಿದಂತೆ ವೃತಿಯನ್ನೆ ನಂಬಿಕೊಂಡಿದ್ದ ಒಟ್ಟು 6 ಲಕ್ಷ ಮಂದಿ ಹೊಟ್ಟೆಗೆ ಅನ್ನವಿಲ್ಲದೆ ಉಪವಾಸ ಬೀಳುವಂತೆ ಆಗಿದೆ.

ಬೆಂಗಳೂರು ನಗರದಲ್ಲೆ ಮಲ್ಲೇಶ್ವರಂ, ಹೆಬ್ಬಾಳ, ಅಟ್ಟೂರು ಲೇಔಟ್ ಸೇರಿದಂತೆ ಮೂವತ್ತಕ್ಕೂ ಹೆಚ್ಚು ದೋಬಿ ಘಾಟ್‍ಗಳಿದ್ದು, ಎಪ್ಪತ್ತೈದು ಸಾವಿರಕ್ಕೂ ಅಧಿಕ ಮಂದಿ ಪ್ರತಿನಿತ್ಯದ ಊಟಕ್ಕೂ ತಮ್ಮ ದೋಬಿ ವೃತ್ತಿಯನ್ನು ಆಶ್ರಯಿಸಿದ್ದಾರೆ. ಲಾಕ್‍ಡೌನ್ ಹಿನ್ನೆಲೆಯಲ್ಲಿ ದೋಬಿಗಳು ಮತ್ತವರ ಕತೆಯೂ ಒಂದು ಹೊತ್ತಿನ ಊಟಕ್ಕೂ ಪರಿತಪಿಸಬೇಕಾಗುವಂತಾಗಿದೆ ಎಂಬುದು ದೋಬಿಗಳ ಅಳಲಾಗಿದೆ.

ಈ ನಡುವೆ ಕೊರೋನ ವೈರಸ್ ಸೋಂಕು ಪೀಡಿತ ಬಟ್ಟೆಗಳನ್ನು ಒಗೆಯುವ ಇದೇ ದೋಬಿಗಳಿಗೆ ಯಾವುದೇ ಸುರಕ್ಷತಾ ಸಾಧನಗಳನ್ನು ಸರಕಾರ ಪೂರೈಸದ ಹಿನ್ನೆಲೆಯಲ್ಲಿ ಕೆಲ ದೋಬಿಗಳಲ್ಲಿ ಕೊರೋನ ಸೋಂಕಿನ ಆತಂಕ ಸೃಷ್ಟಿಸಿದ್ದು, ಸೂಕ್ತ ಮೂಲ ಸೌಕರ್ಯಗಳನ್ನು ಕಲ್ಪಿಸಬೇಕು. ಸಂಕಷ್ಟಕ್ಕೆ ಸಿಲುಕಿರುವ ದೋಬಿಗಳಿಗೆ ಸರಕಾರ ಸೂಕ್ತ ಪರಿಹಾರ ನೀಡಬೇಕು ಎಂಬ ಆಗ್ರಹ ಕೇಳಿಬಂದಿದೆ.

ನಿರ್ಲಕ್ಷ್ಯ: 'ರಾಜ್ಯದಲ್ಲಿ ಈ ಹಿಂದೆ ಇದ್ದ ಸಿದ್ದರಾಮಯ್ಯನವರ ಸರಕಾರ ನಮ್ಮ(ದೋಬಿಗಳ) ಸಂಕಷ್ಟಕ್ಕೆ ಕಿವಿಗೂಡುತ್ತಿತ್ತು. ಆದರೆ, ಮುಖ್ಯಮಂತ್ರಿ ಯಡಿಯೂರಪ್ಪ ನೇತೃತ್ವದ ಸರಕಾರಕ್ಕೆ ನಮ್ಮ ಸಮಸ್ಯೆಗಳನ್ನು ಅಲಿಸುವ ಇರಾದೆಯೂ ಇಲ್ಲವಾಗಿದೆ. ಅಲ್ಲದೆ, ನಮ್ಮ ಪರವಾಗಿ ಧ್ವನಿ ಎತ್ತಲು ಒಬ್ಬನೇ ಒಬ್ಬ ಸಂಸದ, ಶಾಸಕ ಅಥವಾ ಕನಿಷ್ಠ ಪಕ್ಷ ಪಾಲಿಕೆ ಸದಸ್ಯನೂ ಇಲ್ಲ. ಹೀಗಾಗಿ ನಮ್ಮ ಗೋಳನ್ನು ಯಾರು ಕೇಳುತ್ತಿಲ್ಲ' ಎಂದು ರಾಜ್ಯ ಮಡಿವಾಳರ ಸಂಘದ ಅಧ್ಯಕ್ಷ ನಂಜಪ್ಪ ಆಕ್ರೋಶ ಹೊರಹಾಕಿದ್ದಾರೆ.

'ರಾಜ್ಯ ಸರಕಾರಕ್ಕೆ ಮಡಿವಾಳ ಸಮುದಾಯದ ಬಗ್ಗೆ ಕನಿಷ್ಟ ಕಳಕಳಿ ಇದ್ದರೆ ಕೂಡಲೇ ಅಸಂಘಟಿತ ವಲಯದಲ್ಲಿ ಗುರುತಿಸಿಕೊಂಡಿರುವ ದೋಬಿಗಳಿಗೆ ಕಾರ್ಮಿಕರಿಗೆ ನೀಡುವಂತೆ ಸೂಕ್ತ ಪರಿಹಾರ ನೀಡಬೇಕು. ಅಗತ್ಯ ಪಡಿತರ, ನಮ್ಮ ಕತ್ತೆಗಳಿಗೆ ಮೇವು ನೀಡಬೇಕು. ಕೊರೋನ ವೈರಸ್ ಸೋಂಕು ಭೀತಿ ಹಿನ್ನೆಲೆಯಲ್ಲಿ ಬಟ್ಟೆ ತೊಳೆಯುವ ದೋಬಿಗಳಿಗೆ ಅಗತ್ಯ ಮೂಲ ಸೌಲಭ್ಯಗಳನ್ನು ಒದಗಿಸಬೇಕು' ಎಂದು ನಂಜಪ್ಪ, ಮುಖ್ಯಮಂತ್ರಿ ಯಡಿಯೂರಪ್ಪನವರಿಗೆ ಮನವಿ ಮಾಡಿದ್ದಾರೆ.

ದೋಬಿ ವೃತ್ತಿಯಲ್ಲಿ ತೊಡಗಿರುವ ನಾವೆಲ್ಲರೂ ಬಡತನ ರೇಖೆಗಿಂತ ಕೆಳಗಿದ್ದೇವೆ. ನಮಗೆ ಬಿಪಿಎಲ್ ಪಡಿತರ ಚೀಟಿ ಇಲ್ಲ. ಅಸಂಘಟಿತ ಕಾರ್ಮಿಕರ ಪಟ್ಟಿಯಲ್ಲಿ ನೋಂದಣಿಯನ್ನು ಮಾಡಿಸಿಲ್ಲ. ಹೀಗಾಗಿ ಸರಕಾರದ ಯಾವುದೇ ಸೌಲಭ್ಯ ಪಡೆಯುವಲ್ಲಿ ನಾವು ಸೋತಿದ್ದೇವೆ. ಈ ನಡುವೆ ಲಾಕ್‍ಡೌನ್‍ನಿಂದ ನಾವು ಮತ್ತಷ್ಟು ಸಂಕಷ್ಟಕ್ಕೆ ಸಿಲುಕಿದ್ದು ಸರಕಾರ ನಮ್ಮ ನೆರವಿಗೆ ಧಾವಿಸಬೇಕು'

-ನಂಜಪ್ಪ, ಅಧ್ಯಕ್ಷರು ರಾಜ್ಯ ಮಡಿವಾಳರ ಸಂಘ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News